ರಂಗಭೂಮಿ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ರಂಗಕಲೆ ಬೆಳೆದರೆ ಸಮಾಜದ ಸೃಜನಶೀಲತೆ ಬೆಳೆಯುತ್ತದೆ ಎಂಬ ಸಂದೇಶದೊಂದಿಗೆ ವಜ್ರಸಿರಿ ರಂಗೋತ್ಸವ ಯಶಸ್ವಿಯಾಗಿ ಸಮಾಪ್ತಿಗೊಂಡಿರುವುದು ಹೆಮ್ಮೆ ತಂದಿದೆ.
ಧಾರವಾಡ:
ಪವಿತ್ರ ಶ್ರಾವಣ ಮಾಸದಲ್ಲಿ ನಿರಂತರವಾಗಿ ಐದು ದಿನ ಆರು ಅದ್ಭುತ ನಾಟಕಗಳನ್ನು ಅಭಿನಯ ಭಾರತಿ ಸಂಸ್ಥೆ ಜನರಿಗೆ ನೀಡಿತು.ಜನತಾ ಶಿಕ್ಷಣ ಸಮಿತಿಯ ಸನ್ನಿಧಿ ಭವನದಲ್ಲಿ ಸೆ. 2ರಂದು ಕೊಳಲು ಡಾಟ್ ಕಾಂ ಎಂಬ ನಾಟಕದಿಂದ ಶುರುವಾಗಿ ಸೆ. 6ರಂದು ಜೋಕುಮಾರಸ್ವಾಮಿ ನಾಟಕ ಮೂಲಕ ಸಮಾರೋಪಗೊಂಡಿತು.
ಐದು ದಿನಗಳ ಕಾಲ ರಂಗಾಸಕ್ತರು ನಾಟಕೋತ್ಸವಕ್ಕೆ ಅತ್ಯಂತ ಸಹಕಾರ ನೀಡಿದ್ದು, ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಎಲ್ಲ ನಾಟಕಗಳು ಯಶಸ್ವಿ ಪ್ರದರ್ಶನ ಕಂಡವು. ಸಮಾರೋಪದಲ್ಲಿ ಮಾತನಾಡಿದ ಉದ್ಯಮಿ ಉದಯಕುಮಾರ, ರಂಗಭೂಮಿ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ರಂಗಕಲೆ ಬೆಳೆದರೆ ಸಮಾಜದ ಸೃಜನಶೀಲತೆ ಬೆಳೆಯುತ್ತದೆ ಎಂಬ ಸಂದೇಶದೊಂದಿಗೆ ವಜ್ರಸಿರಿ ರಂಗೋತ್ಸವ ಯಶಸ್ವಿಯಾಗಿ ಸಮಾಪ್ತಿಗೊಂಡಿರುವುದು ಹೆಮ್ಮೆ ತಂದಿದೆ ಎಂದರು.ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಅರುಣಕುಮಾರ ಪಾಟೀಲ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ಹಾಗೂ ನೆಮ್ಮದಿ ನೀಡುತ್ತವೆ. ಜತೆಗೆ ಸಂಬಂಧಗಳನ್ನು ಗಟ್ಟಿಗೊಳ್ಳಿಸುವ ಕಾರ್ಯ ಮಾಡುತ್ತವೆ ಎಂದರು.
ಎ.ಆರ್. ಪಾಟೀಲ, ಬೆನಕ ತಂಡದ ಮೈಕೋ ಮಂಜು, ಪರ್ಯಾಯ ಸಮಿತಿ ಅಧ್ಯಕ್ಷ ವಸುದೇವ ಪರ್ವತಿ, ಅರವಿಂದ ಕುಲಕರ್ಣಿ, ಸಮೀರ ಜೋಶಿ, ಪಿ.ಎಸ್. ಸುಧೀರ, ಸಂಜಯ ಕಬ್ಬೂರು ಇದ್ದರು.ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಸುನೀತಾ ಅರಬಳ್ಳಿ ಪ್ರಾರ್ಥಿಸಿದರು. ಜ್ಯೋತಿ ದಿಕ್ಷೀತ ಸ್ವಾಗತಿಸಿದರು. ಸುನೀಲ ಬಾಗೇವಾಡಿ ವಂದಿಸಿದರು. ನಂತರ ಡಾ. ಚಂದ್ರಶೇಖರ್ ಕಂಬಾರರ "ಜೋಕುಮಾರಸ್ವಾಮಿ " ನಾಟಕವನ್ನು ಬೆನಕ ತಂಡವು ಪ್ರದರ್ಶಿಸಿತು. ಇನ್ನು, ಇದೇ ದಿನ ಬೆಳಗ್ಗೆ ರಂಗ ಭೀಷ್ಮ ಬಿ.ವಿ. ಕಾರಂತರ ಜೀವನ ಆಧರಿಸಿದ "ಬಾಬಾ ಕಾರಂತ್ " ರೂಪಕವನ್ನು ಶ್ರೀಪತಿ ಮಂಜನಬೈಲು ವಿನ್ಯಾಸ, ಟಿ.ಎಸ್. ನಾಗಾಭರಣ ನಿರ್ದೇಶನದಲ್ಲಿ ಬೆನಕ ತಂಡ ಅಭಿನಯಿಸಿತು.