ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೆಆರ್‌ಎಸ್ ಅಣೆಕಟ್ಟೆ ಕಟ್ಟಿದ ಹಾಗೂ ನೂರಾರು ಕೆರೆ-ಕಟ್ಟೆಗಳನ್ನು ನಿರ್ಮಿಸಿದ ಭೋವಿ ಸಮಾಜವನ್ನು ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ. ಅದರಲ್ಲೂ ಭೋವಿ ಸಮಾಜದ ಮತಗಳನ್ನು ಪಡೆದ ರಾಜಕಾರಣಿಗಳು ಅವರಿಗೆ ಮೂಲ ಸೌಕರ್ಯ ಒದಗಿಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಭೋವಿ ಸಮಾಜದ ಜಿಲ್ಲಾಧ್ಯಕ್ಷ ಟಿ.ಸಿ.ಗುರಪ್ಪ ಆರೋಪಿಸಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಗುರು ಸಿದ್ದರಾಮೇಶ್ವರ ಜಯಂತೋತ್ಸವದಲ್ಲಿ ಮಾತನಾಡಿ, ಭೋವಿ ಜನಾಂಗದ ಕುಲ ಕಸುಬುಗಳಾದ ಕೆರೆಕಟ್ಟೆ ಕಟ್ಟುವುದು, ಬಾವಿ, ದೇವಸ್ಥಾನ, ಕಾಲುವೆ, ಕೋಟೆಗಳನ್ನು ನಿರ್ಮಿಸುವುದು ಮೂಲವಾಗಿದೆ ಎಂದರು.
ಈಗಲೂ ಸಹ ನಮ್ಮ ಸಮುದಾಯದ ಜನರು ಅದೇ ಕಸುಬನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ, ಈಗಿನ ಕಾಲಘಟ್ಟದಲ್ಲಿ ಭೋವಿ ಸಮಾಜವನ್ನು ಮುನ್ನೆಲೆಗೆ ತರದೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.12ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ಎಲ್ಲ ಜಾತಿ ಜನಾಂಗದವರನ್ನು ಸಮಾನತೆಯಿಂದ ಕಾಣಬೇಕು ಎಂಬ ದೃಷ್ಟಿಯಿಂದ ಪ್ರತಿಯೊಂದು ಜಾತಿಯಿಂದ ಅಸ್ಪೃಶ್ಯತೆ ಹೋಗಲಾಡಿಸುವ ಸಲುವಾಗಿ ಜಾತಿಯವರನ್ನು ಸೇರಿಸಿ ಮಂತ್ರಿಮಂಡಲ ರಚನೆ ಮಾಡಿ ಭೋವಿ ಜನಾಂಗದ ಸಿದ್ದರಾಮೇಶ್ವರರವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು ಎಂಬುವುದು ಸಂತೋಷದ ವಿಷಯ ಎಂದರು.
ಯಾವುದೇ ಪಕ್ಷದ ರಾಜಕಾರಣಿಗಳಾಗಲಿ ಎಲ್ಲ ಸಮುದಾಯದ ಮತಗಳು ಅವರಿಗೆ ಬೇಕು. ಆದರೆ, ಗೆದ್ದ ನಂತರ ಅವರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಮತ ಕೇಳುವ ವೇಳೆ ಎಲ್ಲ ಗ್ರಾಮಗಳಿಗೂ ಭೇಟಿ ನೀಡುತ್ತಾರೆ. ಗೆದ್ದ ನಂತರ ಆ ಗ್ರಾಮಗಳ ಸಮಸ್ಯೆ, ಸ್ಥಿತಿ-ಗತಿಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾವ ರಾಜಕಾರಣಿಗಳು ಕೆಲಸ ಮಾಡುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಸಮುದಾಯದ ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜನಾಂಗಕ್ಕೆ ಅನುಕೂಲ ಮಾಡಬೇಕು ಎಂದರು.ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಮಾತನಾಡಿ, ಗುರು ಸಿದ್ದರಾಮೇಶ್ವರರು 12ನೇ ಶತಮಾನದ ಬಹುದೊಡ್ಡ ವಚನಾಕಾರರು. ಇವರು ರಚಿಸಿರುವ 18,000 ವಚನಗಳು ಎಂದು ಉಲ್ಲೇಖ ಇದೆ. ಲಭ್ಯವಿರುವುದು ಸುಮಾರು ಎರಡು ಸಾವಿರ ವಚನಗಳು ಮಾತ್ರ. ಅಲ್ಲಮಪ್ರಭುಗಳ ವಿಶ್ವಗುರು ಬಸವಣ್ಣನವರ ಸಾರಥ್ಯದಲ್ಲಿ ಅನುಭವ ಮಂಟಪವನ್ನು ರಚಿಸಿ ಅನುಭವ ಮಂಟಪದಲ್ಲಿ ಎಲ್ಲಾ ಧರ್ಮಿಯರು, ಎಲ್ಲಾ ಜನಾಂಗದವರು ಜಾತಿ ವರ್ಗ ರಹಿತವಾದ ಜಾತ್ಯತೀತ ಸಮಾಜವನ್ನು ನಿರ್ಮಿಸಿದವರು ಎಂದರು.
