ಮೂಡಿಗೆರೆಯ 3 ಕಾಡಾನೆ ಸೆರೆ ಹಿಡಿಯಲು ಸರ್ಕಾರ ಆದೇಶ

| Published : Nov 25 2023, 01:15 AM IST

ಸಾರಾಂಶ

ಮೂಡಿಗೆರೆಯ 3 ಕಾಡಾನೆ ಸೆರೆ ಹಿಡಿಯಲು ಸರ್ಕಾರ ಆದೇಶಮೇಕನಗದ್ದೆ ಭಾಗದಲ್ಲಿ ಸಂಚರಿಸುತ್ತಿರುವ 3 ಕಾಡಾನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ, ಗೌಡಹಳ್ಳಿ, ಭೈರಾಪುರ, ಹೊಸಕೆರೆ ಹಾಗೂ ಮೇಕನಗದ್ದೆ ಭಾಗದಲ್ಲಿ ಸಂಚರಿಸುತ್ತಿರುವ 3 ಕಾಡಾನೆಗಳನ್ನು ಸೆರೆ ಹಿಡಿಯಲು ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.ಮೂಡಿಗೆರೆ ವಲಯ ಅರಣ್ಯಾಧಿಕಾರಿ ಹಾಗೂ ಚಿಕ್ಕಮಗಳೂರು ವಿಭಾಗದ ಅರಣ್ಯಾಧಿಕಾರಿಗಳ ಕೋರಿಕೆ ಮೇರೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಆದೇಶ ಹೊರಡಿಸಿದ್ದಾರೆ.ಭೈರಾಪುರ ಸುತ್ತಮುತ್ತ ಸಂಚರಿಸುತ್ತಿರುವ 3 ಕಾಡಾನೆಗಳು ಆಗಾಗ ಜನರ ಮೇಲೆ ದಾಳಿ ನಡೆಸುತ್ತಿವೆ. ಹೊರ ಗುತ್ತಿಗೆ ಆಧಾರದ ಮೇಲೆ ಆನೆ ನಿಗ್ರಹ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ. ಕಾರ್ತಿಕ್‌ ಎಂಬುವವರ ಮೇಲೆ ನ.22 ರಂದು ಕಾಡಾನೆ ದಾಳಿ ನಡೆಸಿದ್ದರಿಂದ ಅವರು ಮೃತಪಟ್ಟಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಅನುಮತಿ ನೀಡಬೇಕೆಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಕೋರಿಕೊಂಡಿದ್ದರು.ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಅರ್ಜುನ, ಹರ್ಷ, ಲಕ್ಷ್ಮಣ, ಈಶ್ವರ ಮತ್ತು ರಂಜನ್‌ ಎಂಬ ಕುಮ್ಕಿ ಆನೆಗಳು ಹಾಗೂ ನಾಗರಹೊಳೆಯಿಂದ ಅಭಿಮನ್ಯು ಮತ್ತು ಮಹೇಂದ್ರ ಕುಮ್ಕಿ ಆನೆಗಳನ್ನು ಕಳುಹಿಸಬೇಕು ಜತೆಗೆ ಪಶು ವೈದ್ಯರಾದ ಡಾ. ರಮೇಶ್‌ ಅವರನ್ನು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ನಿಯೋಜಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಚಿಕ್ಕಮಗಳೂರು ‍ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ ಬಾಬು ಗುರುವಾರ ಪತ್ರ ಬರೆದಿದ್ದರು.ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಆ ಮೂರು ಆನೆಗಳನ್ನು ಗುರುತಿಸಿ ಸೆರೆ ಹಿಡಿದು ರೇಡಿಯೋ ಕಾಲರಿಂಗ್‌ ಮಾಡಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರಿಸಲು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಸೆಕ್ಷನ್‌ 11 (1) (ಎ) ರನ್ವಯ ಅನುಮತಿ ನೀಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.ಸೆರೆ ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು, ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಿದ್ದಾರೆ.