ಕಾರ್ಮಿಕ ಕಾಯ್ದೆ ವಿರೋಧಿಸಿ ಗ್ರಾಪಂ ನೌಕರರ ಪ್ರತಿಭಟನೆ

| Published : Jul 10 2025, 12:48 AM IST

ಸಾರಾಂಶ

ಕೇಂದ್ರ ಸರ್ಕಾರ 2019 ಮತ್ತು 2020ರಲ್ಲಿ ಸಂಸತ್ತಿನಲ್ಲಿ ೪ ಕಾರ್ಮಿಕ ಕಾಯ್ದೆಗಳನ್ನು ಅಂಗೀಕರಿಸಿ, ಅದರಲ್ಲಿರುವ ಕಾರ್ಮಿಕ ವಿರೋಧಿ ಅಂಶಗಳನ್ನು ಜಾರಿಗೆ ತರಲು ಹಿಂಬಾಗಿಲಿನಿಂದ ಪ್ರಯತ್ನ ಮಾಡುತ್ತಿದೆ .

ಗುಂಡ್ಲುಪೇಟೆ: ಸಂಸತ್ತಿನಲ್ಲಿ ಕಾರ್ಮಿಕ ಕಾಯ್ದೆಯನ್ನು ಅಂಗೀಕರಿಸಿರುವುದನ್ನು ಖಂಡಿಸಿ, ರಾಜ್ಯ ಗ್ರಾಪಂ ನೌಕರರು ಪಟ್ಟಣದಲ್ಲಿ ಪ್ರತಿಭಟಿಸಿದರು. ಪಟ್ಟಣದ ಹಳೆ ಪ್ರವಾಸಿ ಮಂದಿರದಿಂದ ಮೆರವಣಿಗೆ ತೆರಳಿ ಚಾ.ನಗರ ರಸ್ತೆ ಮೂಲಕ ಕೋಡಹಳ್ಳಿ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಹಳೆ ಬಸ್‌ ನಿಲ್ದಾಣ, ಎಂಸಿಡಿಸಿಸಿ ಬ್ಯಾಂಕ್‌ ವೃತ್ತದ ಮೂಲಕ ತಾಪಂ ಮುಂದೆ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಸರ್ಕಾರ 2019 ಮತ್ತು 2020ರಲ್ಲಿ ಸಂಸತ್ತಿನಲ್ಲಿ ೪ ಕಾರ್ಮಿಕ ಕಾಯ್ದೆಗಳನ್ನು ಅಂಗೀಕರಿಸಿ, ಅದರಲ್ಲಿರುವ ಕಾರ್ಮಿಕ ವಿರೋಧಿ ಅಂಶಗಳನ್ನು ಜಾರಿಗೆ ತರಲು ಹಿಂಬಾಗಿಲಿನಿಂದ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾರ್ಮಿಕ ಕಾಯ್ದೆ ಜಾರಿಯಾದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಬಹುಪಾಲು ನೌಕರರ ಕೆಲಸ ಹೋಗಲಿದೆ. ಯಾವುದೇ ಕಾರಣಕ್ಕೂ ಕಾರ್ಮಿಕ ಕಾಯ್ದೆಯನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಲೋಕೇಶ್‌ ಹಾಗೂ ಸಿದ್ದರಾಜು, ಮಂಜು, ಮಂಜುಳ, ಶಿವಮ್ಮ ಸೇರಿ ಹಲವರಿದ್ದರು.