ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಎಸ್ಸೆಸ್ ಮಲ್ಲಿಕಾರ್ಜುನ

| Published : Aug 16 2024, 12:47 AM IST

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಎಸ್ಸೆಸ್ ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಡಿಸಿ ಜಿ.ಎಂ.ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ ಧ್ವಜವಂದನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ಜನ ಸಾಮಾನ್ಯರಿಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಟಾನಗೊಳಿಸುವ ಮೂಲಕ ಕೊಟ್ಟ ಮಾತಿನಂತೆ ತಮ್ಮ ಸರ್ಕಾರ ನಡೆದುಕೊಂಡಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ನಂತರ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿ, ಗ್ಯಾರಂಟಿ ಯೋಜನೆ ಜನತೆಗೆ ತಲುಪಿಸುವಲ್ಲಿ ಸರ್ಕಾರ ಯಶಸ್ವಿಯಾಗಿದ್ದು, ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡುತ್ತಿದ್ದು, ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.

ಕಳೆದ ವರ್ಷಕ್ಕಿಂತ ಈ ಸಲ ಅಧಿಕ ಮಳೆಯಾಗಿದ್ದು, ರೈತರಲ್ಲಿ ಮುಂಗಾರು ಆಶಾಭಾವನೆ ತಂದಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ, ಔಷಧಿಗೆ ಕೊರತೆಯಾಗದಂತೆ ಕ್ರಮ ಕೈಗೊಂಡಿದೆ. ಜಿಲ್ಲೆ ಜೀವನಾಡಿ ಭದ್ರಾ ಅಣೆಕಟ್ಟೆ ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದರಿಂದ ಜಿಲ್ಲೆಯ ರೈತರ ಆರ್ಥಿಕ ಸ್ಥಿತಿಗತಿ ಮತ್ತಷ್ಟು ಉತ್ತಮವಾಗಲಿದೆ. ತುಂಗಾಭದ್ರಾ ನದಿಯಿಂದ ಹರಿಹರ ತಾ. ದೀಟೂರು ಬಳಿ ಏತ ನೀರಾವರಿ ಮೂಲಕ ಜಗಳೂರು ತಾಲೂಕಿನ 51 ಕೆರೆ ತುಂಬಿಸುವ ಯೋಜನೆಯಲ್ಲಿ 31 ಕೆರೆಗೆ ನೀರು ಹರಿಸಲಾಗುತ್ತಿದೆ. ಉಳಿದ ಕೆರೆಗೂ ನೀರು ಹರಿಸುವ ಕಾಮಗಾರಿ ಸಾಗಿದೆ ಎಂದರು.

ಹೊನ್ನಾಳಿ ತಾಲೂಕಿನ 23 ಕೆರೆ, ಹರಿಹರ ತಾಲೂಕಿನ ಒಂದು ಕೆರೆ ತುಂಬಿಸಲು ₹52 ಕೋಟಿ ವೆಚ್ಚದ ಯೋಜನೆ, ಹೊನ್ನಾಳಿ-ನ್ಯಾಮತಿ ತಾಲೂಕಿನ 26 ಕೆರೆಗಳಿಗೆ ನೀರು ತುಂಬಿಸಲು ₹100 ಕೋಟಿ ವೆಚ್ಚದ ಯೋಜನೆ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕುಗಳ ಒಟ್ಟು 96 ಗ್ರಾಮಗಳ 102 ಕೆರೆ ತುಂಬಿಸಲಾಗುತ್ತಿದೆ. ಇದರ ಕಾಮಗಾರಿ ಬಹುತೇಕ ಪೂರ್ಣ ಆಗಿದ್ದು, ಅಂತಿಮ ಹಂತದಲ್ಲಿದೆ. ಈ ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.

