ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸಬೇಕು: ಜಿ.ಎಂ. ಕಾಂತರಾಜ್

| Published : Oct 06 2024, 01:18 AM IST

ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸಬೇಕು: ಜಿ.ಎಂ. ಕಾಂತರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಫಲಾನುಭವಿಗಳಿಗೆ ಸರ್ಕಾರದ ಯೋಜನೆ ತಲುಪಿಸಬೇಕು ಎಂದು ಗಣ್ಯರು ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರು ಮಾತನಾಡಿ, ಸರ್ಕಾರದ ಎಲ್ಲ ಐದು ಗ್ಯಾರಂಟಿಗಳು ಫಲಾನುಭವಿಗಳಿಗೆ ತಲುಪಲು ಸಂಬಂಧಿಸಿದ ಇಲಾಖಾಧಿಕಾರಿಗಳ ಕಾರ್ಯ ಪ್ರಮುಖವಾಗಿದ್ದು, ಎಲ್ಲರೂ ತಮ್ಮ ಕೆಲಸಗಳನ್ನು ಮಾಡುವ ಮೂಲಕ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ತಿಂಗಳಾಂತ್ಯಕ್ಕೆ ಒಟ್ಟು 24660 ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದು, 24450 ಜನರ ಖಾತೆಗೆ ಹಣ ಜಮಾವಣೆಯಾಗಿದೆ ಎಂದು ಸಿಡಿಪಿಒ ಸಭೆಗೆ ತಿಳಿಸಿದರು. ಇಂದಿಗೂ ಸಾಕಷ್ಟು ಜನರಿಗೆ ಹಣ ಜಮಾವಣೆಯಾಗದ ಬಗ್ಗೆ ಸಮಿತಿ ಸದಸ್ಯ ವೀರೇಂದ್ರಕುಮಾರ್ ಸಭೆಯ ಗಮನಕ್ಕೆ ತಂದರು. ಜಿಎಸ್‌ಟಿ ಮತ್ತು ಕೆವೈಸಿ ಹೆಸರಿನಲ್ಲಿ ಹಣ ಖಾತೆಗೆ ಜಮಾ ಆಗುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು ಸ್ಥಳೀಯ ಬ್ಯಾಂಕ್ ಸಿಬ್ಬಂದಿ ಕರೆಯಿಸಿ ಸ್ಥಳದಲ್ಲಿಯೇ ಸಮಸ್ಯೆ ಬಗೆಹರಿಸಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ ಕುಮಾರ್ ತಿಳಿಸಿದರು.

ತಾಲೂಕಿನಲ್ಲಿ ಒಟ್ಟು 1060 ಅರ್ಜಿಗಳು ತಿದ್ದುಪಡಿಗಾಗಿ ಸಲ್ಲಿಸಲಾಗಿತ್ತು. ಅದರಲ್ಲಿ 1034 ಅರ್ಜಿಗಳು ಪುರಸ್ಕೃತವಾಗಿದ್ದು, 26ಅರ್ಜಿಗಳು ತಿರಸ್ಕಾರವಾಗಿದೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ತಿಳಿಸಿದರು. ನೂತನ ಪಡಿತರ ಚೀಟಿಗಾಗಿ 385 ಅರ್ಜಿಗಳು ಬಂದಿದ್ದು, ಅದರಲ್ಲಿ 149 ಅರ್ಜಿಗಳು ಪುರಸ್ಕೃತವಾಗಿದೆ. 4 ಅರ್ಜಿಗಳು ತಿರಸ್ಕಾರಗೊಂಡಿದ್ದು, 232 ಅರ್ಜಿಗಳು ಬಾಕಿ ಉಳಿದಿವೆ ಎಂದರು ತಿಳಿಸಿದರು. ಸುಮಾರು 10 ಏಕರೆ ಕಾಫಿ ತೋಟ ಇರುವವರಿಗೆ ಬಿಪಿಎಲ್ ಕಾರ್ಡ್ ಇದೆ. ಆದರೆ, ಕಡುಬಡಿವರಿಗೆ ಕಾರ್ಡ್ ಕ್ಯಾನ್ಸಲ್ ಆಗಿವೆ ಎಂದು ತಿಳಿಸಿದರು. ಕೆಲವರು ರೇಷನ್ ಪಡೆಯದೆ ಇರುವುದು ಮತ್ತು ದಾಖಲಾತಿ ಸಮಸ್ಯೆಯಿಂದ ಕಾರ್ಡ್‌ ರದ್ದಾಗಿವೆ. ಕಚೇರಿಗೆ ಬಂದಲ್ಲಿ ಪರಿಶೀಲಿಸಬಹುದು ಎಂದರು.

