ಸಾರಾಂಶ
-ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶ -ಮೂಲಭೂತ ಹಕ್ಕುಗಳ ಸಮರ್ಪಕ ಜಾರಿಗೆ ಸರ್ಕಾರಗಳು ವಿಫಲ ಆರೋಪ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣಶಿಕ್ಷಣ, ಆರೋಗ್ಯ ಎಂಬುದು ಎಲ್ಲರಿಗೂ ದೊರಕಬೇಕಾದ ಮೂಲಭೂತ ಹಕ್ಕಾಗಿದ್ದು, ಇವುಗಳನ್ನು ಕಲ್ಪಿಸಲಾಗದ ಮೇಲೆ ಸರ್ಕಾರಗಳು ಇದ್ದು ಏನು ಪ್ರಯೋಜನ ಎಂದು ರಾಜ್ಯ ಎಸ್‌ಡಿಎಂಸಿ ವೇದಿಕೆ ಸಂಸ್ಥಾಪಕ ಮಹಾಪೋಷಕ ಡಾ.ನಿರಂಜನಾರಾಧ್ಯ ಪ್ರಶ್ನಿಸಿದರು.
ನಗರದಲ್ಲಿ ರಾಮನಗರ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಸಾವ್ರರ್ತಿಕವಾಗಿ ಶಿಕ್ಷಣ ಸಿಗಬೇಕು. ಆಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ೨೦೧೦ ಶಿಕ್ಷಣದ ಮೂಲಭೂತ ಹಕ್ಕು ಕಾಯಿದೆ ಜಾರಿಯಾಯಿತು. ಅದು ಸಹ ನ್ಯಾಯಾಲಯದಿಂದ ಜಾರಿಯಾಯಿತು. ಜೀವಿಸುವ ಹಕ್ಕು ಮೂಲಭೂತವಾದರೆ, ಶಿಕ್ಷಣ ಮೂಲಭೂತ ಹಕ್ಕಾಗಿದೆ ಎಂದು ತೀರ್ಪು ನೀಡಿದ ಕಾರಣ ಕಾಯಿದೆ ಜಾರಿಯಾಯಿತು. ಆದರೆ ಅದಾಗಿ ೧೪ ವರ್ಷಗಳಾದರೂ ಇನ್ನು ಆ ಮೂಲಭೂತ ಹಕ್ಕು ಸಮರ್ಪಕವಾಗಿ ಜಾರಿಯಾಗಿದೆಯೇ ಎಂದು ನಾವು ಪರಾಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.ಈ ಕಾಯಿದೆ ರಾಜ್ಯದಲ್ಲಿ ಜಾರಿಯಾದಾಗ ೨೦೧೪-೧೫ರಲ್ಲಿ ೪೯ ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಇದ್ದವು. ಆದರೆ, ಪ್ರಸ್ತತ ಸಾಲಿನಲ್ಲಿ ಸುಮಾರು ೪೭ ಸಾವಿರ ಸರ್ಕಾರಿ ಶಾಲೆಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ೨ ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಲಾಗಿದೆ. ಇದೇ ಅವಧಿಯಲ್ಲಿ ರಾಮನಗರದಲ್ಲಿ ೧೪೭೩ ಶಾಲೆಗಳು ಇದ್ದವು. ಆದರೆ ಇಂದು ೧೨೯೫ಕ್ಕೆ ಇಳಿದಿದ್ದು, ಸುಮಾರು ೧೭೮ ಶಾಲೆಗಳನ್ನು ಮುಚ್ಚಲಾಗಿದೆ. ಉತ್ತಮ ಆಶಯ ಇಟ್ಟುಕೊಂಡು ಜಾರಿಗೆ ತಂದ ಕಾಯಿದೆಗಳು ಪ್ರಜಾಪ್ರಭುತ್ವದ ಅಸಡ್ಡೆಯಿಂದ ಯಾವ ರೀತಿ ಹಳ್ಳಹಿಡಿಯುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದರು.
ಶಿಕ್ಷಣ ಹಕ್ಕು ಕಾಯಿದೆ ಜಾರಿಯಾಗಿ ೧೪ ವರ್ಷವಾಗಿದ್ದರೂ ಅದನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ವಿಫಲರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಖಾಸಗೀಕರಣ ಮಿತಿ ಮೀರಿದ್ದು, ಎಲ್‌ಕೆಜಿಗೆ ಮಗುವನ್ನು ಸೇರಿಸಲು ಲಕ್ಷಾಂತರ ವ್ಯಯಿಸುವಂತಾಗಿದೆ. ಮತ್ತೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಸಂವಿಧಾನಬದ್ಧವಾಗಿ ನೀಡಬೇಕಾದ ಹಕ್ಕನ್ನು ನೀಡಲು ನಾವು ಸೋತಿದ್ದೇವೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ದುರ್ಬಲವಾಗುತ್ತಿದೆ. ಸಂವಿಧಾನ ಆಶಯವಾದ ಸಮಾನತೆ ಸಾಕಾರಗೊಳ್ಳಲು ಶೈಕ್ಷಣಿಕ ವ್ಯವಸ್ಥೆ ಬಲಿಷ್ಠವಾಗಬೇಕಿದೆ ಎಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸವಿತಾ ಮಾತನಾಡಿ, ಸರ್ಕಾರಿ ಶಾಲೆಗಳನ್ಜು ಉಳಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದು ಸಮರ್ಪಕವಾಗಿ ಜಾರಿಯಾಗಬೇಕಿದೆ. ಪೋಷಕರು ತಮ್ಮ ಹಕ್ಕಗಳನ್ನು ತಿಳಿದುಕೊಂಡರೆ ಅರ್ಧ ಸಮಸ್ಯೆ ಪರಿಹಾರವಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಲದು, ಶಾಲೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಸಾಹಿತಿ ಕಾಳೇಗೌಡ ನಾಗವಾರ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜೇಗೌಡ, ಬಿಇಒ ಮರೀಗೌಡ, ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಶಂಭೂಗೌಡ ನಾಗವಾರ, ಇಒ ಶಿವಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಕುಸುಮಲತಾ ಇತರರಿದ್ದರು.