ಮಂಡ್ಯ ನಗರಸಭೆ ಆಸ್ತಿಗಳ ಬಗ್ಗೆ ಮಾಹಿತಿ ಕೊಡದ ಗ್ರಾಮ ಪಂಚಾಯ್ತಿಗಳು..!

| Published : May 05 2025, 12:45 AM IST

ಮಂಡ್ಯ ನಗರಸಭೆ ಆಸ್ತಿಗಳ ಬಗ್ಗೆ ಮಾಹಿತಿ ಕೊಡದ ಗ್ರಾಮ ಪಂಚಾಯ್ತಿಗಳು..!
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ನಗರಸಭೆ ವ್ಯಾಪ್ತಿಗೆ ಬರುವ ಆಸ್ತಿಗಳಿಗೆ ಗ್ರಾಮ ಪಂಚಾಯ್ತಿಗಳಲ್ಲಿ ದಾಖಲಿಸಿರುವ ಖಾತೆಗಳನ್ನು ಹಸ್ತಾಂತರ ಮಾಡುವಂತೆ ತಿಳಿಸಿ ಒಂದು ತಿಂಗಳು ಕಳೆದರೂ ಇದುವರೆಗೂ ಒಂದೇ ಒಂದು ಆಸ್ತಿ ನಗರಸಭೆಗೆ ಹಸ್ತಾಂತರವಾಗಿಲ್ಲ. ಒಟ್ಟು ಆಸ್ತಿಗಳ ಮಾಹಿತಿಯನ್ನೂ ಪಂಚಾಯ್ತಿಗಳು ನಗರಸಭೆಗೆ ಕೊಟ್ಟಿಲ್ಲ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆ ವ್ಯಾಪ್ತಿಗೆ ಬರುವ ಆಸ್ತಿಗಳಿಗೆ ಗ್ರಾಮ ಪಂಚಾಯ್ತಿಗಳಲ್ಲಿ ದಾಖಲಿಸಿರುವ ಖಾತೆಗಳನ್ನು ಹಸ್ತಾಂತರ ಮಾಡುವಂತೆ ತಿಳಿಸಿ ಒಂದು ತಿಂಗಳು ಕಳೆದರೂ ಇದುವರೆಗೂ ಒಂದೇ ಒಂದು ಆಸ್ತಿ ನಗರಸಭೆಗೆ ಹಸ್ತಾಂತರವಾಗಿಲ್ಲ. ಒಟ್ಟು ಆಸ್ತಿಗಳ ಮಾಹಿತಿಯನ್ನೂ ಪಂಚಾಯ್ತಿಗಳು ನಗರಸಭೆಗೆ ಕೊಟ್ಟಿಲ್ಲ. ನಗರಸಭೆಗೆ ಡೋಂಟ್‌ಕೇರ್ ಎಂದಿರುವ ನಗರ ಸುತ್ತಲಿನ ಒಂಬತ್ತು ಪಂಚಾಯ್ತಿಗಳು ಆಸ್ತಿಗಳ ಹಸ್ತಾಂತರ ವಿಚಾರದಲ್ಲಿ ದಿವ್ಯನಿರ್ಲಕ್ಷ್ಯ ವಹಿಸಿವೆ.

ಕಳೆದ ಮಾ.೨೭ರಂದು ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಬೂದನೂರು, ಬೇವಿನಹಳ್ಳಿ, ಇಂಡುವಾಳು, ಮಂಡ್ಯ ಗ್ರಾಮಾಂತರ, ಸಾತನೂರು, ಉಮ್ಮಡಹಳ್ಳಿ, ಬೇಲೂರು, ಹಳುವಾಡಿ ಮತ್ತು ಸಂತೆಕಸಲಗೆರೆ ಪಿಡಿಒಗಳ ಸಭೆ ಕರೆದು ನಗರಸಭೆಗೆ ಸೇರಿದ ಆಸ್ತಿಗಳನ್ನು ಪಂಚಾಯ್ತಿಗಳು ಖಾತೆ ಮಾಡಿಕೊಟ್ಟಿದ್ದು, ಅವುಗಳನ್ನು ಗುರುತಿಸಿ ಹಸ್ತಾಂತರಿಸುವಂತೆ ತಿಳಿಸಲಾಗಿತ್ತು.

