ಆರ್ಥಿಕ ನೆರವಿನೊಂದಿಗೆ ಸರ್ಕಾರಿ ಶಾಲೆ ನವೀಕರಣಗೊಳಿಸಿದ ಪೊಲೀಸರು

| Published : Oct 24 2024, 12:50 AM IST

ಸಾರಾಂಶ

ಈ ಭಾಗದ ಭುಜುವಳ್ಳಿ, ಕಪರೆಕೊಪ್ಪಲು, ಕಾಡುಕೊತ್ತನಹಳ್ಳಿ ಭಾಗಕ್ಕೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ಪ್ರಭುಸ್ವಾಮಿ, ಕಾನ್ಸ್ ಸ್ಟೇಬಲ್ ಸುಬ್ರಹ್ಮಣ್ಯ ಅವರನ್ನು ಬೀಟ್ ನಿರ್ವಹಿಸಲು ನಿಯೋಜನೆಗೊಳಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಭಾರತೀನಗರ

ವೈಯಕ್ತಿಕ ಹಾಗೂ ಗ್ರಾಮಸ್ಥರ ನೆರವಿನಿಂದ ಕಪರೆಕೊಪ್ಪಲು ಸರ್ಕಾರಿ ಶಾಲೆ ನವೀಕರಣಗೊಳಿಸುವ ಮೂಲಕ ರಾತ್ರಿ ವೇಳೆ ಗಸ್ತು ತಿರುಗುವ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನೆಲಹಾಸು ಕಿತ್ತು ಹೋಗಿತ್ತು. ಹೆಗ್ಗಣಗಳ ಬಿಲದಿಂದಲೇ ತುಂಬಿ ಹೋಗಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಸಾಧ್ಯವಾಗದಂತಾಗಿತ್ತು.

ಈ ಭಾಗದ ಭುಜುವಳ್ಳಿ, ಕಪರೆಕೊಪ್ಪಲು, ಕಾಡುಕೊತ್ತನಹಳ್ಳಿ ಭಾಗಕ್ಕೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ಪ್ರಭುಸ್ವಾಮಿ, ಕಾನ್ಸ್ ಸ್ಟೇಬಲ್ ಸುಬ್ರಹ್ಮಣ್ಯ ಅವರನ್ನು ಬೀಟ್ ನಿರ್ವಹಿಸಲು ನಿಯೋಜನೆಗೊಳಿಸಲಾಗಿತ್ತು.

ಈ ಇಬ್ಬರು ಪೊಲೀಸರು ಬೀಟ್ ಕರ್ತವ್ಯ ನಿರ್ವಹಣೆ ಜೊತೆಗೆ ಸರ್ಕಾರಿ ಶಾಲೆಯತ್ತಲೂ ಗಮನಹರಿಸಿದ್ದು, ಶಾಲೆಯ ಸ್ಥಿತಿ ಬಗ್ಗೆ ತಿಳಿದುಕೊಂಡರು. ಗ್ರಾಮಸ್ಥರ ಮನವೊಲಿಸಿ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಹಾಗೂ ತಮ್ಮ ವೈಯುಕ್ತಿವಾಗಿ ಹಣ ನೀಡಿ ಶಾಲೆಯನ್ನು ನವೀಕರಣಗೊಳಿಸಿ ಶಿಕ್ಷಣ ಪ್ರೇಮ, ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಶಾಲೆ ನವೀಕರಣಕ್ಕಾಗಿ ಗ್ರಾಮದ ಮುಖಂಡರ ಬಳಿ ಸಹಾಯ ಹಸ್ತ ಚಾಚಿದರು. ಗ್ರಾಪಂ ಅಧ್ಯಕ್ಷ ವೀರಭದ್ರಯ್ಯ, ಅಡಿಟರ್ ಸುರೇಶ್, ಎಸ್‌ಡಿಎಂಸಿ ಅಧ್ಯಕ್ಷ ಸಿದ್ಧರಾಜು, ಮುಖಂಡರಾದ ಚಿಕ್ಕಸಿದ್ದಯ್ಯ, ಚಿಕ್ಕರಾಜು, ಚೇತನ್, ರವಿ, ವೀರಭದ್ರ, ಅಂಗಡಿ ರಾಜು ಎಂಬುವವರೊಡಗೂಡಿ ಶಾಲೆಯ ನೆಲಹಾಸನ್ನು ಹೊಸದಾಗಿ ನಿರ್ಮಿಸಲು ಚರ್ಚಿಸಿ ಮುಂದಾದರು.

