ಸರ್ಕಾರಿ ಶಾಲೆ ಉಳಿವಿಗೆ ಉರುಳು ಸೇವೆ ನಡೆಸಬೇಕು

| Published : Dec 27 2024, 12:48 AM IST

ಸಾರಾಂಶ

ರಾಜ್ಯದಲ್ಲಿ 17 ಸಾವಿರ ಸರ್ಕಾರಿ ಶಾಲೆಗಳ ಹಕ್ಕುಪತ್ರ ಇಲ್ಲ. ಭಾಷೆಯ ಜೊತೆಗೆ ಸಮುದಾಯವೂ ನಶಿಸುತ್ತಿದೆ. ಭಾಷೆ- ಸಮುದಾಯ, ಶಾಲೆ ಉಳಿಸಿಕೊಳ್ಳಲು ವಿಧಾನಸೌಧದಲ್ಲಿ ಉರುಳು ಸೇವೆ ಹೋರಾಟ ಮಾಡಬೇಕಿದೆ. ನಾನು ಅಧ್ಯಕ್ಷನಾದ ಮೇಲೆ 100 ವರ್ಷ ತುಂಬಿದ ಸರ್ಕಾರಿ ಶಾಲೆಯನ್ನು ಪರಿಶೀಲಿಸಿದೆ. ಈ ಪೈಕಿ 17 ಸಾವಿರ ಸರ್ಕಾರಿ ಶಾಲೆಗಳಿಗೆ ಹಕ್ಕುಪತ್ರ ಇಲ್ಲ. ಕ್ರೀಡಾಂಗಣ ಒತ್ತುವರಿಯಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಾವು ಹಕ್ಕುಪತ್ರ ಮಾಡಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ವಿಧಾನಸೌಧದಲ್ಲಿ ಉರುಳು ಸೇವೆ ಹೋರಾಟ ನಡೆಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದರು.

ರಂಗಾಯಣದ ಬಿ.ವಿ. ಕಾರಂತ ರಂಗಚಾವಡಿಯಲ್ಲಿ ಜನಮನ ಸಾಂಸ್ಕೃತಿಕ ಸಂಘಟನೆ ಬುಧವಾರ ಆಯೋಜಿಸಿದ್ದ ಲೇಖಕ ಡಾ.ಎ.ಆರ್. ರಾಧಾಕೃಷ್ಣ ಅವರ ಅವಸಾದನದತ್ತ ನೀಲಗಿರಿ ಕನ್ನಡಿಗರು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 17 ಸಾವಿರ ಸರ್ಕಾರಿ ಶಾಲೆಗಳ ಹಕ್ಕುಪತ್ರ ಇಲ್ಲ. ಭಾಷೆಯ ಜೊತೆಗೆ ಸಮುದಾಯವೂ ನಶಿಸುತ್ತಿದೆ. ಭಾಷೆ- ಸಮುದಾಯ, ಶಾಲೆ ಉಳಿಸಿಕೊಳ್ಳಲು ವಿಧಾನಸೌಧದಲ್ಲಿ ಉರುಳು ಸೇವೆ ಹೋರಾಟ ಮಾಡಬೇಕಿದೆ. ನಾನು ಅಧ್ಯಕ್ಷನಾದ ಮೇಲೆ 100 ವರ್ಷ ತುಂಬಿದ ಸರ್ಕಾರಿ ಶಾಲೆಯನ್ನು ಪರಿಶೀಲಿಸಿದೆ. ಈ ಪೈಕಿ 17 ಸಾವಿರ ಸರ್ಕಾರಿ ಶಾಲೆಗಳಿಗೆ ಹಕ್ಕುಪತ್ರ ಇಲ್ಲ. ಕ್ರೀಡಾಂಗಣ ಒತ್ತುವರಿಯಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಾವು ಹಕ್ಕುಪತ್ರ ಮಾಡಿಲ್ಲ ಎಂದು ಅವರು ವಿಷಾದಿಸಿದರು.

ದೃಶ್ಯ ಮಾಧ್ಯಮಗಳಲ್ಲಿ ಶೇ. 75ರಷ್ಟು ಇಂಗ್ಲಿಷ್ ಬಳಕೆ ಇದೆ. ನೀಲಿಗಿರಿಯಲ್ಲಿ ಕನ್ನಡಿಗ ಸಂಖ್ಯೆ ಇಳಿದಿದೆ. 1400ಕ್ಕಿಂತ ಹೆಚ್ಚು ಕನ್ನಡ ಶಾಲೆ ಮುಚ್ಚಿವೆ. ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಸೇರಿಸಲು ಉತ್ಸುಕರಾಗಿದ್ದಾರೆ. ಇದು ಕನ್ನಡಿಗರ ಅವಸಾನವಲ್ಲವೇ ಎಂದು ಅವರು ಪ್ರಶ್ನಿಸಿದರು.

