ಸಾರಾಂಶ
ಹಾವೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಸಾಮಾನ್ಯ ಜನರ ಬದುಕಿಗೆ ಅವಶ್ಯಕವಾಗಿವೆ. ಈ ಯೋಜನೆಗಳಿಂದ ಬಡವರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾದಂತೆ. ಈ ಹಿನ್ನೆಲೆಯಲ್ಲಿ ಈ ಯೋಜನೆಗಳನ್ನು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿಸಲು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಬಡಜನರಿಗೆ, ಬಡ ಮಹಿಳೆಯರಿಗೆ, ಧಮನೀತರಿಗೆ, ಹಿಂದುಳಿದ ಕುಟುಂಬಗಳಿಗೆ ಹಾಗೂ ದುಡಿಯುವ ವರ್ಗಕ್ಕೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಾನು ಮಂತ್ರಿಯಾಗಿದ್ದಾಗ ೧೫ ವರ್ಷಗಳ ಹಿಂದೆಯೆ ತುಂಗಾ ಮೇಲ್ದಂಡೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆ ಕೋಟಿಗಟ್ಟಲೆ ಅನುದಾನ ವೆಚ್ಚಮಾಡಿದರೂ ಪರಿಣಾಕಾರಿಯಾಗಿ ಅನುಷ್ಠಾನವಾಗಿಲ್ಲ, ಕಳಪೆ ಗುಣಮಟ್ಟದ ಉಪಕರಣಗಳನ್ನು ಬಳಸಲಾಗಿದೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ದಿನನಿತ್ಯ ನೀರು ಬರುತ್ತಿಲ್ಲ ಎಂಬ ದೂರುಗಳಿವೆ. ಈ ಯೋಜನೆ ಉದ್ದೇಶ ಯಶಸ್ವಿಯಾಗಲು ಕೆಳ ಹಂತದಿಂದಲೇ ಪರಿಶೀಲನೆ ನಡೆಸಿ ಈ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು. ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಯೋಜನೆ ತಲುಪಿದಾಗ ಈ ಯೋಜನೆ ಉದ್ದೇಶ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲೆಯಲ್ಲಿ ಕೋಟಿಗಟ್ಟಲೇ ಹಣ ವೆಚ್ಚಮಾಡಿದರೂ ನೀರು ಬಂದಿಲ್ಲ ಎಂದರೆ ಇದಕ್ಕೆ ಹೊಣೆ ಯಾರು? ಮುಂದಿನ ಸಭೆಯೊಳಗೆ ಜಲಜೀವನ್ ಮಿಷನ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಸರಿಯಾದ ಮಾಹಿತಿ ನೀಡಬೇಕು. ಇಂತಹ ಯೋಜನೆಗಳಲ್ಲಿ ಯಾರೂ ರಾಜಕೀಯ ಮಾಡಬಾರದು. ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿ ಸ್ಥಳೀಯ ಗ್ರಾಮೀಣ ಸಂಸ್ಥೆಗಳ ಸದಸ್ಯರು ಅಡ್ಡಿಪಡಿಸಿದರೆ ಪ್ರಕರಣ ದಾಖಲಿಸಿ ಹಾಗೂ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ಅನುಷ್ಠಾನಗೊಳಿಸಿ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಪ್ರಸಕ್ತ ಸಾಲಿನ ಮುಂಗಾರು ಮಳೆ ಉತ್ತಮವಾಗಿದ್ದು, ಕಳೆದ ಸಾಲಿಗಿಂತ ಶೇ.