ಸಾರಾಂಶ
ಚನ್ನಪಟ್ಟಣ: ಸರ್ಕಾರಿ ಅಧಿಕಾರಿಗಳನ್ನು ನಾನು ಗುಲಾಮರು ಎಂದು ಕರೆದಿಲ್ಲ. ಸಮಾಜಸೇವೆ ಮಾಡುವ ನಿಟ್ಟಿನಲ್ಲಿ ಅವರು ಈ ವೃತ್ತಿ ಆರಿಸಿಕೊಂಡಿದ್ದಾರೆ. ಆದರೆ, ಇಲ್ಲಿನ ಮಾಜಿ ಶಾಸಕರು ಅಧಿಕಾರಿಗಳನ್ನು ಗುಲಾಮರು ಎಂದಿದ್ದಾರೆ. ಇದಕ್ಕೆ ಒಬ್ಬ ಸರ್ಕಾರದ ಪ್ರತಿನಿಧಿಯಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರೋಕ್ಷ ಟಾಂಗ್ ನೀಡಿದರು.
ತಾಲೂಕಿನ ಬೇವೂರು ಗ್ರಾಮದಲ್ಲಿ ಮನೆಬಾಗಿಲಿಗೆ ಸರ್ಕಾರ ಇರಲಿ ನಿಮ್ಮ ಸಹಕಾರ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಕೆಲಸ ದೇವರ ಕೆಲಸ, ಸರ್ಕಾರಿ ಕಚೇರಿ ದೇವಾಲಯವಿದ್ದಂತೆ, ಜನಸೇವೆಯೇ ಜನಾರ್ಧನ ಸೇವೆ. ಆದರೆ, ಇಲ್ಲಿನ ಮಾಜಿ ಶಾಸಕರು ನಿಮ್ಮನ್ನು ಗುಲಾಮರು ಎಂದು ಕರೆದಿದ್ದಾರೆ. ಅದಕ್ಕೆ ನಾನು ಕ್ಷಮೆ ಕೋರುತ್ತೇನೆ. ಆ ಕುರಿತು ಟೀಕೆ ಮಾಡಲು ಹೋಗುವುದಿಲ್ಲ ಎಂದರು.ನಿಮ್ಮಂತೆಯೇ ನಾನು ಸರ್ಕಾರಿ ನೌಕರ, ನಾನು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಸಂವಿಧಾನದ ಅನ್ವಯ ಸರ್ಕಾರಿ ನೌಕರರೇ. ನಾವು ಸರ್ಕಾರಕ್ಕೆ ಕೆಲಸ ಮಾಡಬೇಕು. ನೊಂದ ಜನಕ್ಕೆ ಸಹಾಯ ಮಾಡಲು ನಮಗೂ ನಿಮಗೂ ವೇತನ ನೀಡಲಾಗುತ್ತದೆ. ನಮ್ಮ ಬೇಡಿಕೆಗಳನ್ನು ಹೊತ್ತು ದೇವಸ್ಥಾನಗಳಿಗೆ ಹೋಗುತ್ತೇವೆ. ಸರ್ಕಾರಿ ಕಚೇರಿ ಸಹ ದೇವಾಲಯವಿದ್ದಂತೆ. ಜನರ ಕೆಲಸ ಮಾಡಲು ಅಧಿಕಾರಿಗಳಿಗೂ ಹಾಗೂ ನಮಗೂ ದೇವರೇ ಅವಕಾಶ ನೀಡಿದ್ದಾನೆ ಎಂದರು.
ಹಿಂದಿನ ಶಾಸಕರು ಏನು ಮಾಡಿದ್ದಾರೋ ಗೊತ್ತಿಲ್ಲ: ನಿಮ್ಮ ಕೆಲಸ ಮಾಡಲು ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಹಿಂದಿನ ಶಾಸಕರು ಏನು ಮಾಡಿದರೋ ಇಲ್ಲವೋ ಆ ಕುರಿತು ನಾನು ತಲೆ ಕೆಡಿಸಿಕೊಳ್ಳಲ್ಲ. ಅದು ಅವರ ಕರ್ತವ್ಯ, ಅವರು ನಿಮ್ಮೆಲ್ಲರ ಹೃದಯ ಗೆದ್ದು ಬಂದಿದ್ದರು. ಆದರೆ, ನಾನು ನಿಮ್ಮ ಹೃದಯ ಗೆಲ್ಲಬೇಕಾದರೆ ಶ್ರಮಪಡಬೇಕು. ನಿಮ್ಮ ಕೆಲಸ ಮಾಡಬೇಕು. ನಿಮ್ಮ ಕೈಬಲಪಡಿಸಬೇಕು. ನಿಮಗೆ ಆರ್ಥಿಕವಾಗಿ ಶಕ್ತಿ ತುಂಬಬೇಕು. ಈ ಹಿನ್ನೆಲೆಯಲ್ಲಿಯೇ ನಿಮ್ಮ ಮನೆಬಾಗಿಲಿಗೆ ಬಂದಿದ್ದೇವೆ. ಇದನ್ನು ಹೊಸದಾಗಿ ಏನು ಮಾಡಿಲ್ಲ, ಕನಕಪುರ, ರಾಮನಗರ, ಬೆಂಗಳೂರಿನಲ್ಲಿ ಮಾಡಿದ್ದು, ಇಲ್ಲೂ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇಲ್ಲಿನವರಿಗೆ ಆಸಕ್ತಿ ಇಲ್ಲದ ಕಾರಣ ಮಾಡಿಲ್ಲ ಎಂದು ಎಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.ಇನ್ನು ನಾಲ್ಕು ವರ್ಷ ಅಧಿಕಾರ:
