ಇಂದಿನಿಂದ ಪಾಲಿಕೆಯಲ್ಲಿ ರಾಜ್ಯೋತ್ಸವ ಸಂಭ್ರಮ

| Published : Nov 25 2023, 01:15 AM IST

ಸಾರಾಂಶ

ಕಲೆ, ಕ್ರೀಡೆ, ಸಾಹಿತ್ಯ, ಕುಶಲ ಕಲೆ ಸೇರಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ಮೇಯರ್ ಬಿ.ಎಚ್‌.ವಿನಾಯಕ ಪೈಲ್ವಾನ್

ಕಲೆ, ಕ್ರೀಡೆ, ಸಾಹಿತ್ಯ, ಕುಶಲ ಕಲೆ ಸೇರಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ಮೇಯರ್ ಬಿ.ಎಚ್‌.ವಿನಾಯಕ ಪೈಲ್ವಾನ್

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾನಗರ ಪಾಲಿಕೆ, ಕನ್ನಡ ಪರ ಸಂಘ-ಸಂಸ್ಥೆಗಳು, ಪತ್ರಕರ್ತರ ಸಂಯುಕ್ತಾಶ್ರಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭ ನ.25ರಿಂದ ಮೂರು ದಿನಗಳ ಕಾಲ ಪಾಲಿಕೆ ಆವರಣದ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗ ಮಂದಿರದಲ್ಲಿ ನಡೆಯಲಿದೆ ಎಂದು ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಸದಸ್ಯ ಎ.ನಾಗರಾಜ ತಿಳಿಸಿದರು.

ನಗರದ ಪಾಲಿಕೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ.25ರ ಬೆಳಿಗ್ಗೆ 9.30ಕ್ಕೆ ಪಾಲಿಕೆ ಆವರಣದಲ್ಲಿ ಮೇಯರ್ ವಿನಾಯಕ ಪೈಲ್ವಾನ್ ಕನ್ನಡ ಧ್ವಜಾರೋಹಣ ನೆರವೇರಿಸುವರು. ನಂತರ ಪಾಲಿಕೆಯಿಂದ ತಾಯಿ ಭುವನೇಶ್ವರಿ ಪುತ್ಥಳಿ ಮೆರವಣಿಗೆಗೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಚಾಲನೆ ನೀಡಲಿದ್ದು, ಜನ ಪ್ರತಿನಿಧಿಗಳು, ಅಧಿಕಾರಿಗಳು, ಸಂಘಟನೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸುವರು ಎಂದರು.

ಅದೇ ದಿನ ಸಂಜೆ 5.30ಕ್ಕೆ ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸಲಿದ್ದು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಭುವನೇಶ್ವರಿ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸುವರು. ಹರಿಹರದ ನಿವೃತ್ತ ಪ್ರಾಚಾರ್ಯ ಡಾ.ಭಿಕ್ಷಾವರ್ತಿಮಠ ವಿಶೇಷ ಉಪನ್ಯಾಸ ನೀಡುವರು. ಎಸ್ಪಿ ಉಮಾ ಪ್ರಶಾಂತ, ಉಪ ಮೇಯರ್ ಯಶೋಧಾ ಯೋಗೇಶ, ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಕರವೇ ಅಧ್ಯಕ್ಷ ಎಂ.ಎಸ್‌.ರಾಮೇಗೌಡ, ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀರ್‌, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶಿವಶಂಕರ್, ಕಸ್ವಾಸೇ ಸುವರ್ಣಮ್ಮ ಸೇರಿ ಇತರರು ಭಾಗವಹಿಸುವರು ಎಂದು ಹೇಳಿದರು.

ನ.26ರ ಸಂಜೆ 5.30ಕ್ಕೆ ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸಮಾರಂಭ ಉದ್ಘಾಟಿಸುವರು. ಎಂಎಲ್‌ಸಿ ಕೆ.ಅಬ್ದುಲ್ ಜಬ್ಬಾರ್‌ ಭುವನೇಶ್ವರಿ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಹೊನ್ನಾಳಿ ಕನ್ನಡ ಅಧ್ಯಾಪಕ ವಿಜಯ ಸೊಲ್ಲಾಪುರ ವಿಶೇಷ ಉಪನ್ಯಾಸ ನೀಡುವರು. ಎಂಎಲ್ಸಿ ಕೆ.ಎಸ್.ನವೀನ, ಜಿಪಂ ಸಿಇಒ ಸುರೇಶ ಬಿ.ಇಟ್ನಾಳ, ಶಿವಮೊಗ್ಗದ ಕವಿ ಅಸಾದುಲ್ಲಾ ಬೇಗ್, ಉಪ ಮೇಯರ್ ಯಶೋಧಾ ಯೋಗೇಶ, ಕಸಸೇ ದಾಕ್ಷಾಯಣಮ್ಮ ಮಲ್ಲಿಕಾರ್ಜುನಯ್ಯ ಮತ್ತಿತರರು ಭಾಗವಹಿಸುವರು.

