ಮತಾಂಧರಿಗೆ ಸರ್ಕಾರ ಬೆಂಬಲ: ಸಿ.ಟಿ. ರವಿ

| Published : Sep 21 2024, 01:48 AM IST

ಸಾರಾಂಶ

ಚಿಕ್ಕಮಗಳೂರು, ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸುವುದು, ಪೆಟ್ರೋಲ್ ಬಾಂಬ್‌ ಹಾಕಿಸುವುದು ಸಿಎಂ ಸಿದ್ದರಾಮಯ್ಯ ಅವರ ಸೆಕ್ಯುಲರ್ ನೀತಿಯೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗಣೇಶೋತ್ಸವದ ಮೇಲೆ ಕಲ್ಲು ತೂರಾಟ ನಡೆಸುವುದು, ಪೆಟ್ರೋಲ್ ಬಾಂಬ್‌ ಹಾಕಿಸುವುದು ಸಿಎಂ ಸಿದ್ದರಾಮಯ್ಯ ಅವರ ಸೆಕ್ಯುಲರ್ ನೀತಿಯೇ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂಧರಿಗೆ ಕಾಂಗ್ರೆಸ್ ಬೆಂಬಲ ಕೊಟ್ಟು ರಾಜಕಾರಣ ಮಾಡುತ್ತಿರುವುದರಿಂದಲೇ ಅವರು ಕೊಬ್ಬಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ಮತಾಂಧರು ಬಾಲ ಬಿಚ್ಚುತ್ತಾರೆ. ಅವರ ಸೊಕ್ಕಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ. ಇಂಥ ಮತಾಂಧರ ಹೆಡೆಮುರಿ ಕಟ್ಟದಿದ್ದರೆ ಕರ್ನಾಟಕ ನಾಡಗೀತೆಯ ಆಶಯದಂತೆ ಇರುವುದಿಲ್ಲ ಎಂದು ಕಿಡಿಕಾರಿದರು.

ಪ್ಯಾಲೆಸ್ತೆನ್ ದ್ವಜ ಹಾರಿಸಿದರೆ ತಪ್ಪೇನು ಎಂದು ಸಚಿವ ಜಮೀರ್ ಅಹಮದ್ ಕೇಳಿದ್ದಾರೆ. ಇಲ್ಲಿರುವವರೆಗೂ ಪ್ಯಾಲೇಸ್ತೇನ್ ಗೂ ಏನು ಸಂಬಂಧ. ಅವರ ಧ್ವಜವನ್ನು ಏಕೆ ಹಾರಿಸಬೇಕು ಎಂಬುದನ್ನು ಸ್ಪಷ್ಟಪಡಿಸಬೇಕು. ನಿಮಗೆ ಭಾರತದ ಧ್ವಜ ಹಾರಿಸಬೇಕಾದರೆ ಕಷ್ಟವಾಗುತ್ತದೆ. ವಂದೇ ಮಾತರಂ ಹೇಳಲು ಷರಿಯಾ ಅಡ್ಡಿಯಾಗುತ್ತದೆ. ಪ್ಯಾಲೆಸ್ತೇನ್ ಬೆಂಬಲಿಸಿ ಮಾತನಾಡುವುದನ್ನು ನೋಡಿದರೆ ನಿಮ್ಮ ಬಗ್ಗೆಯೂ ಅನುಮಾನ ಮೂಡುತ್ತಿದೆ ಎಂದು ತಿಳಿಸಿದರು.

ಜಮೀರ್ ಅಹಮದ್ ಅವರ ನಡವಳಿಕೆ ಜಿನ್ನಾಗಿಂತ ಕಡಿಮೆ ಇಲ್ಲ. ನಾನು ಸತ್ತರೂ ನನ್ನ ಮಾನಸಿಕತೆಯ ಜನ ಕಾಂಗ್ರೆಸ್ ನಲ್ಲಿ ಇದ್ದಾರೆ ಎಂದು ಜಿನ್ನಾಗೆ ಇಂದು ಅನಿಸಿರಬಹುದು. ನನ್ನ ಮಾನಸಿಕತೆಯ ಜನ ಕಾಂಗ್ರೆಸ್ ನಲ್ಲಿ ಇರುವವರೆಗೂ ನನ್ನ ವಿಚಾರ ಸಾಯುವುದಿಲ್ಲ ಎಂದು ಅನಿಸಿರ ಬಹುದು. ಇಂದು ನಿಮ್ಮ ಹೇಳಿಕೆಯನ್ನು ನೋಡಿ ಜಿನ್ನಾ ಮೇಲಿನಿಂದಲೇ ಸಂತೋಷ ಪಡಬಹುದು ಎಂದು ಕುಟುಕಿದರು.ರಾಜ್ಯದಲ್ಲಿ ಪೊಲೀಸರು ಹೆಲ್ಪ್ ಲೆಸ್:

ರಾಜ್ಯದ ಹಲವೆಡೆ ಗಣಪತಿ ಮೆರವಣಿಗೆ ವೇಳೆ ಗಲಭೆ ನಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಪ್ತಚರ ಇಲಾಖೆಗೆ ಎಲ್ಲವೂ ಮಾಹಿತಿ ಇರುತ್ತದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಬಾಂಧವರು ಏನೇ ಮಾಡಿದರೂ ಸುಮ್ಮನಿರಬೇಕು ಎಂದು ಸೂಚನೆ ಇರುವಂತಿದೆ. ಬಾಂಧವರ ಮೇಲೆ ಆಕ್ಷನ್ ತೆಗೆದುಕೊಂಡರೆ ಪೊಲೀಸರ ಮೇಲೆಯೇ ಆಕ್ಷನ್ ಆಗುತ್ತದೆ. ಈ ಕಾರಣಕ್ಕಾಗಿಯೇ ಪೊಲೀಸರು ಹೆಲ್ಪ್ ಲೆಸ್ ಆಗಿ ಸುಮ್ಮನಿದ್ದಾರೆ ಎಂದು ಟೀಕಿಸಿದರು.

ತಾಲಿಬಾನ್ ಸರ್ಕಾರವಿದ್ದರೂ ಬಾಂಧವರಿಗೆ ಇಷ್ಟೊಂದು ಸ್ವೇಚ್ಛಾಚಾರ ಇರುತ್ತಿರಲಿಲ್ಲ. ಇವರಿಗೆ ಕಾಂಗ್ರೆಸ್ ಸರ್ಕಾರವೇ ತಾಲಿಬಾನ್ ಸರ್ಕಾರ ಎನಿಸಿರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.