೧೦ರಿಂದ ೧೫ರಷ್ಟು ಬಿತ್ತನೆ ಪ್ರದೇಶ ಹೆಚ್ಚಾಗಲಿದ್ದು, ಹೆಚ್ಚಿನ ಬೀಜ-ಗೊಬ್ಬರ ಬೇಕಾಗುತ್ತದೆ. ಅಧಿಕ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನುಮಾಡಿಕೊಳ್ಳಬೇಕು. ಜಿಲ್ಲೆಯ ತಾಲೂಕುಗಳ ಹವಾಮಾನ ಆಧಾರದ ಮೇಲೆ ತೋಟಗಾರಿಕೆ ಕ್ಷೇತ್ರ ವಿಸ್ತರಣೆ ಕ್ರಿಯಾ ಯೋಜನೆ ತಯಾರಿಸಿ. ಈಗಾಗಲೇ ತೋಟಗಾರಿಕೆ ಬೆಳೆಯುತ್ತಿರುವ ರೈತರನ್ನು ಉತ್ತೇಜಿಸುವ ಕೆಲಸವಾಗಬೇಕು. ಜಗತ್ತು ಬದಲಾಗುತ್ತಿದೆ. ನಮ್ಮ ಆಲೋಚನೆಗಳು ಹೊಸತಾಗಿರಬೇಕು. ರೈತರ ಪರವಾಗಿ ಕೆಲಸಮಾಡಿ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನರೇಗಾ ಯೋಜನೆಯಡಿ ಸನ್ಮಾನಗಳ ರಸ್ತೆ, ಸ್ಮಶಾನ ಅಭಿವೃದ್ಧಿ, ಗ್ರಾಮೀಣ ಭಾಗದ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಿದರೆ ಗ್ರಾಮಗಳು ಸುಂದರ ಹಾಗೂ ಸ್ವಚ್ಛವಾಗಿರುತ್ತದೆ. ಜೊತೆಗೆ ಕ್ರೀಡಾಂಗಣ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು. ಈ ಹಿಂದೆ ಜಿಲ್ಲೆಯಲ್ಲಿ ಆರಂಭಿಸಲಾದ ''''''''ವಾತ್ಯಲ್ಯ'''''''' ಯೋಜನೆಯನ್ನು ಮುಂದುವರಿಸಿ. ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಡ ರೋಗಿಗಳೊಂದಿಗೆ ಸೌಜನ್ಯದೊಂದಿಗೆ ವರ್ತಿಸುವ ಮೂಲಕ ಉತ್ತಮ ಚಿಕಿತ್ಸೆ ನೀಡಬೇಕು. ಎಲ್ಲರೂ ಜಿಲ್ಲಾ ಆಸ್ಪತ್ರೆಗೆ ಬರಲು ಆಗುವುದಿಲ್ಲ. ಹಾಗಾಗಿ ತಾಲೂಕು ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಬೇಕು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಬ್ಯಾಡಗಿ ತಾಲೂಕು ಆಸ್ಪತ್ರೆಯಲ್ಲಿ ಕಟ್ಟಡ ಸರಿಯಾಗಿಲ್ಲ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಅಗತ್ಯ ನೆರವು ನೀಡಲು ನಾನು ನಿಮ್ಮೊಂದಿಗಿರುತ್ತೇನೆ. ಎಲ್ಲರೂ ತಂಡವಾಗಿ ಸಕಾರಾತ್ಮಕ ಚಿಂತನೆಯೊಂದಿಗೆ ಕೆಲಸಮಾಡಿದರೆ ಯೋಜನೆಗಳ ಯಶಸ್ಸು ಸಾಧ್ಯ. ಈ ಜಿಲ್ಲೆಯ ಆಮೂಲಾಗ್ರ ಬದಲಾವಣೆಗೆ ಎಲ್ಲರೂ ಶ್ರಮಿಸೋಣ ಎಂದರು. ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರು ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳ ಕುರಿತು ಹಾಗೂ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ ಅವರು ನರೇಗಾ ಯೋಜನೆ ಗುರಿ ಮತ್ತು ಸಾಧನೆಗಳ ಮಾಹಿತಿ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಮಮತಾ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅಂತರವಳ್ಳಿ, ತೋಟಗಾರಿಕೆ ಉಪನಿರ್ದೇಶಕ ಪ್ರದೀಪ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ, ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಾನಂದ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.