ಜಿಲ್ಲೆಯ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಉದ್ಯೋಗ ಖಾತರಿಯಡಿ 13.32 ಮಾನವ ದಿನಗಳನ್ನು ಸೃಜಿಸಿ, 46.220 ಕುಟುಂಬಗಳಿಗೆ ಕೆಲಸ ಕೊಟ್ಟು, ₹44.85 ಕೋಟಿ ನೀಡಲಾಗಿದೆ. ಕಾಲುವೆಗಳಲ್ಲಿನ ಹೂಳು ತೆಗೆಯುವ ಕಾಮಗಾರಿ ಕೈಗೊಳ್ಳಲಾಗಿದೆ. ನಗರ, ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸದಡಿ ₹200 ಕೋಟಿ ಮತ್ತು ನಗರೋತ್ಥಾನ 4ರಲ್ಲಿ ₹59.50 ಕೋಟಿ ರು.ವೆಚ್ಚದ ಕಾಮಗಾರಿ ಕೈಗೊಂಡು, ವಿವಿಧ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ತೋಟಗಾರಿಕೆಯಲ್ಲಿ ದಾವಣಗೆರೆ ಜಿಲ್ಲೆ ಮುಂಚೂಣಿಯಲ್ಲಿದ್ದು, 1 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ವಿವಿಧ ತೋಟದ ಬೆಳೆ ಬೆಳೆಯಲಾಗುತ್ತಿದೆ. ಸಮಗ್ರ ತೋಟಗಾರಿಕಾ ಅಭಿವೃದ್ಧಿಯಡಿ ₹5 ಕೋಟಿ ಅನುದಾನದಲ್ಲಿ ದಾವಣಗೆರೆ ನಗರದ 10 ಉದ್ಯಾನವನ ನಿರ್ಮಿಸಲು ಯೋಜಿಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಉಪ ಖನಿಜ ರಿಯಾಯಿತಿ ನಿಯಮಗಳನ್ನು ಮತ್ತಷ್ಟು ಸರಳೀಕರಿಸಿ, ಸುಲಭವಾಗಿ ಜನರಿಗೆ ಮರಳು ಮತ್ತು ಎಂ ಸ್ಯಾಂಡ್ ದೊರಕುವಂತೆ ಕ್ರಮ ವಹಿಸಲಾಗುವುದು ಎಂದರು.

ದಾವಣಗೆರೆ ಜಿಲ್ಲಾಸ್ಪತ್ರೆ ದುರಸ್ತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಹಂತ ಹಂತವಾಗಿ ಹೊಸ ಬ್ಲಾಕ್ ನಿರ್ಮಿಸಲು ಆರೋಗ್ಯ ಸಚಿವರಿಗೆ ಅನುದಾನಕ್ಕಾಗಿ ಚರ್ಚಿಸಿದ್ದು, ಶೀಘ್ರವೇ ಇದು ಸಾಕಾರಗೊಳ್ಳಲಿದೆ. ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಡೆಂಘೀ ವಾರ್ ರೂಂ ಸ್ಥಾಪಿಸಿ, ಡೆಂಘೀ ರೋಗ ನಿಯಂತ್ರಣ, ಜ್ವರ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಾರ್ವಜನಿಕರು ಸಹ ಡೆಂಘೀ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೂಚನೆ ಪಾಲಿಸಬೇಕು ಎಂದು ಮನವಿ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯಿಂದ 2 ಕಾಲೇಜು ಹಾಸ್ಟೆಲ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 8 ಕಾಲೇಜು ಹಾಸ್ಟೆಲ್‌ ಹೊಸದಾಗಿ ಮಂಜೂರಾಗಿವೆ. ಕಟ್ಟಡ ನಿರ್ಮಾಣಕ್ಕೆ ನಿವೇಶನ, ಕಟ್ಟಡ ಕಟ್ಟಲು ಅನುದಾನ ಸಹ ನೀಡಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ಬಾಲಕರ 4, ಬಾಲಕಿಯರ 3 ಹಾಸ್ಟೆಲ್‌ನಲ್ಲಿ ಒಟ್ಟು 525 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗಿದೆ. 4 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, 1 ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಕಾಲೇಜು, 2 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪಿಯು ಕಾಲೇಜುಗಳಿದ್ದು, ಒಟ್ಟು 1880 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಲ್ಲದೇ, 5 ಮೌಲಾನ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ 1500 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ.ಕೆ.ಶೆಟ್ಟಿ, ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್‌, ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ಬಿ.ರಮೇಶ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ, ಜಿಪಂ ಸಿಇಓ ಸುರೇಶ.ಬಿ.ಇಟ್ನಾಳ್, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್‌, ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಸವಿತಾ ಹುಲ್ಮನಿ ಗಣೇಶ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ, ಆಯುಕ್ತೆ ರೇಣುಕಾ, ದೂಡಾ ಆಯುಕ್ತ ಹುಲ್ಮನಿ ತಿಮ್ಮಪ್ಪ, ಸೇರಿ ಅಧಿಕಾರಿಗಳು, ಜನ ಪ್ರತಿನಿಧಿಗಳು ಇದ್ದರು.

