ಸಚಿನ್ ಎಲೆಕ್ಟ್ರಾನಿಕ್ಸ್‌ನಿಂದ ಖರೀದಿಸಿರುವ ವಸ್ತುಗಳು ೧೦ ಎಚ್‌ಪಿ ಮೋಟಾರ್ ಹೊಂದಿರುವ ನೀರಿನ ಮೋಟಾರ್ ಆಗಿದ್ದು, ಕೋವಿಡ್ ಸ್ಥಿತಿಯನ್ನು ಎದುರಿಸಲು ಪಂಚಾಯಿತಿಗೆ ಅತ್ಯಾವಶ್ಯಕವಾಗಿದ್ದವು. ಇಂತಹ ಆಪತ್ಕಾಲೀನ ಪರಿಸ್ಥಿತಿಯಲ್ಲಿ ಪಂಚಾಯತ್‌ಗೆ ಅಗತ್ಯವಾದ ಮೋಟಾರ್ ಖರೀದಿಸಲು ಅವಕಾಶ ಕಲ್ಪಿಸಿರುವುದರಿಂದ ಕೆ.ಸುರೇಂದ್ರ ಅವರ ಮೇಲೆ ದೋಷಾರೋಪಣೆ ಮಾಡಲಾಗುವುದಿಲ್ಲ. ಅಧಿನಿಯಮ ೧೯೯೩ರ ಕಲಂ ೩-ಎ ಇಂತಹ ಅಪರೂಪದ ಸಾಂಕ್ರಾಮಿಕ ಪರಿಸ್ಥಿತಿಗಳಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಇದನ್ನು ಮನದಟ್ಟು ಮಾಡಿಕೊಳ್ಳದೆ ಅನರ್ಹಗೊಳಿಸಿರುವು ಸರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ದೂರುದಾರರು ಕುಯುಕ್ತಿ, ವೈಯಕ್ತಿಕ ದ್ವೇಷ ಹಾಗೂ ದುರುದ್ದೇಶದಿಂದ ಗ್ರಾಪಂ ಸದಸ್ಯರ ವಿರುದ್ಧ ನೀಡುವ ದೂರನ್ನು ನಿಯಮಾನುಸಾರ ಪರಿಶೀಲಿಸದೆ, ಏಕಪಕ್ಷೀಯವಾಗಿ ರದ್ದುಗೊಳಿಸುವಂತಿಲ್ಲ ಎಂದು ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿದೆ.ಮಳವಳ್ಳಿ ತಾಲೂಕು ಹಲಗೂರು ಗ್ರಾಪಂ ಸದಸ್ಯ ಕೆ.ಸುರೇಂದ್ರ ಅವರ ವಿರುದ್ಧ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಮೈಸೂರು ಪ್ರಾದೇಶಿಕ ಆಯುಕ್ತರು, ಜಿಪಂ ಸಿಇಒ, ಮಳವಳ್ಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಹಲಗೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸದಸ್ಯತ್ವ ಅನರ್ಹಗೊಳಿಸಿದ್ದ ಪ್ರಕರಣದಲ್ಲಿ ಹೈಕೋರ್ಟ್ ಈ ತೀರ್ಪು ನೀಡಿ ಅರ್ಜಿಯನ್ನು ವಜಾಗೊಳಿಸಿದೆ.
