ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ಅಣೆಕಟ್ಟೆಯಲ್ಲಿ ನೀರಿದ್ದರೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಮತ್ತು ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ ಜಲಾಯನ ಪ್ರದೇಶ ವ್ಯಾಪ್ತಿಯ ಜಮೀನುಗಳಲ್ಲಿ ತಾಲೂಕಿನ ರೈತರು ಬೇಸಾಯ ಮಾಡಲು ಹೇಮೆ ನೀರು ಬಿಡದೆ ವಂಚಿಸಲಾಗುತ್ತಿದೆ.

ಹೇಮಾವತಿ ಜಲಾಶಯದ ಎಡದಂಡೆ ತಾಲೂಕು ವ್ಯಾಪ್ತಿಯಲ್ಲಿ 45.975 ಕಿ.ಮೀ ಉದ್ದ ಹಾದು ಹೋಗಿದೆ. ಇದರಡಿ17 ವಿತರಣಾ ನಾಲೆಗಳಿವೆ. ಸುಮಾರು 54,088 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಖಾರೀಫ್ ಮತ್ತು ರಬಿ ಬೆಳೆಗೆ ನೀರು ಕೊಡಲು ಉದ್ದೇಶಿತ ಯೋಜನೆಯಲ್ಲಿದ್ದರೂ ರಬಿ ಬೆಳೆ ಪದ್ಧತಿ ಅನುಸರಿಸುತ್ತಿಲ್ಲ.

ನಾಲಾ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆಗೆ ಸೇರಿದ 95 ಕೆರೆಗಳಿವೆ. ಈ ಎಲ್ಲಾ ಕೆರೆಗಳು ಹೇಮೆಯ ನೀರನ್ನು ಅವಲಂಭಿಸಿವೆ. ಕೆರೆ ಬಯಲಿನಲ್ಲಿಯೂ 5255 ಎಕರೆ ಕೃಷಿ ಭೂಮಿ ಹೇಮೆ ನೀರನ್ನು ಅವಲಂಭಿಸಿದೆ. ಹೇಮಾವತಿ ಎಡದಂಡೆ ನಾಲೆಯಿಂದ ಕೆ.ಆರ್.ಪೇಟೆ ತಾಲೂಕು ಮಾತ್ರವಲ್ಲದೆ ನೆರೆಯ ಚನ್ನರಾಯಪಟ್ಟಣ, ಪಾಂಡವಪುರ, ನಾಗಮಂಗಲ ಮತ್ತು ಮಂಡ್ಯ ತಾಲೂಕಿನ ಕೆಲವು ಭಾಗಗಳಿಗೂ ಹೇಮೆಯ ನೀರು ಹರಿದು ಆಯಾ ಭಾಗದ ನೂರಾರು ಕೆರೆಗಳಿಗೂ ಇದರಿಂದ ಅನುಕೂಲವಾಗಿದೆ.

ಹಾಸನದ ಗೊರೂರಿನ ಹೇಮಾವತಿ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಕಳೆದು 13 ಟಿ.ಎಂ.ಸಿ ನೀರು ಬಳಕೆಗೆ ಲಭ್ಯವಿದೆ. ಇದರಲ್ಲಿ ಕೇವಲ 3 ಟಿ.ಎಂ.ಸಿ ನೀರು ಹರಿಸಿದರೆ ಈ ಭಾಗದ ಎಲ್ಲಾ ಕೆರೆ ಕಟ್ಟೆಗಳು ತುಂಬುತ್ತವೆ. ಆದರೆ, ಇದುವರೆಗೂ ಹೇಮೆಯ ನೀರಿನಿಂದ ಜಲಾನಯನ ಪ್ರದೇಶದ ಕೆರೆ ಕಟ್ಟೆಗಳನ್ನು ತುಂಬಿಸಿ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕೆ ಇಲಾಖೆ ಮುಂದಾಗಿಲ್ಲ.


ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಬಿರು ಬೇಸಿಗೆ ಆರಂಭವಾಗಿದೆ. ಇದರಿಂದ ತಾಲೂಕಿನ ಕೆರೆ-ಕಟ್ಟೆಗಳು ಒಣಗಲಾರಂಭಿಸಿವೆ. ಭೂಮಿ ಒಣಗಿ ಅಂತರ್ಜಲ ಮಟ್ಟ ಕುಸಿದು ರೈತರ ಸಾವಿರಾರು ಬೋರ್‌ವೆಲ್ ಗಳು ಸ್ಥಗಿತಗೊಳ್ಳುತ್ತಿವೆ. ರೈತ ಸಮುದಾಯಕ್ಕೆ ಬೆಳೆದು ನಿಂತಿರುವ ಕಬ್ಬು, ಭತ್ತ, ತೆಂಗು, ಅಡಿಕೆ, ಶುಂಠಿ ಮುಂತಾದ ಬೆಳೆಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ರೈತರ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ನಾಗಮಂಗಲ ತಾಲೂಕಿನ ಶಾಸಕರೂ ಆದ ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಮಂಡ್ಯ ಜಿಲ್ಲೆಯ ಹೇಮಾವತಿ ಜಲಾನಯನ ಪ್ರದೇಶಕ್ಕೆ ಸೇರಿದ ಯಾವೊಬ್ಬ ಶಾಸಕರೂ ಹೇಮಾವತಿ ನೀರಿಗಾಗಿ ಕನಿಷ್ಠ ಧ್ವನಿ ಎತ್ತಿ ಮಾತುಡತ್ತಿಲ್ಲ.