ಆಕರ್ಷಕ ಪಥ ಸಂಚಲನ:

ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನದಲ್ಲಿ ಒಟ್ಟು 31 ತಂಡ ಪಾಲ್ಗೊಂಡಿದ್ದವು. ಆರ್‌ಎಸ್ಐ ಮಹೇಶ ಪಾಟೀಲ್ ನೇತೃತ್ವದ ಡಿಎಆರ್‌ ತಂಡ, ನಗರ ಉಪ ವಿಭಾಗದ ಸಚಿನ್‌ ಬಿರಾದಾರ್ ತಂಡ, ಗ್ರಾಮಾಂತರ ಉಪವಿಭಾಗದ ಪೊಲೀಸ್ ಶೀಪತಿ ಗಿನ್ನಿ ತಂಡ, ಗೃಹರಕ್ಷಕ ದಳದ ಹಾಲೇಶ, ಅಗ್ನಿ ಶಾಮಕದಳ ಪರುಶುರಾಮಪ್ಪ, ಡಿ.ಆರ್.ಎಂ. ಕಾಲೇಜಿನ ಡಿ.ಕೆ.ಶರನಿಲ್, ಎಆರ್‌ಜಿ ಕಾಲೇಜಿನ ಎಂ.ಎ.ಚಿನ್ಮಯ, ಜಿಎಫ್‌ಜಿಸಿ ಕಾಲೇಜಿನ ಗಗನದೀಪ್, ಜಿಎಂಐಟಿ ಕಾಲೇಜಿನ ಶಶಾಂಕ್, ಎವಿಕೆ ಕಾಲೇಜಿನ ವೀಣಾ, ಡಿಆರ್‌ಆರ್ ಕಾಲೇಜಿನ ಮೊಹಮ್ಮದ್ ರಿಹಾನ್, ಸೇಂಟ್ ಫಾಲ್ಸ್ ಸ್ಕೂಲ್‍ನ ಗೌತಮಿ, ಪಿಎಸ್ಎಸ್‌ಇಎಂಆರ್ ತೋಳಹುಣಸೆ ಬಿ.ಎನ್‌. ಶ್ರವಣ್, ಪೊಲೀಸ್ ಪಬ್ಲಿಕ್ ರೆಸಿಡೆನ್ಷಿಯಲ್ ಸ್ಕೂಲ್‍ನಿಂದ ಸುಜಯ್ ಎಸ್.ಗೌಡ, ಸಿದ್ದೇಶ್ವರ ಸ್ಕೂಲ್ ಆನಗೋಡು ಸಿದ್ದೇಶ, ಸಿದ್ದಗಂಗಾ ಪಿಯು ಕಾಲೇಜಿನ ಜಿ.ಆರ್.ಮುರಾರಿ, ಬಾಪೂಜಿ ಹೈಸ್ಕೂಲ್‌ನ ಸನಿಕಾ, ಸಿದ್ದಗಂಗಾ ಶಾಲೆಯ ಸಿದ್ದೇಶ, ಸಿದ್ದಗಂಗಾ ಸ್ಕೂಲ್ ಎಸ್‌ಪಿಸಿ ಗರ್ಲ್ಸ್‌ ಟ್ರೂಪ್‍ನಿಂದ ರೋಷನಿ, ಸೇಂಟ್ ಫಾಲ್ಸ್ ಸೆಂಟ್ರಲ್ ಸ್ಕೂಲ್ ಗರ್ಲ್ ಟ್ರೂಪ್‍ ಶ್ರೀಲೇಖ, ಭಾರತ ಸ್ಕೌಟ್ ಅಂಡ್ ಗೈಡ್ಸ್ ಡಿಸ್ಟ್ರಿಕ್ಟ್ ಟ್ರೂಪ್‍ನಿಂದ ಮಾನಸ ಡಿ, ಎಕ್ಸ್ ಮುನ್ಸಿಪಾಲ್ ಬಾಯ್ ಹೈಸ್ಕೂಲ್‍ನಿಂದ ಜುನೈದ್ ಅಹಮದ್ , ಜೈನ್ ಪಬ್ಲಿಕ್ ಸ್ಕೂಲ್‍ನಿಂದ ಪೃಥ್ವಿ ಎಸ್.ಬಿ , ಸರ್ಟಿಪೈಡ್ ಸ್ಕೂಲ್‍ನಿಂದ ಪುನೀತ್, ಮೌನೇಶ್ವರ ಡಪ್ ಅಂಡ್ ಡಂಬ್ ಸ್ಕೂಲ್‍ನಿಂದ ತಿಪ್ಪೇಸ್ವಾಮಿ, ಗಾಮೆರ್ಂಟ್ ಬಾಯ್ಸ್ ಸ್ಕೂಲ್‍ನಿಂದ ಓಂಕಾರ್, ಪುಷ್ಪ ಮಹಾಲಿಂಗಪ್ಪ ಸ್ಕೂಲ್‍ನಿಂದ ನಿರಂತರ , ಸೇಂಟ್ ಜಾನ್ಸ್ ಇಂಗ್ಲೀಷ್‌ ಮೀಡಿಯಂ ಹೈಸ್ಕೂಲ್‍ನಿಂದ ಗೀತಾಂಜಲಿ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹೈಸ್ಕೂಲ್‍ನಿಂದ ತನ್ಮಯ, ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಬ್ಯಾಂಡ್ ಮಿಥುನ ಬಿದರಿ ತಂಡ ಪಥ ಸಂಚಲನದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದವು.