ಸದಸ್ಯನನ್ನು ಅನರ್ಹಗೊಳಿಸುವ ಅಧಿಕಾರವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ ೧೯೯೩ರ ಕಲಂ ೪೩-ಎ ಅಡಿಯಲ್ಲಿ ಕೇವಲ ರಾಜ್ಯಸರ್ಕಾರಕ್ಕೆ ನೀಡಲಾಗಿದೆ. ಆದರೆ, ಈ ಪ್ರಕರಣದಲ್ಲಿ ಕೆ.ಸುರೇಂದ್ರ ಅವರ ಸದಸ್ಯತ್ವ ರದ್ದುಗೊಳಿಸಲು ಮೈಸೂರು ಪ್ರಾದೇಶಿಕ ಆಯುಕ್ತರು, ಜಿಪಂ ಸಿಇಓ, ಮಳವಳ್ಳಿ ಕಾರ್ಯನಿರ್ವಾಹಕ ಅಧಿಕಾರಿ ಅನುಸರಿಸಿರುವ ಪೂರ್ಣ ಪ್ರಕ್ರಿಯೆ ಅಧಿನಿಯಮ ೧೯೯೩ರ ಕಲಂ ೪೩-ಎ ಆಶಯ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.ಹಿನ್ನೆಲೆ ಏನು?:
ಕೆ.ಸುರೇಂದ್ರ ಅವರು ೩೦.೧೨.೨೦೨೦ರಂದು ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ೨೦೨೨-೨೩ನೇ ಆರ್ಥಿಕ ಸಾಲಿನಲ್ಲಿ ಗ್ರಾಮ ಪಂಚಾಯಿತಿ ಒಟ್ಟು ೫೫.೪೫ ಲಕ್ಷ ರು. ಹಣವನ್ನು ತೆರಿಗೆ ರೂಪದಲ್ಲಿ ಸಂಗ್ರಹಿಸಿತ್ತು. ಆದರೆ, ೩೧.೩.೨೦೨೩ರ ವೇಳೆಗೆ ಗ್ರಾಪಂ ಖಾತೆಗೆ ೪೩.೯೦ ಲಕ್ಷ ರು. ಜಮೆ ಮಾಡಲಾಗಿತ್ತು. ಉಳಿದ ೧೧.೫೪ ಲಕ್ಷ ರು. ಹಣವನ್ನು ಅವೈಜ್ಞಾನಿಕವಾಗಿ ದುರ್ಬಳಕೆ ಮಾಡಿರುವುದಾಗಿ ಕೆ.ಸುರೇಂದ್ರ ಅವರು ದೂರಿದ್ದರು.ಪಂಚಾಯಿತಿಯು ಸಾರ್ವಜನಿಕ ಖರೀದಿ ಪಾರದರ್ಶಕತೆ ಅಧಿನಿಯಮ ೧೯೯೯ರ ನಿಯಮಗಳಿಗೆ ವಿರುದ್ಧವಾಗಿ ವಸ್ತುಗಳನ್ನು ಖರೀದಿಸಿ, ಕೆಲವು ವ್ಯಕ್ತಿಗಳಿಗೆ ಅನಧಿಕೃತವಾಗಿ ಪಾವತಿಗಳನ್ನು ಮಾಡಿದ್ದಾರೆಂದು ಆರೋಪಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಓ ಅವರಿಗೆ ದೂರು ನೀಡಿದ್ದರು. ಈ ಆರೋಪಗಳ ಕುರಿತು ತನಿಖೆ ನಡೆಸಲು ಸಿಇಓ ರಚಿಸಿದ ವಿಶೇಷ ತನಿಖಾ ದಳ ನೀಡಿದ ವರದಿಯಲ್ಲಿ ಪಂಚಾಯತ್‌ನಲ್ಲಿ ನಿಧಿಯ ದುರ್ಬಳಕೆಯಾಗಿರುವುದು ಖಚಿತಪಟ್ಟಿತು.
ನಕಲಿ ದಾಖಲೆ ಸೃಷ್ಟಿ ಆರೋಪವೂ ಸಾಬೀತು:ಅಲ್ಲದೆ, ಕೆ.ಸುರೇಂದ್ರ ಅವರು ಹಲಗೂರು ಗ್ರಾಮದ ಸರ್ವೇ ನಂ.೬೩ರಲ್ಲಿರುವ ೫ ಗುಂಟೆಗಳ ರಾಜಕಾಲುವೆಗೆ ಸಂಬಂಧಿಸಿದ ಆದಾಯ ದಾಖಲೆಗಳನ್ನು ಕೆಲವು ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿ ಮಂಡ್ಯ ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆಯೂ ವಿಚಾರಣೆ ನಡೆಸಿದಾಗ ರಾಜಕಾಲುವೆ ಖಾತೆಯನ್ನು ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸಿರುವುದು, ಆದಾಯ ದಾಖಲೆಗಳು ನಕಲಿ ಎನ್ನುವುದು ದೃಢಪಟ್ಟಿತ್ತು.