ನಂತರ ಎಲ್ಲರ ಸಹಕಾರದಿಂದ ಶಾಲೆ ನೆಲ ಹಾಸನ್ನು ಸೀಮೆಂಟ್‌ನಿಂದ ನಿರ್ಮಿಸಿ ವಿದ್ಯಾಭ್ಯಾಸ ಮಾಡುತ್ತಿರುವ 40ಕ್ಕೂ ಹೆಚ್ಚು ಮಕ್ಕಳಿಗೆ ಕಲಿಕೆಗೆ ಸ್ಫೂರ್ತಿ ನೀಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ಶಾಲೆಗೆ ಅಗತ್ಯವಿರುವ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣಗಳು ಸೇರಿದಂತೆ ಮತ್ತಿತರ ಸಾಮಗ್ರಿಗಳನ್ನು ಕೊಡಿಸಲು ಮುಂದಾಗಿದ್ದಾರೆ.

ಶಾಲೆ ಉದ್ಘಾಟನೆ:

ನವೀಕರಣಗೊಂಡ ಶಾಲೆ ಉದ್ಘಾಟಿಸಿದ ಬಿಇಒ ಸಿ.ಎಚ್.ಕಾಳೀರಯ್ಯ ಮಾತನಾಡಿ, ಪೊಲೀಸರು ಎಂದರೆ ಭಯಪಡುತ್ತಾರೆ. ಆದರೆ, ಜನಸ್ನೇಹಿ ಪೊಲೀಸರು ನಮ್ಮೊಂದಿಗೆ ಇದ್ದಾಗ ಗ್ರಾಮಗಳು ಅಭಿವೃದ್ಧಿಗೊಳ್ಳುತ್ತವೆ. ಸರ್ಕಾರದಿಂದ ಶಿಕ್ಷಣ ಇಲಾಖೆಗೆ ವಿದ್ಯುತ್ ಬಿಲ್, ಪುಸ್ತಕ, ಪೇಪರ್ ಖರೀದಿಗೆ ಈಗಾಗಲೇ ಎರಡು ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಎಎಸ್‌ಐ ವೆಂಕಟೇಶ್ ಮಾತನಾಡಿ, ಬೀಟ್ ಪೊಲೀಸರಾದ ಪ್ರಭುಸ್ವಾಮಿ ಮತ್ತು ಸುಬ್ರಹ್ಮಣ್ಯ ಅವರು ತಮ್ಮ ಇಲಾಖೆಯಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸುವುದರ ಜೊತೆಗೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಮುಂದಾಗುತ್ತಿದ್ದಾರೆ. ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆಗಾಗಿ ಗಿಡ ಕೊಡುವುದು ಮತ್ತು ಗಿಡ ನೆಡುವ ಕೆಲಸ ಮಾಡಿ ಪೊಲೀಸರಿಗೆ ಒಳ್ಳೆಯ ಹೆಸರನ್ನು ತರುತ್ತಿದ್ದಾರೆಂದು ಶ್ಲಾಘಿಸಿದರು.

ಗ್ರಾಪಂ ಉಪಾಧ್ಯಕ್ಷ ಲೋಕೇಶ್, ಎಸ್‌ಡಿಎಂಸಿ ಅಧ್ಯಕ್ಷ ಸರಿತ್, ಗ್ರಾಮ ಮುಖಂಡರಾದ ಚಿಕ್ಕರಾಜು, ಅಡಿಟರ್ ಸುರೇಶ್, ಚಿಕ್ಕಸಿದ್ದಯ್ಯ, ಬೀಟ್ ಪೊಲೀಸ್ ಪ್ರಭುಸ್ವಾಮಿ, ಸುಬ್ರಹ್ಮಣ್ಯ, ಲೋಕೇಶ್, ಮುಖ್ಯ ಶಿಕ್ಷಕ ರಾಜೇಶ್, ಸಹ ಶಿಕ್ಷಕ ಗುರುಲಿಂಗಯ್ಯ ಉಪಸ್ಥಿತರಿದ್ದರು.