ನ.27ರ ಸಂಜೆ 5.30ಕ್ಕೆ ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆಯಲ್ಲಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಸಮಾರಂಭ ಉಧ್ಘಾಟಿಸಲಿದ್ದು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಭುವನೇಶ್ವರಿ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ಬೆಂಗಳೂರಿನ ಸಾಹಿತಿ ರಂಜಾನ್ ದರ್ಗಾ, ಧರ್ಮಗುರು ಜೈನಿ ಉಸ್ತಾದ್ ವಿಶೇಷ ಉಪನ್ಯಾಸ ನೀಡುವರು. ಡಿಸಿ ಡಾ.ಎಂ.ವಿ.ವೆಂಕಟೇಶ, ಉಪ ಮೇಯರ್‌ ಯಶೋಧಾ, ನಗರವಾಣಿ ಸಹ ಸಂಪಾದಕ ಬಿ.ಎನ್.ಮಲ್ಲೇಶ, ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ, ಕನ್ನಡ ಪರ ಹೋರಾಟಗಾರ ಕೆ.ಜಿ.ಶಿವಕುಮಾರ, ಕಸಂಒ ಅಧ್ಯಕ್ಷೆ ಶುಭಮಂಗಳ ಇತರರು ಭಾಗವಹಿಸುವರು. ಅಂತಾರಾಷ್ಟ್ರೀಯ ಕ್ರೀಡಾಪಟು, ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ, ಪಾಲಿಕೆ ನಿವೃತ್ತ ಆಯುಕ್ತ ಬಿ.ಎಚ್‌.ನಾರಾಯಣಪ್ಪರಿಗೆ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರಿಗೆ ಪಾಲಿಕೆ, ಮಹಾ ಜನತೆ ಪರವಾಗಿ ಪೌರ ಸನ್ಮಾನ ಮಾಡಿ, ಗೌರವಿಸಲಾಗುವುದು. ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್‌, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ, ಕೆ.ಚಮನ್ ಸಾಬ್‌, ಜಾಕೀರ್ ಅಲಿ, ಸೋಗಿ ಶಾಂತಕುಮಾರ, ಕನ್ನಡ ಪರ ಹೋರಾಟಗಾರ ನಾಗೇಂದ್ರ ಬಂಡೀಕರ್‌, ಸರ್ವಮಂಗಳ ಇತರರಿದ್ದರು.

...........

ಮೂರು ದಿನವೂ ವಿಶೇಷ ಮನರಂಜನೆ ಕಾರ್ಯಕ್ರಮಗಳು

ಶನಿವಾರದ ವಿಶೇಷ:

ಭಾರತಿ ಮ್ಯೂಸಿಕಲ್ ನೈಟ್ ತಂಡದಿಂದ ರಸಮಂಜರಿ ಕಾರ್ಯಕ್ರಮ, ಬೆಂಗಳೂರಿನ ಸರಿಗಮಪ ಎಂಟರಟೈನರ್ಸ್‌ನ ಡಾ.ಶ್ರೀರಾಮ ಕಾಸರ್ ನೇತೃತ್ವದಲ್ಲಿ ದಿಯಾ ಹೆಗಡೆ, ರೂಬಿನಾ, ಅರ್ಜುನ್ ಇಟಗಿ ತಂಡದಿಂದ ರಸಮಂಜರಿ ಕಾರ್ಯಕ್ರಮ ರಾತ್ರಿ 9ಕ್ಕೆ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ರಾಮದುರ್ಗ, ವಾಣಿ, ದಾನಪ್ಪ ತಂಡದಿಂದ ನಗೆಕೂಟ ನಡೆಯಲಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ. ಈಶ್ವರಮ್ಮ ಶಾಲೆಯ ಮಕ್ಕಳು ನಾಡಗೀತೆ ಹಾಡುವರು ಎಂದು ಮಾಹಿತಿ ನೀಡಿದರು.

ಭಾನುವಾರದ ವಿಶೇಷ:

ದಿಯಾ ಮೆಲೋಡಿಸ್‌ನಿಂದ ಸಂಜೆ 5.30ಕ್ಕೆ ರಸಮಂಜರಿ, ರಾತ್ರಿ 9ಕ್ಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6ರ ಹರ್ಷಿತಾ ತಂಡದ ನೃತ್ಯವಿದೆ. ಬೆಂಗಳೂರಿನ ದರ್ಶನ್ ಮೆಳವಳಿಕೆ, ಮಹಾನ್ಯ ಪಾಟೀಲ್‌ರಿಂದ ರಸಮಂಜರಿ, ರಾಘವೇಂದ್ರ ಆಚಾರ್ ರಿಂದ ನಗೆ ಹಬ್ಬ, ರಾಜಕಿರಣ್‌ರಿಂದ ಮಿಮಿಕ್ರಿ ಇದೆ. ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದೆ.

ಸೋಮವಾರದ ವಿಶೇಷ:

ಸಂಜೆ 5.30ಕ್ಕೆ ದಾವಣಗೆರೆ ಫ್ರೆಂಡ್ಸ್ ತಂಡದಿಂದ ರಸಮಂಜರಿ, 9ಕ್ಕೆ ಬೆಂಗಳೂರಿನ ಕಂಬದ ರಂಗಯ್ಯ, ರಚಿತಮಯ್ಯ, ಶರಿದಿ ಪಾಟೀಲ್‌, ವಸುಶ್ರೀ ಹಳೆ ಮನಿ ತಂಡದಿಂದ ರಸಮಂಜರಿ ಕಾರ್ಯಕ್ರಮವಿದೆ. ಕಾಮಿಡಿ ಕಿಲಾಡಿಗಳಾದ ಪ್ರವೀಣ ಗಸ್ತಿ, ಎಚ್‌.ಮಹಾಂತೇಶ ತಂಡದಿಂದ ಮಿಮಿಕ್ರಿ ಇದೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸಮಾರಂಭದಲ್ಲಿ ಸನ್ಮಾನ. ಈ ಬಾರಿ ಸುಮಾರು 105 ಮಂದಿಗೆ ಸನ್ಮಾನಿಸಲಾಗುತ್ತಿದೆ. ಕಲೆ, ಕ್ರೀಡೆ, ಸಾಹಿತ್ಯ, ಕುಶಲಕರ್ಮಿಗಳು, ಎಲೆ ಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವವರಿಗೆ ಸನ್ಮಾನಿಸಲಾಗುತ್ತಿದೆ ಎಂದು ಎ.ನಾಗರಾಜ ತಿಳಿಸಿದರು.