ಈ ರೀತಿಯ ಅನೇಕ ಅಕ್ರಮ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದರ ಬಗ್ಗೆ ಪಂಚಾಯಿತಿ ಪಿಡಿಓ ವಿರುದ್ಧ ಕ್ರಮಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಎಲ್ಲಾ ವಿಷಯಗಳ ಹಿನ್ನೆಲೆಯಲ್ಲಿ ಪಂಚಾಯಿತಿ ಪಿಡಿಓ ಅವರು ಸದಸ್ಯ ಕೆ.ಸುರೇಂದ್ರ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿದ್ದರು ಎಂಬುದನ್ನು ನ್ಯಾಯಾಲಯ ಗಮನಕ್ಕೆ ತಂದುಕೊಂಡಿತು.ದ್ವೇಷದಿಂದ ಸುರೇಂದ್ರ ವಿರುದ್ಧ ದೂರು:
ಆನಂತರದಲ್ಲಿ ಕೆ.ಸುರೇಂದ್ರ ಪತ್ನಿ ಶ್ರೀ ಸಚಿನ್ ಎಲೆಕ್ಟ್ರಾನಿಕ್ಸ್ ಉದ್ಯಮದ ಮೂಲಕ ಪಂಚಾಯಿತಿಗೆ ವಿದ್ಯುತ್ ಸಾಮಗ್ರಿಗಳನ್ನು ಸರಬರಾಜು ಮಾಡಿರುವ ಬಗ್ಗೆ ಪಿಡಿಓ ಪ್ರೇರಣೆಯಿಂದ ಲೋಕೇಶ್ ಎಂಬ ವ್ಯಕ್ತಿ ಕೆ.ಸುರೇಂದ್ರ ವಿರುದ್ಧ ದೂರು ಸಲ್ಲಿಸಿದ್ದರು. ಅದರಲ್ಲಿ ಸಚಿನ್ ಎಲೆಕ್ಟ್ರಾನಿಕ್ಸ್ ಪರವಾಗಿ ೬೧,೬೦೦ ರು.ಗೆ ಒಂದು ಚೆಕ್ ೬೬,೪೦೦ ರು.ಗೆ ಇನ್ನೊಂದು ಚೆಕ್ ನೀಡಿದ್ದು, ಪಂಚಾಯತ್ ವ್ಯವಹಾರಗಳಲ್ಲಿ ಸದಸ್ಯನ ನೇರ ಸ್ವಾರ್ಥ, ನಿಯಮಾವಳಿಗಳ ಉಲ್ಲಂಘನೆಯಾಗಿದ್ದು ಸದಸ್ಯತ್ವ ಅನರ್ಹಗೊಳಿಸುವಂತೆ ಮನವಿ ಮಾಡಲಾಗಿತ್ತು.ಈ ವಿಚಾರದಲ್ಲಿ ಪ್ರತಿವಾದಿಯ ವಿಚಾರಣೆಯನ್ನು ನಡೆಸದೆ, ವಾದಾವಕಾಶ ನೀಡದೆ ಏಕಪಕ್ಷೀಯವಾಗಿ ವರದಿ ಸಲ್ಲಿಸಿ ತ್ವರಿತವಾಗಿ ವಿಚಾರಣೆಯನ್ನು ಪೂರ್ಣಗೊಳಿಸಿ ಗ್ರಾಪಂ ಸದಸ್ಯತ್ವದಿಂದ ಕೆ.ಸುರೇಂದ್ರ ಅವರನ್ನು ಅನರ್ಹಗೊಳಿಸುವ ಆದೇಶ ಜಾರಿಗೊಳಿಸಲಾಗಿದೆ ಎಂಬ ಅಭಿಪ್ರಾಯವನ್ನು ನ್ಯಾಯಾಲಯ ಮುಂದಿಟ್ಟಿದೆ.