ಭಾಷಾಶಾಸ್ತ್ರಜ್ಞರ ಅಧ್ಯಯನ ಪ್ರಕಾರ ಮುಂದಿನ 100 ವರ್ಷಗಳಲ್ಲಿ ಶೇ. 96ರಷ್ಟು ಜನರು ಮಾತನಾಡುವ ಭಾಷೆ ಸತ್ತು. ಶೇ. 3ರಷ್ಟು ಜನರು ಮಾತನಾಡುವ ಭಾಷೆಗಳು ಆಳ್ವಿಕೆ ಆರಂಭಿಸಲಿವೆ. ಕನ್ನಡ ಮತ್ತು ಇತರೆ ಸಣ್ಣ ಭಾಷೆಗಳು ನಾಶವಾಗುತ್ತದೆ. ಕಳೆದ 2011ರ ಜನಗಣಿತಿ ಪ್ರಕಾರ 2010ರಲ್ಲಿ ಬೋ, 2020ರಲ್ಲಿ ಸಾರ ಭಾಷೆ ಸತೋ ಹೋಯಿತು. ಮುಂದಿನ 50 ವರ್ಷದಲ್ಲಿ ಭಾರತದ 172 ಭಾಷೆಗಳು ಸಾಯಲಿವೆ ಎಂದು ಯುನೆಸ್ಕೋ ಹೇಳಿದೆ. ಕೊರಗ, ಕೊಡವ ಸೇರಿದಂತೆ ರಾಜ್ಯದಲ್ಲಿನ ಭಾಷೆಗಳು ದಶಕಗಳಲ್ಲಿ ಅವಸಾನದ ಅಂಚಿಗೆ ತಲುಪುತ್ತಿವೆ. ರಾಜ್ಯದ 28 ಬುಡಕಟ್ಟುಗಳು 100 ವರ್ಷದಲ್ಲಿ ನಾವಾವಶೇಷವಾಗಲಿವೆ ಎಂದರು.

ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ ಮಾತನಾಡಿ, ನೀಲಗಿರಿ ಕಾಶ್ಮೀರದಂತೆ ರಾಜ್ಯದ ಮುಕುಟ ಮಣಿ ಆಗಬೇಕಿತ್ತು. ಮೂಲ ನಿವಾಸಿಗಳಾದ ಕನ್ನಡಿಗರು ಬ್ರಿಟಿಷರಲ್ಲಿ ಆಸ್ತಿ ಹಕ್ಕು ಕೇಳಿದ್ದರೆ, ಅದು ಕರ್ನಾಟಕದ ಭಾಗವಾಗುತ್ತಿತ್ತು ಎಂದು ಹೇಳಿದರು.

ಸ್ವಾತಂತ್ರ್ಯ ಬಂದಾಗ ಅಲ್ಲಿನ ಕನ್ನಡಿಗರು, ಕರ್ನಾಟಕ ಸರ್ಕಾರ ಹಾಗೂ ಇಲ್ಲಿನ ಕನ್ನಡಿಗರು, ಭಾಷಾಭಿವಾನಿಗಳು, ಹೋರಾಟಗಾರರು ನೀಲಗಿರಿ ತಮ್ಮ ನೆಲವೆಂದು ಪ್ರತಿಪಾದಿಸಲೇ ಇಲ್ಲ. ಧರ್ವಾರ್ಥವಾಗಿ ತಮಿಳುನಾಡಿಗೆ ಬಿಟ್ಟುಕೊಟ್ಟೆವು. ಇದು ನಾಡಿನ ದುರಂತ ಎಂದರು.

ಊಟಿಯ ಸಪ್ತಗಿರಿ ಟೀ ತೋಟಗಳನ್ನು ಕಂಪನಿಗಳಿಗೆ ಬ್ರಿಟಿಷರು ಮಾರಿ ಹೋದರು. ಭೂ ಸುಧಾರಣಾ ಕಾಯ್ದೆಯೇ ಇಲ್ಲವಾದಾಗ ಕಂಪನಿಗಳಿಗೆ ಹೇಗೆ ನೋಂದಣಿ ಮಾಡಿಕೊಡಲಾಯಿತು ಎಂಬುದೇ ಪ್ರಶ್ನೆಯಾಗಿದೆ. ಅಲ್ಲಿನ ಭೂಮಿ ದಾಖಲೆಗಳು ತಮಿಳುನಾಡಿನ ಬಳಿಯೂ ಇಲ್ಲ. ಈಗ ಅಲ್ಲಿನ ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದರು.

ನೀಲಗಿರಿಯ ಕನ್ನಡಿಗರು ಕನ್ನಡಿಗರೆಂದು ಹೇಳಿಕೊಳ್ಳುವ ಬದಲು ಮೂಲ ನಿವಾಸಿಗಳೆಂದು ಬಲವಾಗಿ ಪ್ರತಿಪಾದಿಸಬೇಕು. ಆಗ, ಅನುಸೂಚಿತ ಪ್ರದೇಶಗಳೆಂದು ಘೋಷಣೆ ಆಗುತ್ತದೆ. ಇಲ್ಲದಿದ್ದರೆ, ನೀಲಗಿರಿ ಕನ್ನಡಿಗರು ಶಿವರಾಮಕಾರಂತರ ಚೋಮನದುಡಿ ಕಾದಂಬರಿಯ ಚೋಮನಂತೆ ಕೊನೆವರೆಗೂ ಭೂಮಿ ಸಿಗದಂತಾಗುತ್ತದೆ ಎಂದು ಸಲಹೆ ನೀಡಿದರು.

ಲೇಖಕ ಪರಮಶಿವ ನಡುಬೆಟ್ಟ, ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ರಂಗಾಯಣದ ಮಾಜಿ ನಿರ್ದೇಶಕರಾದ ಸಿ. ಬಸವಲಿಂಗಯ್ಯ, ಎಚ್. ಜನಾರ್ಧನ್, ನಿವೃತ್ತ ಎಂಜಿನಿಯರ್ ಟಿ.ಆರ್. ಸ್ವಾಮಿ, ಅಹಿಂದ ಜವರಪ್ಪ ಇದ್ದರು.