ನೂರಾರು ಭಕ್ತರು ಭಾಗಿಯಾಗಿ ಹೂಹಣ್ಣು ಎಸೆದು ಸಂಭ್ರಮಿಸಿದರು. ಡೊಳ್ಳು ಕುಣಿತ, ನೃತ್ಯ, ಭಾಜಾ ಭಜಂತ್ರಿ, ತಾಷಾ ಮೇಳ ಮೆರವಣಿಗೆಗೆ ಶೋಭೆ ತಂದಿತು

ಕನಕಗಿರಿ: ತಾಲೂಕಿನ ಹುಲಿಹೈದರ ರಾಜ ದರ್ಬಾರ್ ನಲ್ಲಿರುವ ಹಿರೇದೇವತೆ ಜಾತ್ರೆ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.

24ನೇ ದೇವತೆ ಜಾತ್ರೆ ಅಭಿಷೇಕ,ಕುಂಕುಮಾರ್ಚನೆ, ಅಲಂಕಾರ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಜಿಲ್ಲಾ ಆಯುಷ್ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನೂರಾರು ಜನ ಶಿಬಿರದ ಪ್ರಯೋಜನ ಪಡೆದುಕೊಂಡರು. ಎಂ.ಎಂ. ಜೋಶಿ ಕಣ್ಣಿನ ದೃಷ್ಟಿ ಕೇಂದ್ರದಿಂದ ಉಚಿತ ಕಣ್ಣಿನ ತಪಾಸಣೆ ಹಾಗೂ ಅಂಬಿಕಾ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸಂಜೆ ವೇಳೆಯಲ್ಲಿ ಉತ್ಸವ ಮೆರವಣಿಗೆಯು ವಿಜೃಂಭಣೆಯಿಂದ ನೆರವೇರಿತು. ನೂರಾರು ಭಕ್ತರು ಭಾಗಿಯಾಗಿ ಹೂಹಣ್ಣು ಎಸೆದು ಸಂಭ್ರಮಿಸಿದರು. ಡೊಳ್ಳು ಕುಣಿತ, ನೃತ್ಯ, ಭಾಜಾ ಭಜಂತ್ರಿ, ತಾಷಾ ಮೇಳ ಮೆರವಣಿಗೆಗೆ ಶೋಭೆ ತಂದಿತು. ಇನ್ನೂ ಗ್ರಾಮೀಣ ಯುವಕರಿಗಾಗಿ ಮುಂಗೈ ಆಟ ಹಮ್ಮಿಕೊಳ್ಳಲಾಗಿತ್ತು. ಆಟದಲ್ಲಿ ಗೆದ್ದವರಿಗೆ ಬೆಳ್ಳಿ ಕಡಗ ನೀಡಿ ಗೌರವಿಸಲಾಯಿತು.

ರಾಜವಂಶಸ್ಥ ರಾಜಾ ನವಿನ್ ಚಂದ್ರ ನಾಯಕ ಜಾತ್ರೆಯ ಉಸ್ತುವಾರಿ ವಹಿಸಿಕೊಂಡಿದರು. ಲಕ್ಷ್ಮೀಕಾಂತ ಆಚಾರ್ ಹಾಗೂ ಗುರುರಾಜ ಆಚಾರ್ ರಾಜಪುರೋಹಿತ ಜಾತ್ರಾ ಕಾರ್ಯಕ್ರಮಗಳ ಪೌರೋಹಿತ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಗೆದ್ದಪ್ಪ ಸುಬೇದಾರ, ಶಾಮಣ್ಣ ಸುಂಡಿ, ಕನಕರಾಯ ಸುಂಡಿ, ಮುರ್ತುಜಾಸಾಬ್, ಜಿಲಾನಿಸಾಬ್‌, ಯಂಕಣ್ಣ ಕುಲಕರ್ಣಿ, ಜಗದೀಶಪ್ಪ ಗದ್ದಿ, ಶೇಖರಗೌಡ ಸೇರಿದಂತೆ ಹುಲಿಹೈದರ ಸಂಸ್ಥಾನದ ರಾಜವಂಶಸ್ಥರು ಇದ್ದರು.