ಸಾರಾಂಶ
ಗ್ರಾಮ ಪಂಚಾಯತಿ ಅಧ್ಯಕ್ಷನೇ ಎರಡು ವರ್ಷಗಳ ಹಿಂದೆ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಪ್ರಾಪ್ತೆಯನ್ನು ವಿವಾಹವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬೆಳಗಾವಿ : ಗ್ರಾಮ ಪಂಚಾಯತಿ ಅಧ್ಯಕ್ಷನೇ ಕಳೇದ ಎರಡು ವರ್ಷಗಳ ಹಿಂದೆ 15 ವರ್ಷದ ಅಪ್ರಾಪ್ತೆಯನ್ನು ಬಾಲಕಿಯನ್ನು ಮದುವೆಯಾಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಪ್ರಾಪ್ತೆಯನ್ನು ವಿವಾಹವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಇದೀಗ ತಲೆಮರೆಸಿಕೊಂಡಿರುವ ಆರೋಪಿಗೆ ಪೊಲೀಸರು ಶೋಧ ನಡೆಸಿದ್ದಾರೆ.
ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಳ್ಳಿಮನಿ ಬಾಲ್ಯ ವಿವಾಹ ಮಾಡಿಕೊಂಡ ಆರೋಪಿ. ಕಳೇದ 2023 ನವೆಂಬರ್ 5 ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ವಿವಾಹವಾಗಿದ್ದರು. ಮದುವೆ ವೇಳೆ ಆ ಬಾಲಕಿಗೆ ಕೇವಲ 15 ವರ್ಷ ವಯಸ್ಸಾಗಿತ್ತು. ಇದು ಬಾಲ್ಯ ವಿವಾಹ ವಿಚಾರ ಎಂದು ತಡವಾಗಿ ಗೊತ್ತಾಗಿದ್ದು, ಈ ಸಂಬಂಧ ಆರೋಪಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಶಿ ಕಳ್ಳಿಮನಿ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಆ.30ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಬಾಲ್ಯ ವಿವಾಹ ಕುರಿತು ದೂರು ದಾಖಲಾದ ತಕ್ಷಣವೇ ಬಸ್ಸಾಪುರ ಗ್ರಾಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ತಂಡವು ನಾಲ್ಕು ಬಾರಿ ಭೇಟಿ ನೀಡಿತ್ತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಪರ್ವಿನ್ ನೇತೃತ್ವದ ತಂಡ ನಾಲ್ಕು ಸಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಆದರೆ, ಬಾಲಕಿಯನ್ನು ಪತ್ತೆ ಹಚ್ಚಲು ರಕ್ಷಣಾ ತಂಡ ವಿಫಲವಾಗಿತ್ತು. ಈ ನಡುವೆ ತನ್ನ ಪತ್ನಿ ಪ್ರಾಪ್ತ ವಯಸ್ಸಿನವಳು ಎಂಬ ದಾಖಲೆಯನ್ನು ಆರೋಪಿ ಭೀಮಶಿ ಬಿಡುಗಡೆ ಮಾಡಿದ್ದರು. ಬಂಧನದ ಭೀತಿಯಿಂದ ಪತ್ನಿಯ ನಕಲಿ ಜನನ ಪ್ರಮಾಣ ಪತ್ರವನ್ನು ವೈರಲ್ ಮಾಡಿದ್ದರು ಎಂದು ತಿಳಿದು ಬಂದಿದೆ.
ಬಾಲಕಿಯ ಶಾಲಾ ವರ್ಗಾವಣೆ ಪ್ರಮಾಣಪತ್ರ ಜೊತೆಗೆ ಹೊಸ ಜನನ ಪ್ರಮಾಣದ ದಾಖಲೆ ಹೋಲಿಕೆ ಮಾಡಿದಾಗ ಭೀಮಶಿ ನಕಲಿ ದಾಖಲೆ ಸೃಷ್ಟಿಸಿರುವುದು ದೃಢವಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಆರೋಪಿ ಸದ್ಯ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ, ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಮೂಲಕ ಈಗಾಗಲೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಕಾನೂನು ಕ್ರಮ ಮುಂದುವರಿಯಲಿದೆ.
ಲಕ್ಷ್ಮಿ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