ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರಿ ಶಾಲೆಗಳು ಉಳಿದು ಉತ್ತಮವಾಗಿ ಬೆಳವಣಿಗೆ ಕಾಣಬೇಕು. ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ ಮನವಿ ಮಾಡಿದರು.

ತಾಲೂಕಿನ ಹೆಮ್ಮಿಗೆ ಗ್ರಾಮದಲ್ಲಿ ಶ್ರೀಅಂಜನಾದ್ರಿ ಸೇವಾ ಟ್ರಸ್ಟ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಹಾಗೂ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೆ ಬೀಳುತ್ತಿದ್ದಾರೆ. ಈ ಶಾಲೆಯಲ್ಲಿ ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬಹಳ ಸುಂದರ ಸರ್ಕಾರಿ ಶಾಲೆಯನ್ನಾಗಿ ಮಾಡಿದ್ದಾರೆ. ಸರ್ಕಾರದ ಅನುದಾನವನ್ನ ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿ ಮತ್ತು ಕನ್ನಡ ಶಾಲೆಗಳ ಅಭಿವೃದ್ಧಿ ಮಾಡಬೇಕು. ಇದು ಎಲ್ಲರ ಕರ್ತವ್ಯ ಎಂದರು.

ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಅವರು, ಪ್ರಸ್ತುತ ಆಡಳಿತ ಭಾಷೆ ಕನ್ನಡ ಅಭಿವೃದ್ಧಿಯಾಗಬೇಕಾದರೆ ಸರ್ಕಾರಿ ಕಚೇರಿಗಳ ಆಡಳಿತ ವ್ಯವಹಾರಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಬೇಕು. ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಬೇಕು. ಇಂತಹ ಮಹತ್ವವಾದ ನರ್ಸರಿ ಆಂಗ್ಲ ಮಾಧ್ಯಮ ಶಾಲೆಯನ್ನು ಅಂಜನಾದ್ರಿ ಸೇವಾ ಟ್ರಸ್ಟ್ ಸರ್ಕಾರಿ ಶಾಲೆಯಲ್ಲಿ ಪ್ರಾರಂಭಿಸಿರುವುದು ಬಹಳ ಹೆಮ್ಮೆಯ ವಿಷಯ ಎಂದರು.

ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ೨೦೦ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ಮುಚ್ಚುವ ಹಂತದಲ್ಲಿವೆ. ಅತಿ ಹೆಚ್ಚು ಕನ್ನಡ ಮಾತಾಡುವ ಜಿಲ್ಲೆಯ ಪರಿಸ್ಥಿತಿಯೇ ಹೀಗಾದರೆ ಗಡಿಭಾಗದ ಜಿಲ್ಲೆಗಳ ಗತಿ ಏನು ಎಂದು ಕಳವಳ ವ್ಯಕ್ತಪಡಿಸಿದರು.


ಮನೆಗಳಲ್ಲಿ ಪೋಷಕರು ಕನ್ನಡ ಭಾಷೆ ಮಾತನಾಡಬೇಕು ಮಕ್ಕಳಿಗೆ ಕನ್ನಡ ಭಾಷೆಯ ಮಹತ್ವ ತಿಳಿಸುವ ಕೆಲಸವನ್ನು ತಾಯಂದಿರು ಮಾಡಬೇಕು. ಕನ್ನಡ ಭಾಷೆಗೆ ತನ್ನದೇ ಆದ ಗತ ವೈಭವ ಇದೆ ಸಾಂಸ್ಕೃತಿಕ, ಸಾಮಾಜಿಕ. ಶೈಕ್ಷಣಿಕ. ಸಾಹಿತ್ಯ. ಹೋರಾಟ ಹೀಗೆ ವಿವಿಧ ಕ್ಷೇತ್ರಗಳಿಗೆ ಘಟಾನುಘಟಿ ನಾಯಕರು ಶಕ್ತಿ ತುಂಬಿದ್ದಾರೆ. ಅವರ ಶ್ರಮ ವ್ಯರ್ಥವಾಗದಂತೆ ಮಕ್ಕಳನ್ನು ಕನ್ನಡಮಯ ವಾತಾವರಣದಲ್ಲಿ ಬೆಳೆಸುವಂತೆ ಹೇಳಿದರು.

ಇದೇ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ ಸ್ವಾಮಿ, ಕನ್ನಡ ಸೇನೆಯ ಎಚ್.ಸಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದಪ್ಪ, ರೈತ ಸಂಘದ ಚಂದ್ರಶೇಖರ್, ಪುಟ್ಟೇಗೌಡ, ಮೆಡಿಕಲ್ ರವಿ, ಅಂಜನಾದ್ರಿ ಟ್ರಸ್ಟ್ ಅಧ್ಯಕ್ಷ ವಿನೋದ್, ಉಪಾಧ್ಯಕ್ಷರಾದ ಪ್ರದೀಪ್, ಪ್ರತಾಪ್, ಮಧುಸೂದನ್, ಕೃಷ್ಣಪ್ಪ, ಸಿದ್ದಪ್ಪ, ಮಹೇಂದ್ರ, ಕಿರಣ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ್, ಪ್ರಸಾದ್, ಶಾಲೆಯ ಮುಖ್ಯ ಶಿಕ್ಷಕರು ಸಿಬ್ಬಂದಿ ಇದ್ದರು.