ಸಂಗೂರಿನಲ್ಲಿ ಸಂಭ್ರಮದಿಂದ ನೆರವೇರಿದ ತೆಪ್ಪೋತ್ಸವ

| Published : Jan 16 2025, 12:46 AM IST

ಸಂಗೂರಿನಲ್ಲಿ ಸಂಭ್ರಮದಿಂದ ನೆರವೇರಿದ ತೆಪ್ಪೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ತಾಲೂಕಿನ ಸಂಗೂರ ಗ್ರಾಮದ ಸಿಂಧಗಿಮಠದಲ್ಲಿ ಸಂಕ್ರಾಂತಿ ಅಂಗವಾಗಿ ಹಾನಗಲ್ಲ ಕುಮಾರಸ್ವಾಮೀಜಿಗಳು ಹಾಗೂ ಸಿಂಧಗಿ ಶಾಂತವೀರೇಶ್ವರ ಮಹಾಸ್ವಾಮಿಗಳ ತೆಪ್ಪದ ರಥೋತ್ಸದ ಸಂಭ್ರಮದಿಂದ ಗ್ರಾಮದ ವರದಾ ನದಿಯಲ್ಲಿ ಜರುಗಿತು.

ಹಾವೇರಿ: ತಾಲೂಕಿನ ಸಂಗೂರ ಗ್ರಾಮದ ಸಿಂಧಗಿಮಠದಲ್ಲಿ ಸಂಕ್ರಾಂತಿ ಅಂಗವಾಗಿ ಹಾನಗಲ್ಲ ಕುಮಾರಸ್ವಾಮೀಜಿಗಳು ಹಾಗೂ ಸಿಂಧಗಿ ಶಾಂತವೀರೇಶ್ವರ ಮಹಾಸ್ವಾಮಿಗಳ ತೆಪ್ಪದ ರಥೋತ್ಸದ ಸಂಭ್ರಮದಿಂದ ಗ್ರಾಮದ ವರದಾ ನದಿಯಲ್ಲಿ ಜರುಗಿತು.

ಬಹುವರ್ಷಗಳಿಂದ ಸಂಪ್ರದಾಯದಂತೆ ಈ ಜಾತ್ರಾ ಮಹೋತ್ಸವ ನಡೆದುಬಂದಿದ್ದು, ಈ ಮೊದಲು 9 ದಿನಗಳ ಕಾಲ ನಡೆಯುತ್ತಿತ್ತು, ಕಾಲಕ್ರಮೇಣ ಈಗ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗುತ್ತಿದೆ.

ಸಂಕ್ರಾಂತಿ ಅಂಗವಾಗಿ ಉಭಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಹೂವಿನ ಅಲಂಕಾರ, ಮಹಾಗಣಾರಾಧನೆ ನಡೆಯಿತು. ಆನಂತರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಜರುಗಿತು. ಮಧ್ಯಾಹ್ನ ಉಭಯ ಶ್ರೀಗಳ ಭಾವಚಿತ್ರವನ್ನು ಹೂವಿನಿಂದ ಶೃಂಗರಿಸಿ ತೆಪ್ಪದಲ್ಲಿ ಇರಿಸಿ, ಹೋತನಹಳ್ಳಿ ಸಿಂಧಗಿಮಠದ ಪಟ್ಟಾಧ್ಯಕ್ಷರಾದ ಶಂಭುಲಿಂಗ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಭಕ್ತರ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ತೆಪ್ಪದ ರಥೋತ್ಸವ ಜರುಗಿತು.

ಈಗಾಗಲೇ ಸಂಗೂರ ಸೇತುವೆಯಲ್ಲಿ ವರದಾ ನದಿ ಹರಿವಿಗೆ ತಡೆಗೋಡೆ ಹಾಕಿದ್ದ ಹಿನ್ನೆಲೆಯಲ್ಲಿ ನೀರು ಬೃಹತ್ ಪ್ರಮಾಣದಲ್ಲಿ ಸಂಗ್ರಹಗೊಂಡಿದೆ. ಶಂಭುಲಿಂಗ ಪಟ್ಟಾಧ್ಯಕ್ಷರೇ ಸ್ವತಃ ತೆಪ್ಪದಲ್ಲಿ ಸಾಗಿ, ರಥೋತ್ಸವದಲ್ಲಿ ಪಾಲ್ಗೊಂಡರು. ಈ ವೇಳೆ ನೆರೆಯ ಹತ್ತಾರು ಗ್ರಾಮಗಳಲ್ಲದೇ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ವೈಭವದಿಂದ ಸಂಪನ್ನಗೊಂಡ ಹಾನಗಲ್ಲಿನ ರಾಮಲಿಂಗೇಶ್ವರ ದೊಡ್ಡ ರಥೋತ್ಸವ:

ಮಕರ ಸಂಕ್ರಾಂತಿ ನಿಮಿತ್ತ, ಶತಮಾನಗಳ ಇತಿಹಾಸ ಹೊಂದಿರುವ ಹಾನಗಲ್ಲ ಪಟ್ಟಣದ ಬಳಿಯ ರಾಮಲಿಂಗೇಶ್ವರ ಜಾತ್ರೆ ದೊಡ್ಡ ರಥೋತ್ಸವದೊಂದಿಗೆ ವೈಭವದಿಂದ ನೆರವೇರಿತು.

ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ರಥಕ್ಕೆ ಜನರು ಹಣ್ಣು-ಕಾಯಿ ನೈವೇದ್ಯದೊಂದಿಗೆ ಭಕ್ತಿ ಸಮರ್ಪಿಸಿದರು. ರಥದ ಕಳಶಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.ಇಲ್ಲಿನ ಗರಡಿಮನೆಯಿಂದ ಆರಂಭ ಪಡೆದ ರಥೋತ್ಸವ ರಂಜನಿ ಸರ್ಕಲ್ ಹಾಯ್ದುಕೊಂಡು ಕಿತ್ತೂರ ಚೆನ್ನಮ್ಮ ರಸ್ತೆಯ ಮೂಲಕ ಸೋಮವಾರಪೇಟೆ ಮಾರ್ಗವಾಗಿ ಧರ್ಮಾ ನದಿ ತಟದ ರಾಮಲಿಂಗೇಶ್ವರ ದೇವಸ್ಥಾನ ತಲುಪಿತು.

ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಸೋಮವಾರಪೇಟೆ ಓಣಿಯಲ್ಲಿ ವೇ.ಮೂ. ಪ್ರದೀಪ ಬಾಳಿಹಳ್ಳಿ ಭಟ್ರು ಅವರಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳ ಜನರು ಟ್ರ್ಯಾಕ್ಟರ್‌, ಚಕ್ಕಡಿ ಬಂಡಿಗಳಲ್ಲಿ ಆಗಮಿಸಿ ಕುಟುಂಬ ಸಮೇತರಾಗಿ ರಾಮಲಿಂಗೇಶ್ವರನ ದರ್ಶನ ಪಡೆದು ನದಿ ದಡದಲ್ಲಿ ಸಹಭೋಜನ ಸವಿದರು.