ಸಾರಾಂಶ
ಬಸವನಗುಡಿಯ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಡೊಂಕಲ ಮೈದಾನದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ಬಸವನಗುಡಿ ಸಂಭ್ರಮದಲ್ಲಿ ಆಹಾರ ಪ್ರಿಯರು, ಮನರಂಜನಾ ಪ್ರೇಮಿಗಳು, ಕ್ರೀಡಾಸಕ್ತರಿಗೆಂದೇ ಆಯೋಜಿಸಲಾಗಿರುವ ಬಸವನಗುಡಿ ಸಂಭ್ರಮಕ್ಕೆ ಶುಕ್ರವಾರ ಅದ್ಧೂರಿಯಾಗಿ ಚಾಲನೆ ದೊರಕಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎಲ್ಲಿ ನೋಡಿದರೂ ಬಗೆ ಬಗೆಯ ಖಾದ್ಯಗಳು, ಬಾಯಲ್ಲಿಟ್ಟರೆ ಕರಗುವ ದಾವಣಗೆರೆ ಬೆಣ್ಣೆ ದೋಸೆ, ಬೋಂಡ ಬಜ್ಜಿ, ಪೊಟ್ಯಾಟೋ ಟ್ವಿಸ್ಟರ್, ಅವರೆಕಾಳು ದೋಸೆ, ಪುಳಿಯೊಗರೆ ಸೇರಿದಂತೆ ಹಲವು ಖಾದ್ಯಗಳು. ಆಹಾ... ಒಂದಲ್ಲ ಎರಡಲ್ಲ ಮೂವತ್ತಕ್ಕೂ ಅಧಿಕ ಫುಡ್‌ಸ್ಟಾಲ್‌ಗಳು ಖಾದ್ರಪ್ರಿಯರನ್ನು ಸೆಳೆಯುತ್ತಿದ್ದವು.ಇನ್ನು ಶಾಪಿಂಗ್ ಪ್ರಿಯರಿಗೆಂದು ತೆರೆದ್ದಿದ್ದ ಹತ್ತಾರು ಮಳಿಗೆಗಳ ಮುಂದೆ ಮಹಿಳೆಯರ ಸಂಭ್ರಮ. ಇದೆಲ್ಲಾ ಕಂಡು ಬಂದಿದ್ದು ಬಸವನಗುಡಿಯ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಡೊಂಕಲ ಮೈದಾನದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಆಯೋಜಿಸಿರುವ ಬಸವನಗುಡಿ ಸಂಭ್ರಮದಲ್ಲಿ. ಆಹಾರ ಪ್ರಿಯರು, ಮನರಂಜನಾ ಪ್ರೇಮಿಗಳು, ಕ್ರೀಡಾಸಕ್ತರಿಗೆಂದೇ ಆಯೋಜಿಸಲಾಗಿರುವ ಬಸವನಗುಡಿ ಸಂಭ್ರಮಕ್ಕೆ ಶುಕ್ರವಾರ ಅದ್ಧೂರಿಯಾಗಿ ಚಾಲನೆ ದೊರಕಿತು.
