ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ನಡೆದ ತಾರಕಕ್ಕೇರಿದ ಶೀತಲ ಸಮರದಲ್ಲಿ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಿದ್ದು, ಪ್ರಕರಣದ ತನಿಖೆ ಕುರಿತು ರಾಜ್ಯಪಾಲ ನೀಡಿದ್ದ ಪೂರ್ವಾನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.ಆದರೆ, ರಾಜ್ಯಪಾಲರು ಪೂರ್ವಾನುಮತಿ ನೀಡಿರುವ ಆದೇಶವನ್ನು ಪಿಸಿ ಕಾಯ್ದೆ ಸೆಕ್ಷನ್ 17ಎ ಅಡಿ ಸೀಮಿತವಾಗಿ ಅಂದರೆ ಪ್ರಕರಣದ ಪ್ರಾಥಮಿಕ ತನಿಖೆಗೆ ಅನುಮೋದನೆ ಎಂದು ಪರಿಗಣಿಸಬೇಕು. ಏಕೆಂದರೆ, ಈ ಪ್ರಕರಣದ ಫಲಾನುಭವಿ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯೇ ಆಗಿರುವುದರಿಂದ ನಿಸ್ಸಂದೇಹವಾಗಿ ತನಿಖೆಯ ಅಗತ್ಯವಿದೆ. ಆದರೆ, ರಾಜ್ಯಪಾಲರು ಬಿಎನ್‌ಎಸ್‌ಎಸ್ ಸೆಕ್ಷನ್ 218 ಅಡಿಯ ಪ್ರಾಸಿಕ್ಯೂಷನ್‌ಗೆ ಅನುಮೋದನೆ ನೀಡಿರುವುದು ಅನಗತ್ಯ. ಏಕೆಂದರೆ, ಪ್ರಕರಣ ಆ ಹಂತ ತಲುಪಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಸಂಬಂಧ ರಾಜ್ಯಪಾಲರು ಪಿಸಿ ಕಾಯ್ದೆ ಸೆಕ್ಷನ್ 17ಎ ಹಾಗೂ ಬಿಎನ್‌ಎಸ್‌ಎಸ್ ಸೆಕ್ಷನ್ 218 ಅಡಿಯ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಿ ಆ.17ರಂದು ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಮಂಗಳವಾರ 197 ಪುಟಗಳ ತೀರ್ಪು ಪ್ರಕಟಿಸಿದೆ.ಇದೇ ವೇಳೆ ಮೇಲ್ಮನವಿ ಸಲ್ಲಿಸುವವರೆಗೆ ಈ ತೀರ್ಪಿಗೆ ತಡೆಯಾಜ್ಞೆ ನೀಡಬೇಕೆಂಬ ಮುಖ್ಯಮಂತ್ರಿಗಳ ಮನವಿಯನ್ನು ಸಹ ನ್ಯಾಯಪೀಠ ತಿರಸ್ಕರಿಸಿದೆ. ಜತೆಗೆ ಪ್ರಾಸಿಕ್ಯೂಷನ್ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧ ಆತುರದ ಕ್ರಮ ಜರುಗಿಸಬಾರದು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮತ್ತು ಲೋಕಾಯುಕ್ತರಿಗೆ ಸೂಚಿಸಿ ಆ.19ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ತೆರವು ಮಾಡಿದೆ.
