ಉಜಿರೆ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ, ಕರ್ನಾಟಕ ಡಿಜಿಟಲ್ ಇಕಾನಮಿ ಮಿಶನ್‌ನ ಬೆಂಗಳೂರು ವಿಭಾಗದ ಸಹಯೋಗದಲ್ಲಿ ‘ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು’ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆಗೊಂಡಿತು.

ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು: ಅಂತಾರಾಷ್ಟ್ರೀಯ ವಿಚಾರಸಂಕಿರಣ

ಬೆಳ್ತಂಗಡಿ: ಸರ್ಕಾರವು ಆಧುನಿಕ ಸಂಶೋಧನೆಗಳಿಗೆ ಹೆಚ್ಚಿನ ನೆರವು ಮತ್ತು ಪ್ರೋತ್ಸಾಹ ನೀಡುತ್ತಿದ್ದು, ಯುವಜನತೆ ಇದರ ಸದುಪಯೋಗ ಪಡೆದು ದೇಶದ ಉಜ್ವಲ ಭವಿಷ್ಯ ರೂಪಿಸಲು ಸಹಕಾರಿಯಾಗಬೇಕು ಎಂದು ಕರ್ನಾಟಕ ಡಿಜಿಟಲ್ ಇಕಾನಮಿ ಮಿಶನ್‌ನ ಕ್ಲಸ್ಟರ್ ಮುಖ್ಯಸ್ಥ ಧಾರವಾಡದ ವೆಂಕಟೇಶ ದೇಶಪಾಂಡೆ ಹೇಳಿದ್ದಾರೆ.ಉಜಿರೆ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ, ಕರ್ನಾಟಕ ಡಿಜಿಟಲ್ ಇಕಾನಮಿ ಮಿಶನ್‌ನ ಬೆಂಗಳೂರು ವಿಭಾಗದ ಸಹಯೋಗದಲ್ಲಿ ಎರಡು ದಿನಗಳಲ್ಲಿ ಆಯೋಜಿಸಿದ ‘ಗಣನೆ ಮತ್ತು ಸಂವಹನದಲ್ಲಿ ಪ್ರಗತಿಯ ವಿದ್ಯಮಾನಗಳು’ ಎಂಬ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಐ.ಟಿ. ವಿಭಾಗದ ಸಿ.ಇ.ಒ. ಪೂರನ್‌ವರ್ಮ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ಕ್ಷಿಪ್ರಗತಿಯಲ್ಲಿ ಪರಿವರ್ತನೆಗಳಾಗುತ್ತಿದ್ದು, ವಿದ್ಯಾರ್ಥಿಗಳು ಇವುಗಳನ್ನು ಬಳಕೆ ಮಾಡುವುದು ಅನಿವಾರ್ಯವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ ಕುಮಾರ್ ಟಿ. ಮಾತನಾಡಿ, ಮಾನವ ಜನಾಂಗದ ಕಲ್ಯಾಣವೇ ಸಂಶೋಧನೆಗಳ ಗುರಿಯಾಗಬೇಕು. ಡಿಜಿಟಲ್ ಮಾಧ್ಯಮ ಹಾಗೂ ಆಧುನಿಕ ಸಂಶೋಧನೆಗಳಿಂದ ನೈತಿಕತೆ ಹಾಗೂ ಸೌಹಾರ್ದಯುತ ಮಾನವೀಯ ಸಂಬಂಧಗಳು ಕಡಿತಗೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಮಂಗಳೂರು ವಿಭಾಗದ ಉಪಾಧ್ಯಕ್ಷ ಡಾ. ಅಶ್ವಿನಿ ಹೊಳ್ಳ ಇದ್ದರು. ಒಟ್ಟು ೧೬೮೦ ಸಂಶೋಧನಾ ಲೇಖನಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ ೧೬೦ ಸಂಶೋಧಕರ ಲೇಖನಗಳು ವಿಚಾರಸಂಕಿರಣದಲ್ಲಿ ಮಂಡನೆಯಾಗಲಿವೆ.

ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಂಯೋಜಕ ಡಾ. ಬಸವ ಟಿ. ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಪ್ರತಾಪಚಂದ್ರ ವಂದಿಸಿದರು. ಡಾ. ಸಂದೀಪ್ ಕಾರ್ಯಕ್ರಮ ನಿರ್ವಹಿಸಿದರು.