ಸಮುದಾಯದ ಸಹಭಾಗಿತ್ವ ದೊರೆತರೆ ಸರ್ಕಾರಿ ಶಾಲೆಗಳು ಸ್ಮಾರ್ಟ್

| Published : Jun 03 2024, 12:30 AM IST

ಸಾರಾಂಶ

ಸಮುದಾಯದ ಸಹಭಾಗಿತ್ವ ದೊರೆತರೆ ಸರ್ಕಾರಿ ಶಾಲೆಗಳು ಸ್ಮಾರ್ಟ್‌ ಮತ್ತು ಸಬಲೀಕರಣ ಆಗುವುದರಲ್ಲಿ ಸಂದೇಹವಿಲ್ಲ.

ಎಂ. ಬಸಾಪುರ ಶಾಲೆ ಪ್ರಾರಂಭೋತ್ಸವದಲ್ಲಿ ಶಿಕ್ಷಕ ನಟರಾಜ ಸೋನಾರ್ಕನ್ನಡಪ್ರಭ ವಾರ್ತೆ ಕುಷ್ಟಗಿ

ಸಮುದಾಯದ ಸಹಭಾಗಿತ್ವ ದೊರೆತರೆ ಸರ್ಕಾರಿ ಶಾಲೆಗಳು ಸ್ಮಾರ್ಟ್‌ ಮತ್ತು ಸಬಲೀಕರಣ ಆಗುವುದರಲ್ಲಿ ಸಂದೇಹವಿಲ್ಲ ಎಂದು ಶಿಕ್ಷಕ ನಟರಾಜ ಸೋನಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಬಿಜಕಲ್ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಎಂ. ಬಸಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳನ್ನು ಸ್ವಾಗತ ಮಾಡಿಕೊಂಡು ಆನಂತರ ಅವರು ಮಾತನಾಡಿದರು. ಎಲ್ಲರ ಸಹಕಾರದಿಂದ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಂತಹ ಭೌತಿಕ ಬದಲಾವಣೆಗಳು ಆಗುತ್ತಿರುವುದು ಸಂತಸ ತಂದಿದೆ. ಸರ್ಕಾರಿ ಶಾಲೆಗಳು ಸ್ಮಾರ್ಟ್ ಶಾಲೆಗಳಾಗಿ ಪರಿವರ್ತನೆ ಹೊಂದುತ್ತಿವೆ. ಇಲಾಖೆಯ ನಿಯಮಗಳನ್ನು ಅನುಸರಿಸಿಕೊಂಡು ಕಲಿಕಾ ಮತ್ತು ಬೋಧನೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲಿದೆ ಎಂದರು.

ಮುಖ್ಯಶಿಕ್ಷಕ ಶ್ರೀನಿವಾಸಾಚಾರ್ಯ ಜೋಶಿ ಮಾತನಾಡಿ, ಸರ್ಕಾರ ಈ ವರ್ಷ ಎರಡು ಜೊತೆ ಸಮವಸ್ತ್ರ ನೀಡಿದೆ. ಪಠ್ಯ ಪುಸ್ತಕಗಳನ್ನು ನಾಳೆಯೊಳಗೆ ಎಲ್ಲ ಮಕ್ಕಳಿಗೆ ವಿತರಿಸಲಾಗುವುದು. ನಲಿಕಲಿ ಮತ್ತು ಕಲಿನಲಿ ಪದ್ಧತಿಯ ಮೂಲಕ ಮಕ್ಕಳಿಗೆ ಬೋಧನೆ ಜತೆಗೆ ಸೇತುಬಂಧ, ವಿದ್ಯಾ ಪ್ರವೇಶ ಮೂಲಕ ಗುಣಾತ್ಮಕ ಕಲಿಕಾ ಬಲವರ್ಧನೆಗೆ ಇಲಾಖೆ ಮಾರ್ಗದರ್ಶನ ಮಾಡಿದೆ ಎಂದರು.

ಕಲಿಕಾ ಆಂದೋಲನದ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಸಾಧ್ಯವಾದಷ್ಟು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಲು ವಿನಂತಿಸಿದರು. ಶಾಲೆಗಳಲ್ಲಿ ಭೌತಿಕ ಸೌಲಭ್ಯಗಳ ಜತೆಗೆ ಉತ್ತಮ ಗುಣಮಟ್ಟದ ಕಲಿಕಾ ಮಟ್ಟ ಸಿಗುತ್ತಿದೆ ಎಂದರು.

ಚಾಲನೆ:

ಎಂ. ಬಸಾಪುರ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ದೊಡ್ಡಯ್ಯ ಹೊಸೂರು ಅವರು ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳ ವಿತರಣೆ ಮಾಡಿದರು. ಗ್ರಾಪಂ ಸದಸ್ಯ ವೀರನಗೌಡ ಪೊಲೀಸ್‌ ಪಾಟೀಲ ನೀಡಿದ ನೋಟ್‌ಬುಕ್‌, ಪೆನ್‌ನ್ನು ಇದೇ ಸಮಯದಲ್ಲಿ ವಿತರಿಸಲಾಯಿತು. ಅಡುಗೆ ಸಿಬ್ಬಂದಿ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಜಿಲೇಬಿ, ಅನ್ನ-ಸಾಂಬಾರು ಊಟ ಕೊಡಲಾಯಿತು.