ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಸರ್ಕಾರಿ ಮಾದರಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ 1.21 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿ ಅದನ್ನು ವಾಪಸ್ಸು ತೆಗೆದುಕೊಂಡ ಸರ್ಕಾರದ ಕ್ರಮವನ್ನು ಬಿಜೆಪಿ ಶಾಸಕ ಬಿ. ಸುರೇಶ ಗೌಡರು ವಿಧಾನಸಭೆಯಲ್ಲಿ ಉಗ್ರವಾಗಿ ತರಾಟೆಗೆ ತೆಗೆದುಕೊಂಡರು. ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಹರೀಶ್ ಅವರ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅ ಉತ್ತರ ಕೊಡುತ್ತ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನೆರವಿನಡಿ ರಾಜ್ಯದಾದ್ಯಂತ 500 ಕೆಪಿಎಸ್ ಶಾಲೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದಾಗ ಸುರೇಶ ಗೌಡರು ಸಿಡಿದು ನಿಂತರು. ನನ್ನ ಕ್ಷೇತ್ರದ ನಾಗವಲ್ಲಿ ಶಾಲೆಗೆ 1.21 ಕೋಟಿ ರುಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಂದು ಶಂಕು ಸ್ಥಾಪನೆ ನೆರವೇರಿಸಿ ಹೋಗಿದ್ದರು. ಆ ಕಾಮಗಾರಿಗೆ ಟೆಂಡರ್ ಕೂಡ ಆಗಿತ್ತು. ಅಂಥ ಹಣವನ್ನು ವಾಪಸು ತೆಗೆದುಕೊಳ್ಳಲಾಗಿದೆ ಎಂದು ಅವರು ಸದನದಲ್ಲಿ ಕಟುವಾಗಿ ಟೀಕಿಸಿದರು.ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅಧಿಕಾರಿಗಳು ಮತ್ತು ಸಚಿವರು ಇತ್ತ ಗಮನ ಕೊಟ್ಟು ಆ ಶಾಲೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸೂಚಿಸಿದರು. ಸುರೇಶಗೌಡರ ಆಕ್ರೋಶ ಸರಿ ಇದೆ, ಅವರಿಗೆ ಅನ್ಯಾಯ ಆಗಿರುವುದು ನಿಜ ಎಂದು ಸಚಿವ ಮಧು ಬಂಗಾರಪ್ಪ ಸಮಾಧಾನ ಹೇಳಲು ಪ್ರಯತ್ನಿಸಿದಾಗಲೂ, ಇದು ಮೋಸದ ಮಾತು ಎಂದು ಶಾಸಕರು ಖಂಡಿಸಿದರು.
ಮೂರು ಸಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೂ ಘನತೆ ಗೌರವ ಇದೆ. ಶಾಲೆಯ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಿ, ಟೆಂಡರ್ ಕರೆದ ಹಂತದಲ್ಲಿ ಹಣವನ್ನು ವಾಪಸ್ಸು ತೆಗೆದುಕೊಂಡ ಉದಾಹರಣೆ ಇದೆಯೇ ಎಂದು ಅವರು ಪ್ರಶ್ನಿಸಿದರು. ಅವರ ನೆರವಿಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೂ ಬಂದರು.ಕೊನೆಗೆ ಮಧು ಬಂಗಾರಪ್ಪ ಅವರು ಈ ವಿಚಾರದಲ್ಲಿ ಸರ್ಕಾರದ ಕಡೆಯಿಂದ ಲೋಪವಾಗಿರುವುದು ನಿಜ, ತಾವು ನ್ಯಾಯ ಒದಗಿಸುವುದಾಗಿ ಭರವಸೆ ಕೊಟ್ಟ ನಂತರ ಸುರೇಶ ಗೌಡರು ಸಮಾಧಾನಗೊಂಡರು.