ಬಸವನಗುಡಿಯ ಶಾಸಕ ರವಿ ಸುಬ್ರಹ್ಮಣ್ಯ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಬಸವನಗುಡಿ ಪಾರಂಪರಿಕ ತಾಣಗಳು ಇರುವ ಹಳೆಯ ಪ್ರದೇಶವಾಗಿದ್ದು, ಈ ಪ್ರದೇಶ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಅತ್ಯಂತ ಬುದ್ಧಿವಂತರು ವಾಸವಾಗಿರುವ ಈ ಪ್ರದೇಶದ ಅಭಿವೃದ್ಧಿ ನಿರಂತರವಾಗಿ ನಡೆಯುತ್ತಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಇಂತಹ ಐತಿಹಾಸಿಕ ಪ್ರದೇಶದಲ್ಲಿ ಬಸವನಗುಡಿ ಸಂಭ್ರಮ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ. ಇಲ್ಲಿನ ನಿವಾಸಿಗಳು ಮೂರು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಗ್‌ಬಾಸ್ ಖ್ಯಾತಿಯ ಹಾಗೂ ಕರ್ನಾಟಕ ಅಳಿಯ ಚಿತ್ರದ ನಾಯಕ ನಟ ಪ್ರಥಮ್, ಈಶಾನಿ ಹಾಗೂ ನಟಿ ನಿಖಿತಾ ಅವರು ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಟ ದುನಿಯಾ ವಿಜಿ ಕಾರ್ಯಕ್ರಮದ ಮೆರಗು ಹೆಚ್ವಿಸಿದರು. ನಾನು ಬಸವನಗುಡಿಯವನಾಗಿದ್ದು, ಈ ರೀತಿಯ ಸಂಭ್ರಮದ ಕಾರ್ಯಕ್ರಮಗಳು ಬೆಂಗಳೂರಿನ ಮೆರಗನ್ನು ಹೆಚ್ಚಿಸುತ್ತವೆ. ನನ್ನ ಮುಂದಿನ ಸಿನಿಮಾ ‘ಭೀಮಾ’ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಎಲ್ಲರೂ ಪ್ರೋತ್ಸಾಹಿಸಬೇಕು. ಕನ್ನಡ ಸಿನಿಮಾಗಳನ್ನು ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಬಾಕ್ಸ್...ವಿಭಿನ್ನ ಕಾರ್ಯಕ್ರಮಗಳು
ಮೂರು ದಿನ ನಡೆಯಲಿರುವ ಬಸವನಗುಡಿ ಸಂಭ್ರಮದಲ್ಲಿ 60ಕ್ಕೂ ಹೆಚ್ಚಿನ ಮಳಿಗೆಗಳನ್ನು ಹಾಕಲಾಗಿದ್ದು, ಶಾಪಿಂಗ್, ಈಟಿಂಗ್, ಚಾಟಿಂಗ್ ಸೇರಿದಂತೆ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯದ ಬೇರೆ ಜಿಲ್ಲೆ ಸೇರಿದಂತೆ ರುಚಿಯಾದ ಸ್ಥಳೀಯ ತಿಂಡಿ, ತಿನಿಸುಗಳನ್ನು ಸವಿಯಬಹುದು. ಇನ್ನು ಸಂಭ್ರಮದಲ್ಲಿ ಮಕ್ಕಳ ಖುಷಿ ಹೆಚ್ಚಿಸೋದಕ್ಕೆ ಹಲವು ಆಟಗಳು ಸಹ ಇವೆ. ಜೊತೆಗೆ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಫ್ಯಾಷನ್, ಲೈಫ್ ಸ್ಟೈಲ್ ವಸ್ತುಗಳ ಖರೀದಿಸಲು ಹಾಗೂ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳನ್ನ ಆಯೋಜಿಸಲಾಗಿದೆ.ಬಾಕ್ಸ್...ಇಂದಿನ ಕಾರ್ಯಕ್ರಮ
ಶನಿವಾರ ಬೆಳಗ್ಗೆ 11ಕ್ಕೆ ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್, 12ಕ್ಕೆ ಮಹಿಳೆಯರಿಗೆ ಅಡುಗೆ ಸ್ಪರ್ಧೆ, 3ಕ್ಕೆ ಮುಕ್ತ ವೇದಿಕೆ ಗಾಯನ, ಸಂಜೆ 5ಕ್ಕೆ ಮಿನಿಟ್ ಟು ವಿನ್ ಇಟ್ (1 ನಿಮಿಷದ ವಿನೋದ ಕ್ರೀಡೆ), ಸಂಜೆ 6ಕ್ಕೆ ಬೊಂಬಾಟ್ ಜೋಡಿ ಮತ್ತು ಫ್ಯಾಷನ್ ಶೋ (ವಿಷಯ-ಸಾಂಪ್ರದಾಯಿಕ), ಸಂಜೆ 7ಕ್ಕೆ ಬಸವನಗುಡಿ ಸಾಧಕರಿಗೆ ಸನ್ಮಾನ, ಸಂಜೆ 7.30ಕ್ಕೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಭ್ರಮ ಮತ್ತು 8ರಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.