ಜಿಲ್ಲಾ ಪೊಲೀಸ್ ವಾದ್ಯ ವೃಂದ ಬ್ಯಾಂಡ್ ಮಾಸ್ಟರ್ ಪುರಂದರ ನಾಯ್ಕ ತಂಡದಿಂದ ರಾಷ್ಟ್ರಗೀತೆ ಸಹಿತ ವಾದ್ಯವನ್ನು ಪ್ರಸ್ತುತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿನಿಯರು ನಾವು ಭಾರತೀಯರು ದೇಶಭ್ತಕಿ ಗೀತೆಗೆ ನೃತ್ಯ ರೂಪಕ ಪ್ರದರ್ಶನ ನೀಡಿದರು. ರಾಜನಹಳ್ಳಿ ಸೀತಮ್ಮ ಸರ್ಕಾರಿ ಪ್ರೌಢಶಾಲೆ, ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಹಾಗೂ ಪದವಿ ಪೂರ್ವ ಕಾಲೇಜು, ಜೈನ್ ವಿದ್ಯಾಲಯದಿಂದ ಆಕರ್ಷಕ ಸಾಂಸ್ಕೃಸ್ಕತಿಕ ಕಾರ್ಯಕ್ರಮ ಪ್ರದರ್ಶನ ಏರ್ಪಡಿಸಲಾಗಿತ್ತು.ಜಿಲ್ಲೆಯಲ್ಲಿ ಗ್ಯಾರಂಟಿಗಳ ಪ್ರಗತಿ :