ಕುಯುಕ್ತಿ, ದುರುದ್ದೇಶ ಕಾರಣ:ಅರ್ಜಿದಾರರ ಪತ್ನಿಯ ಹೆಸರಿನಲ್ಲಿದ್ದ ವಿದ್ಯುತ್ ಉಪಕರಣಗಳ ಅಂಗಡಿಯಿಂದ ವಸ್ತುಗಳನ್ನು ಖರೀದಿಸುವ ನಿರ್ಧಾರ ಸಂಪೂರ್ಣ ಪಂಚಾಯತ್‌ನ ಸಮೂಹ ನಿರ್ಧಾರವಾಗಿದ್ದು, ಇದಕ್ಕೆ ಸದಸ್ಯರೊಬ್ಬರನ್ನು ಹೊಣೆಗಾರರನ್ನಾಗಿ ಮಾಡಲಾಗದು. ಕೋವಿಡ್ ಅವಧಿಯಲ್ಲಿ ಪರಿಸ್ಥಿತಿ ಅತ್ಯಂತ ಚುರುಕಾಗಿದ್ದು, ಸಾರ್ವಜನಿಕರ ತುರ್ತು ಅಗತ್ಯಗಳನ್ನು ಪೂರೈಸುವ ಸಲುವಾಗಿ ಪಂಚಾಯಿತಿ ಈ ವಸ್ತುಗಳನ್ನು ಖರೀದಿಸಬೇಕಾಯಿತು. ಕೋವಿಡ್ ಸಂದರ್ಭದಲ್ಲಿ ಮಾಡಿದ ಖರೀದಿ ವಿಶೇಷ/ವಿಚಿತ್ರ ಸಂದರ್ಭದ ವಿನಾಯಿತಿ ಎಂದು ನ್ಯಾಯಾಲಯ ಪರಿಗಣಿಸಿದೆ. ಕೆ.ಸುರೇಂದ್ರ ನೀಡಿರುವ ವಿವಿಧ ದೂರುಗಳಿಗೆ ಪ್ರತೀಕಾರವಾಗಿ ಅಂದಿನ ಹಲಗೂರು ಗ್ರಾಪಂ ಪಿಡಿಓ ಮತ್ತು ಇತರ ಸದಸ್ಯರ ವಿರುದ್ಧ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಅರ್ಜಿದಾರರನ್ನು ಅನರ್ಹಗೊಳಿಸುವ ದೂರು ಕುಯುಕ್ತಿ ಮತ್ತು ದುರುದ್ದೇಶದಿಂದ ಕೂಡಿರುವುದಾಗಿ ನ್ಯಾಯಾಲಯ ಹೇಳಿದೆ.
ಕೋವಿಡ್ ವೇಳೆ ಖರೀದಿಗೆ ವಿನಾಯಿತಿ:ಸಚಿನ್ ಎಲೆಕ್ಟ್ರಾನಿಕ್ಸ್‌ನಿಂದ ಖರೀದಿಸಿರುವ ವಸ್ತುಗಳು ೧೦ ಎಚ್‌ಪಿ ಮೋಟಾರ್ ಹೊಂದಿರುವ ನೀರಿನ ಮೋಟಾರ್ ಆಗಿದ್ದು, ಕೋವಿಡ್ ಸ್ಥಿತಿಯನ್ನು ಎದುರಿಸಲು ಪಂಚಾಯಿತಿಗೆ ಅತ್ಯಾವಶ್ಯಕವಾಗಿದ್ದವು. ಇಂತಹ ಆಪತ್ಕಾಲೀನ ಪರಿಸ್ಥಿತಿಯಲ್ಲಿ ಪಂಚಾಯತ್‌ಗೆ ಅಗತ್ಯವಾದ ಮೋಟಾರ್ ಖರೀದಿಸಲು ಅವಕಾಶ ಕಲ್ಪಿಸಿರುವುದರಿಂದ ಕೆ.ಸುರೇಂದ್ರ ಅವರ ಮೇಲೆ ದೋಷಾರೋಪಣೆ ಮಾಡಲಾಗುವುದಿಲ್ಲ. ಅಧಿನಿಯಮ ೧೯೯೩ರ ಕಲಂ ೩-ಎ ಇಂತಹ ಅಪರೂಪದ ಸಾಂಕ್ರಾಮಿಕ ಪರಿಸ್ಥಿತಿಗಳಿಗೆ ವಿಶೇಷ ವಿನಾಯಿತಿ ನೀಡಲಾಗಿದೆ. ಇದನ್ನು ಮನದಟ್ಟು ಮಾಡಿಕೊಳ್ಳದೆ ಅನರ್ಹಗೊಳಿಸಿರುವು ಸರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.