ರಾಜ್ಯಪಾಲರ ನಿರ್ಧಾರ ಸರಿ:ಪೂರ್ವಾನುಮತಿ ನೀಡುವ ಮುನ್ನ ತಮ್ಮ ರಾಜ್ಯಪಾಲರು ವಿವೇಚನೆ ಬಳಸಿಲ್ಲ, ಅನುಮತಿ ನೀಡುವ ಆದೇಶವನ್ನು ಹಿಂಪಡೆಯಬೇಕೆಂಬ ಸಚಿವ ಸಂಪುಟದ ಸಲಹೆಯನ್ನು ತಿರಸ್ಕರಿಸಲು ಅವಕಾಶವಿಲ್ಲ, ಅವರು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಮುಖ್ಯಮಂತ್ರಿಗಳ ಪರ ವಕೀಲರ ವಾದವನ್ನು ನ್ಯಾಯಪೀಠ ತಳ್ಳಿ ಹಾಕಿದೆ. ರಾಜ್ಯಪಾಲರು ಎಲ್ಲ ಅಂಶಗಳನ್ನು ಪರಿಶೀಲಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ, ಅಸಾಧಾರಣ ಸಂದರ್ಭದಲ್ಲಿ ಸಚಿವ ಸಂಪುಟದ ಸಲಹೆ ಪರಿಗಣಿಸದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.ರಾಜ್ಯಪಾಲರು ಪೂರ್ವಾನುಮತಿ ನೀಡಿರುವ ಆದೇಶವನ್ನು ಪಿಸಿ ಕಾಯ್ದೆ ಸೆಕ್ಷನ್ 17ಎ ಅಡಿ ಸೀಮಿತವಾಗಿ ಓದಬೇಕೇ ಹೊರತು ಬಿಎನ್‌ಎಸ್‌ಎಸ್ ಸೆಕ್ಷನ್ 218 ಅಡಿ ಪ್ರಾಸಿಕ್ಯೂಷನ್‌ಗೆ ಅನುಮೋದನೆ ನೀಡಿರುವ ಆದೇಶವಾಗಿ ಅಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಬಿಎನ್‌ಎಸ್‌ಎಸ್ ಸೆಕ್ಷನ್ 218 ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವುದಾಗಿದೆ. ಪಿಸಿ ಕಾಯ್ದೆ ಸೆಕ್ಷನ್ 17ಎ ಅಡಿಯಲ್ಲಿ ಪೊಲೀಸ್ ಅಧಿಕಾರಿಯಿಂದ ಪ್ರಾಥಮಿಕ ತನಿಖೆ ನಡೆಸಲು ಮಾತ್ರ ರಾಜ್ಯಪಾಲರ ಪೂರ್ವಾನುಮತಿಯನ್ನು ಅನುಮೋದಿಸಿದೆ.
ಇನ್ನು ತನಿಖೆ ನಡೆದು ತನಿಖಾಧಿಕಾರಿಗಳು ಸಂಬಂಧಪಟ್ಟ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರವೇ ಪ್ರಾಸಿಕ್ಯೂಷನ್ ವಿಚಾರ ಪ್ರಸ್ತುತವಾಗುತ್ತದೆ. ಆಗ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಬೇಕಾಗುತ್ತದೆ. ಇದರಿಂದ ಸದ್ಯದ ಮಟ್ಟಿಗೆ ಬಿಎನ್‌ಎಸ್ ಸೆಕ್ಷನ್ 218 ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂಗತಿ ಅಪ್ರಸ್ತುತವಾಗುತ್ತದೆ.-------
ನನ್ನ ಆದೇಶಕ್ಕೆ ನಾನೇ ತಡೆ ನೀಡೋದಿಲ್ಲ: ಜಡ್ಜ್ನ್ಯಾಯಪೀಠ ತೀರ್ಪು ಪ್ರಕಟಿಸಿದ ಕೂಡಲೇ ಆನ್‌ಲೈನ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಮುಖ್ಯಮಂತ್ರಿಗಳ ಪರ ಹಿರಿಯ ವಕೀಲ ಡಾ.ಅಭಿಷೆಕ್ ಮನು ಸಿಂಘ್ವಿ ಅವರು, ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲಾಗುವುದು. ಅದಕ್ಕಾಗಿ ಎರಡು ವಾರಗಳ ಕಾಲ ನಿಮ್ಮ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನು ಕೋರಿದರು. ಅದಕ್ಕೆ ನಿರಾಕರಿಸಿದ ನ್ಯಾಯಮೂರ್ತಿಗಳು, ನನ್ನ ಆದೇಶಕ್ಕೆ ನಾನೇ ತಡೆಯಾಜ್ಞೆ ನೀಡುವುದಿಲ್ಲ. ಆದೇಶ ಪ್ರತಿಯನ್ನು ಮಧ್ಯಾಹ್ನ 2.30ರ ಒಳಗೆ ಬಿಡುಗಡೆ ಮಾಡಲಾಗುವುದು. ಅದನ್ನು ಆಧರಿಸಿ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿತು. ಇದರಿಂದ ಮೇಲ್ಮನವಿ ಸಲ್ಲಿಸುವವರೆಗೂ ತೀರ್ಪಿಗೆ ತಡೆಯಾಜ್ಞೆ ಸಿಗಬಹುದು ಎಂಬ ಮುಖ್ಯಮಂತ್ರಿಗಳ ಪರ ವಕೀಲರ ನಿರೀಕ್ಷೆ ಹುಸಿಹೋಯ್ತು.