ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ವಿವಿಧ ಪ್ರಮುಖ ರಸ್ತೆಗಳಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ವಿಭಜಕಗಳು ನಿರ್ಮಾಣ ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಈ ಕಾಮಗಾರಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 4 ಕೋಟಿ ರು.ಗಳಿಗೂ ಹೆಚ್ಚು ಅನುದಾನ ಮೀಸಲಿರಿಸಲಾಗಿದೆ. ಗ್ರಾನೈಟ್ ಕಲ್ಲುಗಳಲ್ಲಿ ನಿರ್ಮಾಣವಾಗುವ ಈ ಡಿವೈಡರ್‌ಗಳು ನಗರದ ಅಂದಚೆಂದ ಹೆಚ್ಚಿಸುತ್ತವೆ ಎಂಬ ನೆಪದಲ್ಲಿ, ಕೋಟ್ಯಂತರ ರು. ಲೂಟಿ ಹೊಡೆಯುವ "ಕೈ "ಚೆಳಕ ಇದರ ಹಿಂದೆ ಅಡಗಿದೆ ಎಂಬ ಆರೋಪ ಕೇಳಿಬರುತ್ತಿವೆ.ಕೆಲ ತಿಂಗಳ ಹಿಂದೆ ಮುನ್ನ ರಸ್ತೆ ವಿಭಜಕಗಳ ಮಧ್ಯೆದ ಕಂಬಗಳಿಗೆ, ಒಂದೂವರೆ ಕೋಟಿ ವೆಚ್ಚದಲ್ಲಿ ಝಗಮಗಿಸುವ ಎಲ್‌ಇಡಿ ಬಲ್ಬು ಅಳವಡಿಸುವಲ್ಲಿ "ಕೈ "ಚೆಳಕ ತೋರಲಾಗಿತ್ತು. ನಂತರ, ಭೀಮಾ ನದಿ ಸೇತುವೆ ರಸ್ತೆ ದುರಸ್ತಿಯಲ್ಲೂ ಕೋಟಿಗಟ್ಟಲೇ ಹಣ ಸುರಿದಂತಿತ್ತು. ಈಗ, ಡಿವೈಡರ್‌ಗಳ ಸರದಿ.
ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಿಂದ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದವರೆಗೆ, ನೇತಾಜಿ ವೃತ್ತದಿಂದ ಡಿಡಿಪಿಐ ಕಚೇರಿ, ಅಲ್ಲಿಂದ ಆರ್ಟಿಓ ರಸ್ತೆ, ಹತ್ತಿಕುಣಿ ರಸ್ತೆ, ಗಂಜ್ ರಸ್ತೆಗಳಲ್ಲಿ ಡಿವೈಡರ್ ನಿರ್ಮಾಣ ಕಾರ್ಯ ಕಂಡುಬರುತ್ತದೆ. ಅದರಲ್ಲೂ, ಸುರಿಯುತ್ತಿರುವ ಧಾರಾಕಾರ ಮಳೆಯಲ್ಲಂತೂ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮಳೆಗಾಲ ಮುಗಿಯುವಷ್ಟರಲ್ಲಿ ಇವುಗಳ ಆಯುಷ್ಯ ಇರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಹತ್ತಾರು ಕೋಟಿ ರು.ಗಳ ಬಿಲ್-ವಿದ್ಯೆ ಸಂಬಂಧಿತರ "ಕೈ "ಗೆ ಸೇರಿರುತ್ತದೆ ಎನ್ನಲಾಗುತ್ತಿದೆ.ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಜುಟ್ಟಿಗೆ ಮಲ್ಲಿಗೆ ಎಂಬಂತೆ, ಅನುದಾನ ಕೊರತೆಯಿಂದ ಕಂಗೆಟ್ಟಿದ್ದರೆ, ನಗರದ ಶೃಂಗಾರದ ನೆಪದಲ್ಲಿನ ಡಿವೈಡರ್ ಕಾಮಗಾರಿ ಕೋಟ್ಯಂತರ ಲಪಟಾಯಿಸುವ ತಂತ್ರ ಎಂದು ಆರೋಪಗಳಿವೆ. ಕೆಲವೆಡೆ ಡಿವೈಡರ್‌ಗಳು ಕಳಪೆ ಕಾಮಗಾರಿಯಿಂದ ಕಲ್ಲುಗಳು ಕಿತ್ತು ಹೊರಬಂದು, ಸಿಮೆಂಟ-ಮರಳಿನ ಒಳ ಒಪ್ಪಂದ ಬಹಿರಂಗವಾಗಿದೆ.
ಡಿವೈಡರ್ ನಿರ್ಮಾಣ ಹೆಸರಲ್ಲಿ ಮುಖ್ಯರಸ್ತೆಯ ಮೇಲೆಯೇ, ಎಲ್ಲೆಂದರಲ್ಲಿ ಬಿಸಾಡುತ್ತಿರುವ ಹುರಸಗುಂಡಗಿ ಸೈಜುಗಲ್ಲುಗಳು, ಸಂಚಾರ ದಟ್ಟಣೆಗೆ ಕಾರಣವಾಗಿದೆಯಲ್ಲದೆ, ವಾಜನ ಸವಾರರ ಆಯ ತಪ್ಪಿದರೆ ಆಸ್ಪತ್ರೆ ಗ್ಯಾರಂಟಿ ಎಂಬ ಆತಂಕ ಮೂಡಿಸುತ್ತದೆ.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ನೀಡಲಾದ, ಹತ್ತಾರು ಕೋಟಿ ರು.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಡಿವೈಡರ್‌ಗಳು ಹಾಗೂ ರಾತ್ರಿವೇಳೆ ಮಧ್ಯೆದ ಕಂಬಗಳಿಗೆ ಹಾಕಲಾಗಿರುವ ಝಗಮಗಿಸುವ ಬಲ್ಬುಗಳು, ಯಾದಗಿರಿಯನ್ನು ಊಪರ್ ಶೇರ್‌ವಾನಿ, ಅಂದರ್ ಪರೇಶಾನಿ..! " (ಹೊರಗಡೆ ಥಳುಕು, ಒಳಗಡೆ ಹುಳುಕು) ಎಂಬಂತಾಗಿಸಿದಂತಿದೆ.