ನರಸಿಂಹರಾಜಪುರ: ಸರ್ಕಾರ ಅವೈಜ್ಞಾನಿಕವಾಗಿ ಪಿಂಚಣಿದಾರರಿಗೆ ವಾರ್ಷಿಕ ₹32 ಸಾವಿರ ಆದಾಯದ ಮಿತಿ ಹೇರಿರುವುದನ್ನು ತಕ್ಷಣ ತೆಗೆದು ಹಾಕಬೇಕು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಸರ್ಕಾರವನ್ನು ಆಗ್ರಹಿಸಿದರು.
ಸೋಮವಾರ ತಾಲೂಕು ಕಚೇರಿ ಎದುರು ಜೆಡಿಎಸ್ ಪಕ್ಷದಿಂದ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಮುಂತಾದ ಪಿಂಚಣಿದಾರರಿಗೆ ವಾರ್ಷಿಕ ₹32 ಸಾವಿರ ಆದಾಯದ ಮಿತಿ ಹೇರಿರುವುದನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಬಡವರು ಬಿಪಿಎಲ್ ಕಾರ್ಡು ಇದ್ದರೆ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಪಡೆಯಬಹುದಿತ್ತು. ಬಿಪಿಎಲ್ ಕಾರ್ಡುದಾರರು ₹1 ಲಕ್ಷ 20 ಸಾವಿರ ರು. ವಾರ್ಷಿಕ ಆದಾಯ ಇದ್ದರೂ ಪಿಂಚಣಿ ಪಡೆಯಬಹುದಿತ್ತು. ಈಗ ಆ ಆದಾಯದ ಮಿತಿ ಕೇವಲ ₹32 ಸಾವಿರಕ್ಕೆ ಇಳಿಸಲಾಗಿದೆ. ರಾಜ್ಯದ 35 ಲಕ್ಷ ಸಂಧ್ಯಾ ಸುರಕ್ಷಾ ಪಂಚಣಿದಾರರಲ್ಲಿ ₹15 ಲಕ್ಷ ಪಿಂಚಣಿದಾರರು ವಜಾ ಆಗಲಿದ್ದಾರೆ. ಜಿಲ್ಲೆಯಲ್ಲಿ 86 ಸಾವಿರ ಸಂಧ್ಯಾ ಸುರಕ್ಷಾದಾರರಲ್ಲಿ 70 ಸಾವಿರ ಪಿಂಚಣಿದಾರರು ವಜಾ ಆಗಲಿದ್ದಾರೆ. ಕರ್ನಾಟಕದಲ್ಲಿ ವೃದ್ಧರಿಗೆ ₹1200 ಪಿಂಚಣಿ ಮಾತ್ರ ಬರಲಿದೆ. ಆದರೆ, ಪಕ್ಕದ ಆಂದ್ರ ರಾಜ್ಯದಲ್ಲಿ ₹4 ಸಾವಿರ ಪಿಂಚಣಿ ಬರುತ್ತಿದೆ .ಈಗಿನ ಸರ್ಕಾರದ ತೀರ್ಮಾನ ಅವೈಜ್ಞಾನಿಕವಾಗಿದೆ. ಗ್ರಾಮೀಣ ಭಾಗದ ರಸ್ತೆ ತುಂಬಾ ಹದಗೆಟ್ಟಿದೆ. ರಸಗೊಬ್ಬರದ ಸಮಸ್ಯೆ ಇದೆ. ಇಪ್ಕೋ ಗೊಬ್ಬರ ಸಿಗದೆ 4 ತಿಂಗಳಾಗಿದೆ.ಇಂದು ಸರ್ಕಾರದ ವಿರುದ್ದ ಸಾಕೇಂತಿಕ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದರು.ಜೆಡಿಎಸ್ ಪಕ್ಷದ ಮುಖಂಡ ಕಣಿವೆ ವಿನಯ ಮಾತನಾಡಿ ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ಪಿಂಚಣಿ ಪಡೆಯಲು ₹32 ಸಾವಿರ ರು. ಆದಾಯದ ಮಿತಿ ಹೇರಿರುವುದು ಹಾಸ್ಯಾಸ್ಪದ. ಇವತ್ತು ಬಿಕ್ಷೆ ಬೇಡುವವರ ಆದಾಯ 1 ಲಕ್ಷಕ್ಕಿಂತ ಜಾಸ್ತಿ ಇದೆ. ತಾಲೂಕು ಕಚೇರಿಯಲ್ಲಿ ವೃದ್ಧಾಪ್ಯ ವೇತನದ ಮಾಹಿತಿಯೇ ಸಿಗುತ್ತಿಲ್ಲ ಎಂದರು.
ಜೆಡಿಎಸ್ ಕಾರ್ಯಾಧ್ಯಕ್ಷ ಕೆ.ಶಿವದಾಸ್, ಸತ್ಯನಾರಾಯಣ ಶ್ರೇಷ್ಠಿ, ಸುಬಾನ್,ಸುಪ್ರೀತ್,ಮಡಬೂರು ಕೃಷ್ಣಮೂರ್ತಿ,ಪ್ರಪುಲ್ಲ, ಪಿಕಪ್ ಚಂದ್ರು, ಕೆ.ಟಿ.ಚಂದ್ರಶೇಖರ್,ತಿಮ್ಮೇಗೌಡ, ಶೆಟ್ಟಿಕೊಪ್ಪ ನವೀನ್, ಮೇಘರ್ಷ, ಹೂವಣ್ಣ, ಬೆಮ್ಮನೆ ಸುಬೋದ್, ಅಶ್ವತ್ತ ನಾರಾಯಣ, ಮಡಬೂರು ಸತೀಶ್, ಅಳರಳಿಕೊಪ್ಪ ಸತೀಶ್, ಉಪೇಂದ್ರ ಮತ್ತಿತರರು ಇದ್ದರು. ನಂತರ ತಹಶೀಲ್ದಾರ್ ಡಾ.ನೂರಲ್ ಹುದಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.