ಸಾರಾಂಶ
ಸಂಪತ್ ತರೀಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರುಕಳೆದ ಏಳು ವರ್ಷಗಳ ಹಿಂದೆ ಕೋವಿಡ್-19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಲಾ ಪ್ರತಿಭೋತ್ಸವ ಪುನರ್ ಆರಂಭಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದ್ದು, 2025-26ನೇ ಸಾಲಿನಲ್ಲಿ ಕಲಾ ಪ್ರತಿಭೋತ್ಸವ ಆಯೋಜಿಸಲು ಸಿದ್ಧತೆ ನಡೆಸಿದೆ.
ಜಿಲ್ಲಾ ಮಟ್ಟ ಮತ್ತು ವಿಭಾಗೀಯ ಮಟ್ಟದಲ್ಲಿ ಕಲಾಪ್ರತಿಭೋತ್ಸವ ಆಯೋಜನೆ ಮಾಡಲು ರಾಜ್ಯ ಸರ್ಕಾರ ಸುಮಾರು 82.80 ಲಕ್ಷ ರು. ಬಿಡುಗಡೆಗೆ ಅನುಮೋದನೆ ನೀಡಿದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ಅಕ್ಟೋಬರ್‌ನಲ್ಲಿ ಜಿಲ್ಲಾ ಮಟ್ಟದ ಮತ್ತು ನವೆಂಬರ್ ಅಂತ್ಯದೊಳಗೆ ವಿಭಾಗೀಯ ಮಟ್ಟದ ಕಲಾಪ್ರತಿಭೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್‌ನಲ್ಲಿ ರಾಜ್ಯಮಟ್ಟದ ಕಲಾಪ್ರತಿಭೋತ್ಸವ ಆಯೋಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರ್ಗಿ ವಿಭಾಗೀಯ ಮಟ್ಟದಲ್ಲಿ ಕಲಾಪ್ರತಿಭೋತ್ಸವ ಆಯೋಜನೆಗೆ ಒಟ್ಟಾರೆ 14.60 ಲಕ್ಷ ರು. ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಲಿದೆ. ಹಾಗೆಯೇ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಪ್ರತಿ ಜಿಲ್ಲೆಗೆ ಎಷ್ಟು ಅನುದಾನ ನಿಗದಿಪಡಿಸಬೇಕೆಂಬ ಕುರಿತು ಈಗಾಗಲೇ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
3 ಹಂತದಲ್ಲಿ ಕಲಾಪ್ರತಿಭೋತ್ಸವ:ಮೂರು ಹಂತದಲ್ಲಿ ನಡೆಯಲಿರುವ ಕಲಾಪ್ರತಿಭೋತ್ಸವ ತಲಾ ಎರಡು ದಿನಗಳ ಕಾಲ ನಡೆಯಲಿದೆ. ಈ ಉತ್ಸವವನ್ನು ಬಾಲ ಪ್ರತಿಭೆ(8 ವರ್ಷ ತುಂಬಿರಬೇಕು ಹಾಗೂ 14 ವರ್ಷಕ್ಕಿಂತ ಕಡಿಮೆಯಿರಬೇಕು), ಕಿಶೋರ ಪ್ರತಿಭೆ (14 ವರ್ಷ ತುಂಬಿರಬೇಕು-18 ವರ್ಷಕ್ಕಿಂತ ಕಡಿಮೆ ) ಮತ್ತು ಯುವ ಪ್ರತಿಭೆ (18 ವರ್ಷ ತುಂಬಿರಬೇಕು- 30 ವರ್ಷಕ್ಕಿಂತ ಕಡಿಮೆ) ಎಂಬ ಶೀರ್ಷಿಕೆಯಡಿ ಮೂರು ವಿಭಾಗಗಳಲ್ಲಿ ಸ್ಪರ್ಧಾರೂಪದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ. ಸ್ಪರ್ಧೆಯ ಪ್ರತಿ ಪ್ರಕಾರಗಳಲ್ಲೂ ಜಿಲ್ಲಾಮಟ್ಟದಲ್ಲಿ ಮೊದಲೆರಡು ಸ್ಥಾನ ಪಡೆದವರನ್ನು ವಲಯ ಮಟ್ಟದ ಸ್ಪರ್ಧೆಗಳಿಗೆ ಹಾಗೂ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರನ್ನು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಕಳುಹಿಸಿಕೊಡಲಾಗುವುದು. ಜಿಲ್ಲಾ ಮತ್ತು ವಿಭಾಗೀಯ ಮಟ್ಟದಲ್ಲಿ ವಿಜೇತರಾದವರಿಗೆ ಯಾವುದೇ ಬಹುಮಾನ ಇರುವುದಿಲ್ಲ. ಪ್ರಮಾಣ ಪತ್ರ ಮಾತ್ರ ನೀಡಲಾಗುವುದು. ಆದರೆ, ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಸಿಗಲಿದೆ.
ವಿಭಾಗವಾರು ವಿವಿಧ ಸ್ಪರ್ಧೆಗಳು:ಬಾಲ ಪ್ರತಿಭೆ ಮತ್ತು ಕಿಶೋರ ಪ್ರತಿಭೆ ವಿಭಾಗದ ಸ್ಪರ್ಧಿಗಳಿಗೆ ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಚಿತ್ರಕಲೆ, ಜಾನಪದ ಗೀತೆ, ಹಿಂದೂಸ್ತಾನಿ/ ಕರ್ನಾಟಕ ವಾದ್ಯ ಸಂಗೀತ, ಹಿಂದೂಸ್ತಾನಿ/ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಹಾಗೆಯೇ ಯುವ ಪ್ರತಿಭೆ ವಿಭಾಗದಲ್ಲಿ ಏಕವ್ಯಕ್ತಿ ಸ್ಪರ್ಧೆಗಳು: ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ), ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ಹಿಂದೂಸ್ತಾನ/ ಕರ್ನಾಟಕ ಶಾಸ್ತ್ರೀಯ ಸಂಗೀತ, ಚಿತ್ರಕಲೆ, ಹಿಂದೂಸ್ತಾನಿ/ಕರ್ನಾಟಕ ವಾದ್ಯ ಸಂಗೀತ ಸ್ಪರ್ಧೆಗಳು ನಡೆಯಲಿವೆ. ಸಮೂಹ ಸ್ಪರ್ಧೆಗಳು: ನಾಟಕ ಸ್ಪರ್ಧೆಗಳು ಇರಲಿವೆ.
ರಾಜ್ಯಮಟ್ಟದ ಸ್ಪರ್ಧೆ ಬೆಂಗಳೂರಿನಲ್ಲಿ ಎರಡು ದಿನ ನಡೆಯಲಿದೆ. ರಾಜ್ಯಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.