ಕಾವೇರಿ ಜಲಾನಯನ ಪ್ರದೇಶದಂತೆ ನೀರಿಗಾಗಿ ಪ್ರಬಲ ಹೋರಾಟ ನಡೆಸುವ ರೈತ ಸಂಘ ಹೋರಾಟ ಹೊರತುಪಡಿಸಿ ಹೇಮೆಯ ನೀರಿಗಾಗಿ ಈ ಭಾಗದ ಜನಪ್ರತಿನಿಧಿಗಳು ರೈತರ ಸಂಕಷ್ಠದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದನ್ನು ಜನಪ್ರತಿನಿಧಿಗಳು ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಕಾವೇರಿ ಜಲಾನಯನ ಪ್ರದೇಶಕ್ಕೆ ರಾಜ್ಯ ಸರ್ಕಾರ ಕಾಡಾ ಮೂಲಕ ಕಾಲಕಾಲಕ್ಕೆ ಸಭೆ ನಡೆಸಿ ಕೆ.ಆರ್.ಎಸ್, ಕಬಿನಿ ಮುಂತಾದ ಜಲಾಶಯಗಳ ಮೂಲಕ ಕಾಲುವೆಗಳಿಗೆ ನೀರು ಹರಿಸಿ ರೈತರ ಹೋರಾಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತದೆ. ಆದರೆ, ಹೇಮಾವತಿ ಜಲಾಶಯ ಕಾವೇರಿ ಕಣಿವೆಯಲ್ಲಿದ್ದರೂ ಇದು ಕೂಡಾ ವ್ಯಾಪ್ತಿಗೆ ಬರುವುದಿಲ್ಲ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರ ನಿಯಂತ್ರಣಕ್ಕೆ ಹೇಮಾವತಿ ಜಲಾಶಯ ಬರುತ್ತದೆ.

ಬಹುತೇಕ ಹೊರಗಿನವರು ಇತ್ತೀಚೆಗೆ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಅವರು ಅಷ್ಟಾಗಿ ಗಮನ ಹರಿಸುತ್ತಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ರಾಜ್ಯ ಸರ್ಕಾರದ ಮಲತಾಯಿ ಧೋರಣೆಯಿಂದ ಹೇಮಾವತಿ ಜಲಾನಯದ ಪ್ರದೇಶದ ರೈತರು ಬಿರು ಬೇಸಿಗೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಸರ್ಕಾರ ಮತ್ತು ಸಚಿವರು ನಾಲೆಗಳಿಗೆ ನೀರು ಹರಿಸಿ ರೈತರನ್ನು ರಕ್ಷಣೆ ಮಾಡಬೇಕಿದೆ.

ಹೇಮಾವತಿ ಜಲಾಶಯದ ರೈತರ ಮೇಲಿನ ಸರ್ಕಾರದ ಮಲತಾಯಿ ಧೋರಣೆ ನಿಲ್ಲಬೇಕು. ಜಲಾಶಯದ ಎಡದಂಡೆ ನಾಲೆ ಮೂಲಕ ತಾಲೂಕಿನ ಕೆರೆ ಕಟ್ಟೆಗಳಿಗೆ ಹೇಮೆ ನೀರು ಹರಿಸಬೇಕು. ಇಲ್ಲದಿದ್ದರೆ ಶೀಘ್ರ ಹೋರಾಟ ರೂಪಿಸಲಾಗುವುದು.

- ಎಂ.ವಿ.ರಾಜೇಗೌಡ, ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷರು

ಈಗ ಹೇಮಾವತಿ ಜಲಾಶಯದಲ್ಲಿ ರೈತರ ಕೃಷಿಗೆ ನೀಡಬಹುದಾದಷ್ಟು ನೀರಿನ ಸಂಗ್ರಹವಿದೆ. ಆದರೂ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಕಳೆದ ವರ್ಷವೂ ಸಾಕಷ್ಟು ನೀರಿನ ಸಂಗ್ರಹವಿದ್ದರೂ ಕಾಲುವೆಗಳಲ್ಲಿ ನೀರು ಹರಿಸದೆ ರೈತರಿಗೆ ವಂಚನೆ ಮಾಡಿತು. ಪ್ರಸಕ್ತ ಸಾಲಿನಲ್ಲೂ ವಂಚನೆಯಾಗುತ್ತಿದೆ. ಕೃಷಿ ಸಚಿವರು ಹೇಮಾವತಿ ಜಲಾನಯನ ಪ್ರದೇಶಕ್ಕೆ ಸೇರಿದವರಾಗಿದ್ದರೂ ರೈತರ ಹಿತರಕ್ಷಣೆಗೆ ಮುಂದಾಗುತ್ತಿಲ್ಲ.

- ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಸಂಘದ ಮುಖಂಡರು