ಶಕ್ತಿ ಯೋಜನೆಯಡಿ ಈವರೆಗೆ ₹662 ಕೋಟಿ, ಅನ್ನಭಾಗ್ಯದಡಿ 10 ಕೆಜಿ ಅಕ್ಕಿಯಲ್ಲಿ 5 ಕೆಜಿಗೆ ನಗದು ಪಾವತಿಸಿದ್ದು, ಇದಕ್ಕಾಗಿ ಜಿಲ್ಲೆಯ 3.41 ಲಕ್ಷ ಪಡಿತರದಾರರಿಗೆ ಪ್ರತಿ ತಿಂಗಳು ₹19.66 ಕೋಟಿ ರು.ನಂತೆ ಈವರೆಗೆ ₹228 ಕೋಟಿ ಪಾವತಿಸಿದೆ. ಗೃಹಜ್ಯೋತಿಯಡಿ 4.27 ಲಕ್ಷ ಗ್ರಾಹಕರ ವಿದ್ಯುತ್ ಬಿಲ್ ಪಾವತಿಗಾಗಿ ₹282 ಕೋಟಿ ನೀಡಲಾಗಿದೆ. ಗೃಹಲಕ್ಷ್ಮಿ 3.55 ಲಕ್ಷ ಯಜಮಾನಿಯರಿಗೆ ಜೂನ್‌ವರೆಗೆ ₹662 ಕೋಟಿ ಪಾವತಿಸಿದೆ. ಯುವನಿಧಿಯಡಿ 9035 ಪದವಿ, ಡಿಪ್ಲೊಮಾ ನಿರುದ್ಯೋಗ ಭತ್ಯೆಯಾಗಿ ₹2.70 ಕೋಟಿ ನೀಡಲಾಗಿದೆ. ಇದು ನಮ್ಮ ದಾವಣಗೆರೆ ಜಿಲ್ಲೆಯ ಗ್ಯಾರಂಟಿ ಪ್ರಗತಿಯಾಗಿದೆ ಎಂದು ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಹೇಳಿದರು.ಮೂರು ಶತಮಾನಗಳ ನಿರಂತರ ಹೋರಾಟ, ಲಕ್ಷಾಂತರ ಜನರ ತ್ಯಾಗ, ಬಲಿದಾನದದಿಂದ ಆಂಗ್ಲರ ದಾಸ್ಯದಿಂದ ಭಾರತ ಸ್ವಾತಂತ್ರ್ಯಗೊಂಡಿತು. ಅಸಂಖ್ಯಾತ ಹೋರಾಟಗಾರರ ಪರಿಶ್ರಮವೇ ಇಂದಿನ ಸ್ವಾತಂತ್ರ್ಯವಾಗಿದೆ. ಅಂತಹ ಮಹನೀಯರನ್ನು ಸ್ಮರಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ. ಭಾರತ ಬಿಟ್ಟು ತೊಲಗಿ ಹೋರಾಟದಲ್ಲಿ ದಾವಣಗೆರೆ ಕೊಡುಗೆಯೂ ದೊಡ್ಡದಿದೆ. ಇಲ್ಲಿನ ಹಿರಿಯರಾದ ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರುಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪನಂತಹ ಹೋರಾಟಗಾರರು ಬ್ರಿಟೀಷರ ಗುಂಡಿಗೆ ಪ್ರಾಣಾರ್ಪಣೆ ಮಾಡಿ, ಹುತಾತ್ಮರಾದರು. ಅಂತಹ ಎಲ್ಲರಿಗೂ ಗೌರವ ನಮನ ಸಲ್ಲಿಸೋಣ.

ಎಸ್.ಎಸ್.ಮಲ್ಲಿಕಾರ್ಜುನ. ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