೨೨೦೦ಕ್ಕೂ ಹೆಚ್ಚು ಆಸ್ತಿಗಳು ಖಾತೆ:

ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು ೨೨೦೦ಕ್ಕೂ ಹೆಚ್ಚು ಆಸ್ತಿಗಳನ್ನು ಪಂಚಾಯ್ತಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಆ ಸಮಯದಲ್ಲಿ ಮುಂದಿನ ಒಂದು ವಾರದೊಳಗೆ ನಗರಸಭೆ ಅಧಿಕಾರಿಗಳು ಮತ್ತು ಪಂಚಾಯ್ತಿ ಪಿಡಿಒಗಳು ಜಂಟಿ ಸರ್ವೇ ನಡೆಸಿ ನಗರಸಭೆಗೆ ಸೇರಿದ ಆಸ್ತಿಗಳ ಹಸ್ತಾಂತರ ಪ್ರಕ್ರಿಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆದರೆ, ಇದುವರೆಗೂ ಜಂಟಿ ಸರ್ವೇ ಕಾರ್ಯ ನಡೆಯಲೂ ಇಲ್ಲ, ನಗರಸಭೆಗೆ ಸೇರಿದ ಆಸ್ತಿಗಳು ಹಸ್ತಾಂತರಗೊಳ್ಳಲೂ ಇಲ್ಲ.

ನಗರಸಭೆಗೆ ಸೇರಿದ ಆಸ್ತ್ತಿಗಳಿಗೆ ಗ್ರಾಮ ಪಂಚಾಯ್ತಿಗಳಲ್ಲಿ ದಾಖಲಿಸಿರುವ ಸ್ವತ್ತುಗಳಿಗೆ ನಗರಸಭೆಯಿಂದ ಮೂಲ ಸೌಕರ್ಯಗಳನ್ನು ದೊರಕಿಸಲಾಗುತ್ತಿದೆ. ಇದರಿಂದ ನಗರಸಭೆಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ನಗರಸಭೆಗೆ ಸೇರಿದ ಆಸ್ತಿಗಳು ಹಸ್ತಾಂತರಗೊಂಡರೆ ಆದಾಯ ವೃದ್ಧಿಸಿಕೊಳ್ಳಬಹುದೆಂಬ ಆಸೆ ನಗರಸಭೆ ಅಧಿಕಾರಿಗಳದ್ದಾಗಿದೆ. ಆದರೆ, ಇದಕ್ಕೆ ಪಂಚಾಯ್ತಿ ಪಿಡಿಒಗಳಿಂದ ಸ್ಪಂದನೆಯೇ ದೊರಕದಂತಾಗಿದೆ.

ಪಂಚಾಯ್ತಿಗಳಿಗೆ ಆದಾಯ ಕುಸಿತ ಆತಂಕ:

ನಗರಸಭೆಗೆ ಸೇರಿದ ಆಸ್ತಿಗಳನ್ನು ಖಾತೆ ಮಾಡಿಕೊಟ್ಟಿರುವ ಪಂಚಾಯ್ತಿಗಳು ಅಲ್ಲಿ ಯಾವುದೇ ಮೂಲಸೌಕರ್ಯಗಳನ್ನು ಕಲ್ಪಿಸದಿದ್ದರೂ ತೆರಿಗೆ ಹಣವನ್ನು ಪಂಚಾಯ್ತಿಯ ಬೊಕ್ಕಸಕ್ಕೆ ತುಂಬಿಸಿಕೊಳ್ಳುತ್ತಲೇ ಇವೆ. ಇಂತಹ ಸಾವಿರಾರು ಆಸ್ತಿಗಳು ಪಂಚಾಯ್ತಿಯವರ ಕೈಬಿಟ್ಟುಹೋದರೆ ಆದಾಯ ಮೂಲ ಕುಸಿತಗೊಳ್ಳುವ ಆತಂಕ ಎದುರಿಸುತ್ತಿವೆ. ಈ ಆಸ್ತಿಗಳಿಗೆ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ ಇನ್ನಿತರೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿರುವ ನಗರಸಭೆ ಬರಿಗೈ ದಾಸನಂತೆ ಕುಳಿತಿದೆ. ಆದಾಯಮೂಲ ಸೃಷ್ಟಿಸಿಕೊಳ್ಳಲಾಗದೆ ತಿಣುಕಾಟ ನಡೆಸುತ್ತಿದೆ.

ಆಸ್ತಿ ಮಾಲೀಕರೂ ಬಯಸುತ್ತಿಲ್ಲ:

ನಗರಸಭೆಗೆ ಸೇರಿದ ಆಸ್ತಿಗಳನ್ನು ಪಂಚಾಯ್ತಿಗಳಿಗೆ ಬಿಟ್ಟುಕೊಡುವ ಮನಸ್ಸಿಲ್ಲ. ಜೊತೆಗೆ ಪಂಚಾಯ್ತಿಯೊಳಗಿರುವ ಆಸ್ತಿ ಮಾಲೀಕರು ನಗರಸಭೆ ವ್ಯಾಪ್ತಿಗೆ ಬರುವುದಕ್ಕೂ ಬಯಸುತ್ತಿಲ್ಲದಿರುವುದರಿಂದ ಆಸ್ತಿಗಳ ಹಸ್ತಾಂತರ ಪ್ರಕ್ರಿಯೆಗೆ ಗ್ರಹಣ ಹಿಡಿಯುವಂತಾಗಿದೆ.

ಪಂಚಾಯ್ತಿ ವ್ಯಾಪ್ತಿಯೊಳಗಿರುವ ನಗರಸಭೆ ಆಸ್ತಿಗಳಿಗೆ ಕಡಿಮೆ ತೆರಿಗೆ ಇರುತ್ತದೆ. ಅದೇ ಆಸ್ತಿಗಳು ನಗರಸಭೆ ವ್ಯಾಪ್ತಿಗೊಳಪಟ್ಟರೆ ತೆರಿಗೆ ಹಣ ಎರಡರಿಂದ ಮೂರು ಪಟ್ಟು ಹೆಚ್ಚಾಗಲಿದೆ. ಇದೇ ಕಾರಣಕ್ಕೆ ಪಂಚಾಯ್ತಿಗಳನ್ನು ಬಿಟ್ಟು ಆಸ್ತಿ ಮಾಲೀಕರೂ ನಗರಸಭೆ ವ್ಯಾಪ್ತಿಗೊಳಪಡುವುದಕ್ಕೆ ಬಯಸದೇ ಅಲ್ಲೇ ಉಳಿದುಕೊಂಡಿದ್ದಾರೆ.

ಸೌಲಭ್ಯಗಳ ಕೊರತೆಯಿದ್ದರೂ ಗ್ರಾಪಂನಲ್ಲೇ ಉಳಿವು:

ರಸ್ತೆ, ಚರಂಡಿ, ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿದ್ದರೂ ಪಂಚಾಯ್ತಿಗಳಲ್ಲೇ ಉಳಿದುಕೊಳ್ಳುವುದಕ್ಕೆ ಇಷ್ಟಪಡುತ್ತಿದ್ದಾರೆ. ನಗರದ ಸುತ್ತಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆ, ಕೆಂಪೇಗೌಡ ಬಡಾವಣೆ, ಅನ್ನಪೂರ್ಣೇಶ್ವರಿ ಬಡಾವಣೆ, ಶ್ರೀರಾಮನಗರ, ದ್ವಾರಕನಗರ, ಶಂಕರಪ್ಪ ಬಡಾವಣೆ ಸೇರಿದಂತೆ ಸುಮಾರು ೧೨ಕ್ಕೂ ಹೆಚ್ಚು ಪ್ರತಿಷ್ಠಿತ ಬಡಾವಣೆಗಳು ಪಂಚಾಯ್ತಿ ವ್ಯಾಪ್ತಿಯಲ್ಲೇ ಉಳಿದುಕೊಂಡಿವೆ.

ಪಂಚಾಯ್ತಿಗಳಿಗೆ ಸೌಲಭ್ಯ ಕಲ್ಪಿಸಿಕೊಡುವಂತೆ ಸ್ಥಳೀಯ ಬಡಾವಣೆಗಳ ನಿವಾಸಿಗಳು ಸಾಕಷ್ಟು ಒತ್ತಡ ಹೇರುತ್ತಿದ್ದರೂ ಪಂಚಾಯ್ತಿಯವರು ಅತ್ತ ಗಮನವನ್ನೇ ಹರಿಸುತ್ತಿಲ್ಲ. ಒಂಬತ್ತು ಪಂಚಾಯ್ತಿಗಳು ನಗರಸಭೆ ವ್ಯಾಪ್ತಿಗೆ ಸೇರಿದ ಆಸ್ತಿಗಳಿಗೆ ಮೂಲ ಸೌಕರ್ಯ ದೊರಕಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಸೌಕರ್ಯ ಕಲ್ಪಿಸುವುದಕ್ಕೆ ಹಣಕಾಸಿನ ಕೊರತೆ ಸಮಸ್ಯೆಯನ್ನು ಮುಂದಿಡುತ್ತಿವೆ. ಇದರ ನಡುವೆಯೂ ಈ ಆಸ್ತಿಗಳಿಂದ ಗ್ರಾಪಂಗೆ ಆದಾಯ ಬರುತ್ತಿರುವುದರಿಂದ ಆಸ್ತಿಗಳನ್ನು ಬಿಟ್ಟುಕೊಡುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಇದರಿಂದ ಪಂಚಾಯ್ತಿಗಳು ನಿರಾಳವಾಗಿದ್ದರೆ ನಗರಸಭೆ ಪೇಚಿಗೆ ಸಿಲುಕಿದೆ.

ಪಂಚಾಯ್ತಿಗಳು ಖಾತೆ ಮಾಡಿರುವ ನಗರಸಭೆ ವ್ಯಾಪ್ತಿಗೆ ಸೇರಿದ ಆಸ್ತಿಗಳನ್ನು ಹಸ್ತಾಂತರಿಸುವಂತೆ ಪಿಡಿಒಗಳ ಸಭೆ ನಡೆಸಿ ಒಂದು ತಿಂಗಳಾದರೂ ಇದುವರೆಗೂ ಯಾವುದೇ ಮಾಹಿತಿ ನೀಡಿಲ್ಲ. ಜಂಟಿ ಸರ್ವೇಯನ್ನೂ ನಡೆಸಿಲ್ಲ. ಪಂಚಾಯ್ತಿ ಪಿಡಿಒಗಳ ನಿರ್ಲಕ್ಷ್ಯದ ವಿರುದ್ಧ ಜಿಲ್ಲಾ ಪಂಚಾಯ್ತಿ ಸಿಇಒ ಅವರಿಗೆ ದೂರು ನೀಡಲಾಗುವುದು. ನಗರಸಭೆಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿರುವ ನಗರಸಭೆ ಆಸ್ತಿಗಳು ಹಸ್ತಾಂತರಗೊಂಡರೆ ಆದಾಯ ವೃದ್ಧಿಸಿಕೊಳ್ಳಲು ಅನುಕೂಲವಾಗಲಿದೆ.

- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