ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಿ ಹತ್ತಾರು ಯೋಜನೆ ಜಾರಿಗೊಳಿಸಿದೆ. ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆದು ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಹಿರೇಕೆರೂರು: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಿ ಹತ್ತಾರು ಯೋಜನೆ ಜಾರಿಗೊಳಿಸಿದೆ. ಸರ್ಕಾರದ ಎಲ್ಲ ಯೋಜನೆಗಳ ಪ್ರಯೋಜನ ಪಡೆದು ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಶಿರಾಳಕೊಪ್ಪ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಆವರಣ ಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ದೇಶದ ಸರ್ವತೋಮುಖ ಪ್ರಗತಿಗೆ ಪ್ರತಿಯೊಬ್ಬರೂ ಶಿಕ್ಷಣವಂತರಾಗುವುದು ಅತೀ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಬಡ ಹಾಗೂ ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಅನುಕೂಲವಾಗುವಂತೆ ವಸತಿ ನಿಲಯಗಳನ್ನು ಸ್ಥಾಪಿಸಿ ಸುಸಜ್ಜಿತ ಕಟ್ಟಡ, ಸಕಲ ಸೌಲಭ್ಯ ಕಲ್ಪಿಸಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ ಯಾವ ಕುಂದುಕೊರತೆಗಳು ಆಗದಂತೆ ಸೌಲಭ್ಯ ನೀಡುತ್ತಿದೆ. ಎಲ್ಲ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಶಿಕ್ಷಣವಂತರಾಗಬೇಕು ಎಂದರು.
ಇಂದು 9 ಲಕ್ಷ ರು. ವೆಚ್ಚದಲ್ಲಿ ವಸತಿ ನಿಲಯದ ಆವರಣ ಗೋಡೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ನಿಗದಿತ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದರು.ಈ ವೇಳೆ ಬಿಸಿಎಂ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ. ಹರಿಯಾಳ, ಬಸವರಾಜ ಹರಪಳ್ಳಿ, ಸಂತೋಷ ಕೋಟಿಹಾಳ, ನಿಲಯ ಪಾಲಕಿ ಭಾರತಿ ಸಂಗೊಳ್ಳಿ, ಸಿದ್ದು ತಂಬಾಕದ, ಶಂಭು ಹಂಸಭಾವಿ ಸೇರಿದಂತೆ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.