ಗೃಹಜ್ಯೋತಿಗೆ ಸಂಬಂಧಿಸಿದಂತೆ ಸಭೆಗೆ ಸೆಸ್ಕ್‌ ಎಇಇ ಬಾರದಿರುವ ಬಗ್ಗೆ ಸದಸ್ಯ ಎಸ್.ಎಂ. ಡಿಸಿಲ್ವ ಆಕ್ಷೇಪ ವ್ಯಕ್ತಪಡಿಸಿದರು. ಮುಂದಿನ ಸಭೆಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಖಡ್ಡಾಯವಾಗಿ ಸಭೆಗೆ ಹಾಜರಾಗಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಶನಿವಾರಸಂತೆಯ ಹಾರೆಹೊಸೂರು ಗ್ರಾಮದ 11 ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವಂತೆ ಸದಸ್ಯ ಸಂದೀಪ್ ಮನವಿ ಮಾಡಿದರು.

ಶಕ್ತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ 72, 21, 108 ಮಹಿಳಾ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಲಾಭದಾಯಕವಾಗಿ ನಡೆಯುತ್ತಿದೆ ಎಂದು ಇಲಾಖೆಯ ಟಿಸಿ ಶ್ರೀನಿವಾಸ್ ತಿಳಿಸಿದರು. ಸದ್ಯ ಜಿಲ್ಲೆಯಲ್ಲಿ ಶೇ. 70ರಷ್ಟು ಹೊರ ಜಿಲ್ಲೆಯ ಡಿಪೋಗಳ ಬಸ್‌ಗಳು ಸಂಚರಿಸುತ್ತಿವೆ. ಈಗಾಗಲೇ ಜಿಲ್ಲೆಗೆ 5 ಅಶ್ವಮೇಧ ಬಸ್‌ಗಳು ಬಂದಿದ್ದು, ಜಿಲ್ಲೆಯಲ್ಲಿ ನೋಂದಣಿ ಮಾಡಲು ಅನುಮತಿಗಾಗಿ ಕೇಳಲಾಗಿತ್ತು. ಅನುಮತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ನೋಂದಣಿಯೊಂದಿಗೆ ಬಸ್ ಸಂಚರಿಸಲಿದೆ ಎಂದು ಮಾಹಿತಿ ನೀಡಿದರು.

ಯುವನಿಧಿಯಲ್ಲಿ ಜಿಲ್ಲೆಯಲ್ಲಿ 1015 ಪದವಿ ಮತ್ತು ಡಿಪ್ಲಮೋ ಮಾಡಿದವರು ನೋಂದಣಿ ಮಾಡಿಕೊಂಡಿರುವ ಬಗ್ಗೆ ಉದ್ಯೋಗ ನೋಂದಣಿ ಇಲಾಖೆಯ ಮಾದವಿ ಮಾಹಿತಿ ನೀಡಿದರು. ಇದರಲ್ಲಿ ಪದವಿದರರಿಗೆ 3ಸಾವಿರ ಮತ್ತು ಡಿಪ್ಲೊಮೋದವರಿಗೆ 1, 500 ಮಾಸಿಕ ಸರ್ಕಾರ ನೀಡುತ್ತಿದೆ ಎಂದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.