ಇಂದು ಇಲ್ಲಿ ಪಡೆದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಸವಲತ್ತು ತಲುಪಿಸಲು ಕ್ರಮ ಕೈಗೊಳ್ಳಲಾಗುವುದು. ಇದನ್ನು ಆದಷ್ಟು ಶೀಘ್ರದಲ್ಲೇ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಉಪಚುನಾವಣೆ ಘೋಷಣೆಯಾದರೆ ಸ್ವಲ್ಪ ತಡವಾಗಬಹುದು. ನಮ್ಮ ಸರ್ಕಾರ ರಾಜ್ಯದಲ್ಲಿ ಇನ್ನು ನಾಲ್ಕು ವರ್ಷ ಇರಲಿದ್ದು, ಆದಷ್ಟು ಬೇಗ ಇಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಈ ಬಾರಿಯ ಉಪಚುನಾವಣೆಯಲ್ಲಿ ನಿಮ್ಮ ಶಾಸಕರು ಆಯ್ಕೆಯಾಗುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.ಲಂಚ ಕೇಳಿದರೆ ಅಮಾನತ್ತು:
ಸಾಲ, ಸೌಲಭ್ಯ, ನಿವೇಶನ, ವಸತಿ, ರಸ್ತೆ, ಸ್ಮಶಾನ, ಅಂತರ್ಜಲ ಹೆಚ್ಚಿಸುವ ಬೇಡಿಕೆ, ಪಿಂಚಣಿ, ಬರ ಪರಿಹಾರಕ್ಕಾಗಿ, ಪೋಡಿ, ಖಾತೆ ಬದಲಾವಣೆ ಕುರಿತಾಗಿ ಇದೂವರೆಗೂ ಸುಮಾರು ಮೂರು ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಅಧಿಕಾರಿಗಳು ಪರಿಶೀಲಿಸಿ ಅವರ ಸಮಸ್ಯೆಗೆ ಪರಿಹಾರ ನೀಡಬೇಕು. ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಕುಂದುಕೊರತೆ ಪರಿಹರಿಸಲು ಲಂಚ ಪಡೆಯುತ್ತಿರುವ ಕುರಿತು ಕರೆ ಬಂದರೆ ಅವರನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ರೈತರಿಗೆ ಯಾವುದೇ ವೇತನ, ಪಿಂಚಣಿ ಸೌಲಭ್ಯವಿಲ್ಲ, ಅವರಿಗೆ ನಿವೃತ್ತಿ ಇರುವುದಿಲ್ಲ. ಅವರು ತಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಪಕ್ಷ ನೋಡಿ ಪರಿಹಾರ ನೀಡುತ್ತಿಲ್ಲ. ಸಂಕೋಚ ಬಿಟ್ಟು ಅರ್ಜಿ ಸಲ್ಲಿಸಿ, ತಾವೇ ಖುದ್ದು ತಾಲೂಕು ಕಚೇರಿಗೆ ತೆರಳಿ ತಮ್ಮ ಸಮಸ್ಯೆ ಕುರಿತು ಅರ್ಜಿ ನೀಡಿ. ಅಧಿಕಾರಿಗಳು ಈ ಅರ್ಜಿಗಳನ್ನು ಪರಿಶೀಲಿಸಿ ತಮ್ಮ ಸಮಸ್ಯೆಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ನೀಡುತ್ತಾರೆ ಎಂದರು.
ಜನರಿಗೆ ಹಲವು ನಿಗಮಗಳಿಂದ ಒಂದು ಲಕ್ಷದವರೆಗೆ ಸಾಲ ಸೌಲಭ್ಯ ನೀಡುವ ಅವಕಾಶವಿದೆ. ಸಬ್ಸಿಡಿ ರೂಪದಲ್ಲಿ ಸಾಲ ನೀಡಲು ಅವಕಾಶವಿದೆ. ಜನರ ಅಭಿವೃದ್ಧಿಗಾಗಿ ಸರ್ಕಾರ ಸದಾ ಬದ್ಧ. ಜನರು ಈ ಅವಕಾಶವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದರು.ನಿವೇಶನ ಹಂಚಿಕೆ ಮಾಡಲು ಸ್ಥಳ ಗುರುತಿಸಲಾಗುತ್ತಿದೆ. ಸರ್ಕಾರಿ ಸ್ಥಳ ಸಿಗದಿದ್ದರೆ ಖಾಸಗಿಯಾಗಿ ಖರೀದಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ವಿದ್ಯಾವಂತ ಯುವಕರಿದ್ದಾರೆ. ಅಂತರ್ಜಲವಿದೆ, ಹಲವು ಬೆಳೆ ಬೆಳೆಯುತ್ತಿದ್ದಾರೆ. ಹೈನುಗಾರಿಕೆಯಿದೆ, ಇದನ್ನೆಲ್ಲ ಉಪಯೋಗಿಸಿಕೊಂಡು ಜನರು ಅಭಿವೃದ್ಧಿಯಾಗಬೇಕು. ಸರ್ಕಾರದ ವತಿಯಿಂದ ಪಂಚ ಗ್ಯಾರಂಟಿ ಯೋಜನೆಯಡಿ ಹಲವು ಸೌಲಭ್ಯ ನೀಡಲಾಗುತ್ತಿದೆ ಎಂದರು.
