ವಾಲ್ಮೀಕಿ ಸಮಾಜದ ಬೆಂಬಲದಿಂದ ಸರ್ಕಾರ ರಚನೆ ಸಾಧ್ಯ

| Published : Apr 21 2024, 02:19 AM IST

ಸಾರಾಂಶ

ವಾಲ್ಮೀಕಿ ಸಮಾಜದ ವಾಲಿದ ಕಡೆ ಸರ್ಕಾರ ಬರುತ್ತದೆ. ಒಂದು ಸರ್ಕಾರವನ್ನು ಉಳಿಸುವ, ತೆಗೆಯುವ ಶಕ್ತಿ ವಾಲ್ಮೀಕಿ ಸಮಾಜಕ್ಕಿದೆ.

ಕನ್ನಡಪ್ರಭ ವಾರ್ತೆ ತುಮಕೂರುವಾಲ್ಮೀಕಿ ಸಮಾಜದ ವಾಲಿದ ಕಡೆ ಸರ್ಕಾರ ಬರುತ್ತದೆ. ಒಂದು ಸರ್ಕಾರವನ್ನು ಉಳಿಸುವ, ತೆಗೆಯುವ ಶಕ್ತಿ ವಾಲ್ಮೀಕಿ ಸಮಾಜಕ್ಕಿದೆ. ಇಂತಹ ಶಕ್ತಿವಂತ ವಾಲ್ಮೀಕಿ ಸಮಾಜ ದೇಶದ ಸುಭದ್ರತೆಗಾಗಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಎನ್.ಡಿ.ಎ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮಾಜಿ ಶಾಸಕ, ರಾಜ್ಯ ಜೆಡಿಎಸ್ ಎಸ್.ಟಿ ಘಟಕ ಅಧ್ಯಕ್ಷ ರಾಜಾ ವೆಂಕಟಪ್ಪ ನಾಯಕ ಹೇಳಿದರು.ನಗರದಲ್ಲಿ ನಡೆದ ಬಿಜೆಪಿ, ಜೆಡಿಎಸ್‌ನ ಪರಿಶಿಷ್ಟ ಪಂಗಡಗಳ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜ ನೆಗಳಿಂದ ಜನರ ಬದುಕು ಉದ್ಧಾರವಾಗಲು ಸಾಧ್ಯವಿಲ್ಲ, ಜನಸಾಮಾನ್ಯರಿಗೆ ಅಗತ್ಯವಾದ ಶಿಕ್ಷಣ, ಆರೋಗ್ಯದ ಬಗ್ಗೆ ಸರ್ಕಾರ ಆದ್ಯತೆ ನೀಡಬೇಕು. ಅಂತಹ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು ಎಂದು ಹೇಳಿದರು.ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ಮೋದಿಯವರು ಮತ್ತೆ ಪ್ರಧಾನಿಯಾಗಲು ಎಸ್ಟಿ ಸಮಾಜ ನೆರವಾಗಬೇಕು ಎಂದು ರಾಜಾ ವೆಂಕಟಪ್ಪ ನಾಯಕ ಮನವಿ ಮಾಡಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ದಲಿತರ ಪರವಾಗಿದ್ದಾರೆ. ಅನೇಕ ದಲಿತ ಸಾಧಕರಿಗೆ ಪದ್ಮಭೂಷಣ, ಪದ್ಮವಿಭೂಣ ಪ್ರಶಸ್ತಿಗೆ ದೊರಕಲು ಕಾರಣರಾಗಿದ್ದಾರೆ. ಪರಿಶಿಷ್ಟ ಪಂಗಡದ ದ್ರೌಪದಿ ಮುರ್ಮ ಅವರಿಗೆ ಬಿಜೆಪಿ ದೇಶದ ರಾಷ್ಟ್ರಪತಿಯ ಗೌರವದ ಸ್ಥಾನ ನೀಡಿದೆ ಎಂದು ಹೇಳಿದರು. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲಾ ವರ್ಗದ ಜನಸ್ನೇಹಿ ನಾಯಕ, ಅಭಿವೃದ್ಧಿ ಚಿಂತಕ ವಿ.ಸೋಮಣ್ಣ ಅವರನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.

ಶಾಸಕ ಸುರೇಶ್‌ಗೌಡ ಮಾತನಾಡಿ, ಸರ್ಕಾರದ ಯೋಜನೆಗಳು ಜನರಿಗೆ ತಲುಪಿ ಅದರ ಪ್ರಯೋಜನವಾಗಬೇಕು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ವರ್ಗಕ್ಕೆ ಮೀಸಲಾದ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡಿದೆ. ಈ ವರ್ಗದವರಿಗೆ ಬೋರ್‌ವೆಲ್ ಕೊರೆಸಲಿಲ್ಲ, ಸ್ವಯಂ ಉದ್ಯೋಗಕ್ಕೆ ಯೋಜನೆ ರೂಪಿಸಲಿಲ್ಲ. ಗ್ಯಾರಂಟಿಗಳಿಗೆ ಜೋತುಬಿದ್ದಿರುವ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಜನರಿಗೆ ಮಕ್ಮಲ್ ಟೋಪಿ ಹಾಕುತ್ತಾ ಚುನಾವಣೆ ಗೆಲ್ಲಲು ಹೆಣಗಾಡುತ್ತಿದೆ. ಈ ಬಾರಿ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೋದಿಯವರು ಮತ್ತೆ ಪ್ರಧಾನಿಯಾಗುವುದು ಖಚಿತ ಎಂದರು.ರಾಜ್ಯ ಜೆಡಿಎಸ್ ಎಸ್ಟಿ ಘಟಕ ಉಪಾಧ್ಯಕ್ಷರಾದ ಸೋಲಾರ್ ಕೃಷ್ಣಮೂರ್ತಿ, ಅನಿಲ್‌ಕುಮಾರ್, ನಗರ ಪಾಲಿಕೆ ಮಾಜಿ ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಮಧುಗಿರಿ ಜಿಲ್ಲಾಧ್ಯಕ್ಷ ಮಂಜುನಾಥ್, ಮುಖಂಡರಾದ ವಿಜಯಕುಮಾರ್, ಅಣ್ಣಪ್ಪಸ್ವಾಮಿ, ಮೀನಹಳ್ಳಿ ತಾಯಣ್ಣ ನಾಯಕ, ಕುಂಭಣ್ಣ ಮೊದಲಾದವರು ಭಾಗವಹಿಸಿದ್ದರು.