ಸಾರಾಂಶ
ಪ್ರತಿ ವರ್ಷದಂತೆ ವಿಜಯದಶಮಿಯಂದು ನಡೆಯುವ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವರ ಮಹೋತ್ಸವ ಮೆರವಣಿಗೆ ಗುರುವಾರ ಸ್ಥಬ್ಧಚಿತ್ರಗಳು ಹಾಗೂ ವಿವಿಧ ಜಾನಪದ ಕಲಾತಂಡಗಳ ಮೇಳೈಕೆಯೊಂದಿಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಪ್ರತಿ ವರ್ಷದಂತೆ ವಿಜಯದಶಮಿಯಂದು ನಡೆಯುವ ತೀರ್ಥಹಳ್ಳಿಯ ಶ್ರೀರಾಮೇಶ್ವರ ದೇವರ ಮಹೋತ್ಸವ ಮೆರವಣಿಗೆ ಗುರುವಾರ ಸ್ಥಬ್ಧಚಿತ್ರಗಳು ಹಾಗೂ ವಿವಿಧ ಜಾನಪದ ಕಲಾತಂಡಗಳ ಮೇಳೈಕೆಯೊಂದಿಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.ಮಳೆಯೂ ಮೆರವಣಿಗೆಗೆ ಪೂರಕವಾಗಿ ಸಹಕರಿಸಿದ್ದು ವಿಶೇಷವಾಗಿತ್ತು. ಮಧ್ಯಾಹ್ನ 3.30 ಗಂಟೆಗೆ ಶ್ರೀರಾಮೇಶ್ವರ ದೇವಸ್ಥಾನ ಆವರಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ಭುವನೇಶ್ವರಿ ದೇವಿ ಪ್ರತಿಮೆಗೆ ಹಾರ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು, ವಿವಿಧ ಧಾರ್ಮಿಕ ಸ್ಥಬ್ಧಚಿತ್ರಗಳು ಆಕರ್ಷಕವಾಗಿದ್ದವು. ಇವುಗಳಲ್ಲಿ ಬ್ರಹ್ಮೋಸ್ ಕ್ಷಿಪಣಿ ಗಮನ ಸೆಳೆಯುವಂತಿತ್ತು. ರಾಜಬೀದಿ ಉತ್ಸವ ಹಾಗೂ ಭುವನೇಶ್ವರಿ ದೇವಿ ದಸರಾ ಮೆರವಣಿಗೆ ಮೆರವಣಿಗೆಯ ನಂತರ ಕುಶಾವತಿಯ ನೆಹರೂ ಪಾರ್ಕಿನಲ್ಲಿರುವ ಬನ್ನಿ ಮಂಟಪದಲ್ಲಿ ಮುಡಿಯಲಾಯಿತು.
ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜದ ವಿವಿದ ಕ್ಷೇತ್ರಗಳ ಗಣ್ಯರನ್ನು ಗೌರವಿಸಲಾಯಿತು. ಮನರಂಜನಾ ಕಾರ್ಯಕ್ರಮದ ನಂತರ ನಡೆದ ಹುಲಿವೇಷದ ಸ್ಪರ್ಧೆ ಅತ್ಯಂತ ಚಿತ್ತಾಕರ್ಷಕವಾಗಿತ್ತು.