೨೦೦ ಕೋಟಿ ವಿಶೇಷ ಅನುದಾನ:ಜಿಲ್ಲೆಯಲ್ಲಿ ಸಿಎಸ್‌ಆರ್ ಮಾದರಿಯಲ್ಲಿ ಹಲವು ಶಾಲೆಗಳ ನಿರ್ಮಾಣವಾಗಿದೆ. ಖಾಸಗಿಯವರ ನೆರವಿನಿಂದಲೂ ಈ ಶಾಲೆಗಳ ನಿರ್ಮಾಣಕ್ಕೆ ಸಹಕಾರವಿದೆ. ಇದೊಂದು ಐತಿಹಾಸಿಕ ಕೆಲಸವಾಗಿದೆ. ೧೫೦-೨೦೦ ಕೋಟಿ ರೂ.ಗಳ ವಿಶೇಷ ಅನುದಾನದಿಂದ ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಕೊಡುಗೆ ಏನು ಎಂಬುದು ಈಗಾಗಲೇ ಜನರಿಗೆ ತಿಳಿದಿದೆ. ಜನರ ಸೇವೆ ಮಾಡಲು ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಜನರ ಆರ್ಶೀವಾದ ಇರಲಿ, ಅವರ ಸೇವೆಗೆ ಸರ್ಕಾರ ಸದಾ ಬದ್ಧವಾಗಿರುತ್ತದೆ. ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು. ಜನರಿಂದ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸುವ ಯತ್ನ ಮಾಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಪುಟ್ಟಣ್ಣ, ರಾಮೋಜಿ ಗೌಡ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಅಶ್ವತ್ಥ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್ಪಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ , ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಯೋಜನಾ ಪ್ರಾಧಿಕಾರಿದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಬೇವೂರು ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ನಾಗವಾರ ಗ್ರಾಪಂ ಅಧ್ಯಕ್ಷ ಹರೀಶ್ ಕುಮಾರ್ ಇತರರಿದ್ದರು.
ಬಾಕ್ಸ್..............ನಮ್ಮದು ಭಕ್ತ-ಭಗವಂತನ ಸಂಬಂಧ
ನನ್ನ ಕೊಡುಗೆ ಏನೆಂಬುದು ಯಾರು ಬೇಕಾದರೂ ಪ್ರಶ್ನಸಿಕೊಳ್ಳಲಿ, ನೀವುಂಟು ನಾನುಂಟು. ನನ್ನ ಹಾಗೂ ನಿಮ್ಮ ಸಂಬಂಧ ಭಕ್ತ ಹಾಗೂ ಭಗವಂತನ ಸಂಬಂಧವಿದ್ದಂತೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.ಭಗವಂತನ ಸೇವೆ ಮಾಡಬೇಕು ಎಂಬ ದೃಷ್ಟಿಯಿಂದ ನಾನಿಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ನಮ್ಮ ಅಧಿಕಾರಿಗಳು ನಾನು ನಿಂತು ನಿಮ್ಮ ಸೇವೆ ಮಾಡುತ್ತೇವೆ ಅದಕ್ಕೆ ಅವಕಾಶ ನೀಡಿ. ನಿಮ್ಮನ್ನು ನೋಡಿದರೆ ಏನೋ ನೋವಿನಿಂದ ನೀವು ಬಳಲಿದ್ದೀರಾ, ಬರೀ ಆಶ್ವಾಸನೆಯಲ್ಲೇ ಬದುಕಿದ್ದಾರಾ ಎನ್ನಿಸುತ್ತಿದೆ. ಆದರೆ, ನಾವು ಯಾವುದೇ ಆಶ್ವಾಸನೆ ನೀಡದೇ ನಿಮ್ಮ ಸೇವೆ ಮಾಡಲು ಬಂದಿದ್ದೇವೆ ಎಂದರು.
( ಒಂದು ಫೋಟೋ ಮಾತ್ರ ಸಾಕು)ಪೊಟೋ೨೬ಸಿಪಿಟಿ೧:
ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.ಪೊಟೋ೨೬ಸಿಪಿಟಿ೨:
ಚನ್ನಪಟ್ಟಣ ತಾಲೂಕಿನ ಬೇವೂರು ಗ್ರಾಮದಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ನಾಡಗೀತೆಗೆ ಅತಿಥಿಗಳು ಎದ್ದು ನಿಂತು ಗೌರವ ಸಲ್ಲಿಸಿದರು.