ವಿಶ್ವ ಗುರು ಬಸವಣ್ಣನವರಿಗೆ ಅತ್ಯಂತ ಆತ್ಮೀಯರಲ್ಲಿ ಸಿದ್ದರಾಮೇಶ್ವರರು ಒಬ್ಬರು. ಸಮಾಜ ಸುಧಾರಣೆಗಾಗಿ ನೂರಾರು ಕೆರೆಗಳನ್ನು ನಿರ್ಮಿಸಿ ನೊಂದವರಿಗೆ ನ್ಯಾಯ ದೊರಕಿಸುವ ಮಹತ್ವದ ಕೆಲಸದ ಜೊತೆಗೆ ತಮ್ಮ ವಚನಗಳ ಮುಖಾಂತರ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಸ್.ಸಂತೋಷ್ ಮಾತನಾಡಿ, 12ನೇ ಶತಮಾನದ ಪಂಚ ಶ್ರೇಷ್ಠ ವಚನಕಾರರಲ್ಲಿ ಸಿದ್ದರಾಮೇಶ್ವರರು ಒಬ್ಬರು. ಸೊಲ್ಲಾಪುರ ಗ್ರಾಮದಲ್ಲಿ ಜನಿಸಿದ ಇವರು ಅಂದಿನ ಕಾಲದ ರಾಜರು ನೀಡಿದ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಬಂದ ಆದಾಯದಲ್ಲಿ ಸಾರ್ವಜನಿಕವಾಗಿ ಕೆರೆ, ಬಾವಿ, ದೇವಸ್ಥಾನ, ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಇಲ್ಲಿಯವರೆಗೂ ಅವರು ಮಾಡಿರುವ ಕೆಲಸ ಕಾರ್ಯಗಳು ಯಾವುದೇ ಅವನತಿಯಾಗದೆ ಚಾಲ್ತಿಯಲ್ಲಿರುವುದನ್ನು ಕಾಣಬಹುದು ಎಂದರು.
12ನೇ ಶತಮಾನದಲ್ಲೇ ಜಾತಿ ನಿರ್ಮೂಲನೆ, ಗಂಡು-ಹೆಣ್ಣಿನ ಬಗ್ಗೆ ಸಮಾನತೆ, ಸರಳ ವಿವಾಹ, ಅನ್ನದಾಸೋಹದಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿ ಪ್ರಖ್ಯಾತಿ ಪಡೆದವರು. ಹೀಗಾಗಿ ಇಂತಹ ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಸುಸಂಸ್ಕೃತ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಅವರ ತತ್ವ ಸಿದ್ಧಾಂತಗಳನ್ನು ರೂಪಿಸಿಕೊಂಡು ಮುನ್ನಡೆಯಬೇಕು ಎಂದರು.ಕಾರ್ಯಕ್ರಮದಲ್ಲಿ ತಾಪಂ ಇಒ ಲೋಕೇಶ್ ಮೂರ್ತಿ, ರೇಷ್ಮೆ ಇಲಾಖೆ ರವಿಕುಮಾರ್, ಶಿರಸ್ತೇದಾರ್ ಮೋಹನ್ ಕುಮಾರ್, ಪುರಸಭೆ ಸದಸ್ಯ ಶಿವಕುಮಾರ್, ಭೋವಿ ಜನಾಂಗದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರು ಮಳವಳ್ಳಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ದಸಂಸ ಮುಖಂಡರಾದ ಎಂ.ವಿ.ಕೃಷ್ಣ, ಡಿ.ಕೆ.ಅಂಕಯ್ಯ, ಹಾರೋಹಳ್ಳಿ ಗಿರಿಸ್ವಾಮಿ ಇತರರಿದ್ದರು.