ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ವಿಚಾರದ ಗೊಂದಲದಲ್ಲಿ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಮರೆತಿದೆ ಎಂದು ಕೃಷಿಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಬೇಸರ ವ್ಯಕ್ತ ಪಡಿಸಿದರು.ಕೃಷಿ ಕೂಲಿಕಾರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿಮ್ಮ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿಕೊಂಡು ಬರ ಪರಿಸ್ಥಿತಿ ಎದುರಿಸುತ್ತಿರುವ ಜನರ ಅಭಿವೃದ್ಧಿ ಬಗ್ಗೆ ಚಿಂತಿಬೇಕು ಎಂದು ಆಗ್ರಹಿಸಿದರು.
ಕಳೆದ ಜುಲೈ 4 ರಿಂದ ಇದುವರೆವಿಗೂ ಕೃಷಿಕೂಲಿಕಾರರಿಗೆ ನೀಡಬೇಕಾಗಿರುವ ಬಾಕಿ ಹಣ ನೀಡದೆ ಕೂಲಿಕಾರರಿಗೆ ಸರ್ಕಾರ ಸಾಕಷ್ಟು ಶೋಷಣೆ ಮಾಡುತ್ತಿದೆ. ಸುಮಾರು 500 ಕೋಟಿಗೂ ಹೆಚ್ಚು ಹಣವನ್ನು ಉದ್ಯೋಗ ಖಾತರಿ ಯೋಜನೆ ಕೆಲಸ ಮಾಡಿದ ಕೂಲಿಕಾರರಿಗೆ ನೀಡಿಲ್ಲ ಎಂದು ಆರೋಪಿಸಿದರು.ತಕ್ಷಣವೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಲಿಕಾರರ ಹಣವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿ ಎದುರು ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆಆರ್‌ಎಸ್ ಅಣೆಕಟ್ಟೆ ತುಂಬಿ 2 ತಿಂಗಳಾಗುತ್ತಾ ಬಂದರೂ ಮಳವಳ್ಳಿ ಮತ್ತು ಮದ್ದೂರು ತಾಲೂಕಿನ ಕೊನೆಯ ಭಾಗಕ್ಕೆ ನೀರು ಬಿಡದೆ ರೈತರನ್ನು ಸತಾಯುಸುತ್ತಿದ್ದಾರೆ. ಜಾನುವಾರುಗಳ ನೀರಿಗೂ ತೊಂದರೆ ಉಂಟಾಗಿದೆ. ಕಟ್ಟು ಪದ್ಧತಿಯಲ್ಲಿ ನೀರನ್ನು ಕೊಡುವುದನ್ನು ಬಿಟ್ಟು ನಿರಂತರವಾಗಿ ನೀರು ಕೊಡಬೇಕು ಎಂದು ಆಗ್ರಹಿಸಿದರು.ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ರೈತರು ಬೇಸಾಯ ಮಾಡುವುದೇ ತೊಂದರೆಯಾಗಿದೆ. ಇದರ ಬಗ್ಗೆ ಕೂಡಲೇ ಸಚಿವರು, ಶಾಸಕರು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಜಿಲ್ಲಾದ್ಯಂತ ರೈತರು ಸಾಲ ಮಾಡಿ ಕಬ್ಬು ಬೆಳೆದಿದ್ದಾರೆ. 16 ತಿಂಗಳು ಕಳೆದರೂ ಕಬ್ಬು ಕಟಾವು ಮಾಡಿಸದೆ ರೈತರನ್ನು ಕಷ್ಟಕ್ಕೆ ದೂಡುತ್ತಿದ್ದಾರೆ. ತಕ್ಷಣವೇ ಎಲ್ಲಾ ಕಡೆ ಕಬ್ಬು ಕಟಾವನ್ನು ಮಾಡಿಸಿ ರೈತರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮೈಕ್ರೋಫೈನಾಸ್ ಹಾವಳಿಗೆ ಸಾಕಷ್ಟು ಜನರು ಗ್ರಾಮಬಿಟ್ಟು ಹೋಗುತ್ತಿದ್ದಾರೆ. ಸಾಲಕ್ಕೆ ಬಡ್ಡಿ ಕಟ್ಟಲಾಗದೆ ಸ್ಥಿತಿ ಪ್ರತೀ ಗ್ರಾಮದಲ್ಲೂ ಎದುರಾಗುತ್ತಿದೆ. ಇದನ್ನು ನಿವಾರಿಸಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಕಡಿಮೆ ದರದಲ್ಲಿ ಸಾಲ ವಿತರಿಸಿ ಬಡವರ ರಕ್ಷಣೆಗೆ ಮುಂದಾಗಬೇಕೆಂದು ಕೋರಿದರು.ಈ ವೇಳೆ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ್, ಮದ್ದೂರು ತಾಲೂಕು ಕಾರ್ಯದರ್ಶಿ ಟಿ.ಪಿ.ಅರುಣ್‌ಕುಮಾರ್, ಮಂಡ್ಯ ತಾಲೂಕು ಕಾರ್ಯದರ್ಶಿ ಆರ್.ರಾಜು, ಜಿಲ್ಲಾ ಮುಖಂಡರಾದ ಟಿ.ಎಚ್.ಆನಂದ್, ಪುಟ್ಟಮಾದೇಗೌಡ, ಮಂಚೇಗೌಡ, ಎನ್.ಶಿವಕುಮಾರ್ ಸೇರಿದಂತೆ ಹಲವರಿದ್ದರು.