ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು ಗ್ರಾಮೀಣ ಮಕ್ಕಳಲ್ಲಿ ಓದುವಿಕೆ ಮತ್ತು ಸಾಹಿತ್ಯದ ಒಲವು ಹೆಚ್ಚಾಗಲು ಇಂತಹ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಉತ್ತಮ ವಿಚಾರವಾಗಿದ್ದು, ಓದುವಿಕೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಇದು ಪೂರಕವಾಗಿದೆ. ನಮ್ಮ ಬಾಲ್ಯದಲ್ಲಿ ಇಂತಹ ಅವಕಾಶ ಸಿಗುತ್ತಿರಲಿಲ್ಲ. ಮಕ್ಕಳು ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನಾಡಿನ ಭಾಷೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ನಿಡ್ಪಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ವೆಂಕಟರಮಣ ಬೋರ್ಕರ್ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ನೇತೃತ್ವದಲ್ಲಿ, ಪುತ್ತೂರು ಶಿಕ್ಷಣಾಧಿಕಾರಿಗಳ ಕಚೇರಿ, ನಿಡ್ಪಳ್ಳಿ ಗ್ರಾಮ ಪಂಚಾಯಿತಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಪೋಷಕತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗದ ಸಂಯೋಜನೆಯಲ್ಲಿ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಅಭಿಯಾನ’ದ ಅಂಗವಾಗಿ ನಡೆದ ಗ್ರಾಮ ಸಾಹಿತ್ಯ ಸಂಭ್ರಮ ಸರಣಿ ಕಾರ್ಯಕ್ರಮ ೧೩ನ್ನು ನಿಡ್ಪಳ್ಳಿ ಸಮುದಾಯ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿನಿ ರಕ್ಷಿತಾ ಬಿ,. ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಸಮಾರಂಭದ ಅಧ್ಕಕ್ಷತೆ ವಹಿಸಿದ್ದರು. ನಿಡ್ಪಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಗೀತಾ ಡಿ., ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಧ್ಯಾಲಕ್ಷ್ಮೀ, ಬೆಟ್ಟಂಪಾಡಿ ಸಿ.ಆರ್.ಪಿ. ಪರಮೇಶ್ವರಿ ಪ್ರಸಾದ್, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ನಡೆದ ಗೋಷ್ಠಿಯಲ್ಲಿ ‘ಸಾಹಿತ್ಯಕ್ಕೆ ನಿಡ್ಪಳ್ಳಿ ಗ್ರಾಮದ ಕೊಡುಗೆ’ ವಿಷಯ ಕುರಿತು ನುಳಿಯಾಲು ರಾಧಾಕೃಷ್ಣ ರೈ, ‘ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನ’ ವಿಷಯ ಮಾಹಿತಿ ಕುರಿತು ಪ್ರಣವ್ ಭಟ್ ವಿಚಾರ ಮಂಡಿಸಿದರು. ಆ ಬಳಿಕ ನಡೆದ ಬಾಲ ಕವಿಗೋಷ್ಠಿ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಭವ್ಯಾ. ಪಿ.ಆರ್. ನಿಡ್ಪಳ್ಳಿ , ಬಾಲ ಕಥಾಗೋಷ್ಠಿ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲೆ ಬೆಟ್ಟಂಪಾಡಿಯ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ , ಸಾರ್ವಜನಿಕ ವಿಭಾಗದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಾ. ಉ. ಹಿ. ಪ್ರಾ. ಶಾಲೆ ಇಲ್ಲಿನ ಆಂಗ್ಲ ಭಾಷಾ ಶಿಕ್ಷಕ ಜನಾರ್ಧನ ದುರ್ಗ ವಹಿಸಿದ್ದರು. ಯುವ ಕವಿಗೋಷ್ಠಿಯಲ್ಲಿ ಸಮನ್ವಿ ರೈ ನುಳಿಯಾಲು, ಶೋಭಾ ಕಾಟುಕುಕ್ಕೆ,ಕು. ಭಾವನಾ. ಕೆ. ಜೆ. ಸುಜಯ ಸ್ವರ್ಗ, ಆನಂದ ರೈ ಅಡ್ಕಸ್ಥಳ, ಅಪೂರ್ವ ಕಾರಂತ್ ದರ್ಬೆ ಭಾಗವಹಿಸಿದ್ದರು.ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಗುರೆಲೆ ಬಳಗದ ಚಿತ್ರಾ ಎಸ್. ಸ್ವಾಗತಿಸಿದರು. ಅಪೂರ್ವ ಕಾರಂತ್ ದರ್ಬೆ ಕಾರ್ಯಕ್ರಮ ನಿರೂಪಿಸಿದರು. ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿದರು.