ಸಾರಾಂಶ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ೩೦ ನೇ ಸಾಹಿತ್ಯ ಪಯಣ ಹೆಜ್ಜೆ । ರಸೋ ವೈ ಸಃ ಕೃತಿ ಲೋಕಾರ್ಪಣೆ । ಗೀತಗಾಯನ, ಕವಿಗೋಷ್ಠಿಕನ್ನಡಪ್ರಭ ವಾರ್ತೆ ಹಾಸನ
ಶಶಿಚಂದ್ರಿಕಾರವರ ‘ರಸೋ ವೈ ಸಃ’ ಒಂದು ಲೇಖನ, ಪದ್ಯ, ಕಥೆ, ನಾಟಕಗಳನ್ನೊಳಗೊಂಡ ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಒಳಗೊಂಡಿರುವ ಕನ್ನಡ ಸಾಹಿತ್ಯದ ವೈವಿಧ್ಯಮಯ ಸತ್ವಯುತ ಸಾಹಿತ್ಯ ಕೃತಿಯಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.ಹಾಸನ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಗೀತ ವಿದ್ವಾನ್ ಬಿ.ಎನ್.ಎಸ್.ಮುರುಳಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ೩೦ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ವಿದುಷಿ ಶಶಿಚಂದ್ರಿಕಾರವರ ದ್ವಿತೀಯ ಕೃತಿ ‘ರಸೋ ವೈ ಸಃ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ, ‘ಶಶಿಚಂದ್ರಿಕಾರವರು ನಮ್ಮ ನಡುವಿನ ಸಾಹಿತ್ಯ, ಸಂಗೀತ ಎರಡೂ ಮೇಳೈಸಿದ ಅಂತರ್ಮುಖಿ ಪ್ರತಿಭೆ.
ಕೃತಿಯು ಸಪ್ತಸ್ವರ ಕಲಾ ಕೇಂದ್ರ ನಡೆದು ಬಂದ ಇಪ್ಪತ್ತೈದು ವರ್ಷಗಳ ಸುವರ್ಣ ಹೆಜ್ಜೆಗಳ ಜೊತೆ ಜೊತೆಗೆ ಇವರ ಬಹುಭಾಷಾ ಪಾಂಡಿತ್ಯ, ಸಂಗೀತ ಸಾಧನೆ, ದೇಶಪ್ರೇಮ, ಸಾಹಿತ್ಯ ಉತ್ಕಟತೆ, ಸುಖೀ ಸಮಾಜದ ಕನಸು ಕೃತಿಯುದ್ದಕ್ಕೂ ಓದುಗನಿಗೆ ಮುಖಾಮುಖಿಯಾಗುತ್ತದೆ’ ಎಂದು ಹೇಳಿದರು.ಅವರ ಕವಿತೆಗಳು ದಾಸರ, ಸಂತರ ಪದಗಳನ್ನು ನೆನಪಿಸುತ್ತವೆ. ಗದ್ಯದ ಸದೃಢತೆ, ಕಾವ್ಯದ ಗಟ್ಟಿತನ, ಪದ ಜಿಪುಣತನಗಳು ಕವಯಿತ್ರಿಗೆ ಸಿದ್ಧಿಸಿವೆ. ಜಿಲ್ಲೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ಸಂದಿದ ವಿಶಿಷ್ಟ ಮೌಲ್ಯಯುತ ಕೃತಿಗಳಲ್ಲಿ ಇದೂ ಸಹ ಒಂದಾಗಿದೆ’ ಎಂದು ತಿಳಿಸಿದರು.
ಹಾಸನ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷೆ ಕೆ.ಸಿ.ಗೀತಾ ಮಾತನಾಡಿ, ‘ಸಂಗೀತ ಆರಾಧಕಿಯಾದ ನನಗೆ ಶಶಿಚಂದ್ರಿಕಾರವರ ‘ರಸೋ ವೈ ಸಃ’ ಕೃತಿ ಅತ್ಯಾನಂದ ನೀಡಿದೆ. ಸಂಪೂರ್ಣ ವರ್ಣಮಯವಾದ ಈ ಕೃತಿಯು ಕೈಸೇರುತ್ತಲೇ ಓದುಗನ ಮನವನ್ನು ಮುದಗೊಳಿಸುತ್ತದೆ. ಇಲ್ಲಿನ ರಚನೆಗಳು ಸಾಮಾನ್ಯರಿಗೆ ಅರ್ಥವಾಗುವುದು ಕಷ್ಟ. ಇವರ ಭಾಷಾ ಪ್ರೌಢಿಮೆ ಇಲ್ಲಿ ಎದ್ದು ಕಾಣುತ್ತದೆ’ ಎಂದು ಅಭಿಪ್ರಾಯಪಟ್ಟರು.ಹಿರಿಯ ಸಾಹಿತಿ ಚಂದ್ರಕಾಂತ ಪಡೆಸೂರ ಅವರಿ, ಕ್ಷುಲ್ಲಕ ಆಸಕ್ತಿಗಳಿಗೆ ಅಕಲ್ಪನೀಯ ಮಾನವ ಸಾಮರ್ಥ್ಯ ಪೋಲಾಗುತ್ತಿರುವ ಬಗ್ಗೆ ಕವಯಿತ್ರಿ ಶಶಿಚಂದ್ರಿಕಾರವರ ಆತಂಕ ಕೃತಿಯಲ್ಲಿ ಪಲ್ಲವಿಸಿದೆ. ನಿತ್ಯ ನಿರಂತರವಾಗಿ ಕಾಡುವ ಪ್ರತಿಭಾ ಮತ್ಸರಗಳ ಬಗ್ಗೆ ಕವಯಿತ್ರಿ ನೇರ ಹಾಗೂ ನಿಷ್ಠುರವಾಗಿ ತಮ್ಮ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ. ಜೀವಭಾವದಲ್ಲಿರುವ ತಪಸ್ವಿಗೆ ಲೋಕಜೀವನದ ಅಗ್ನಿ ಪರೀಕ್ಷೆಯೂ ಏನೂ ಮಾಡಲಾರದು ಎಂಬುದನ್ನು ಮನೋಜ್ಞವಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಹಿರಿಯ ಸಂಸ್ಕೃತ ವಿದ್ವಾಂಸ ಪಿ.ವಿ. ಪರಮೇಶ್ವರ ಭಟ್, ಕವಯಿತ್ರಿ ರೇಖಾಪ್ರಕಾಶ್, ಕವಿ ಧರ್ಮ ಕೆರಲೂರು, ಕವಯಿತ್ರಿ ಗಿರಿಜಾ ನಿರ್ವಾಣಿ, ಕವಿ ವಿನಯಚಂದ್ರ, ಜಯದೇವಪ್ಪ, ಬಿ.ಎನ್.ಎಸ್.ಮುರುಳಿ, ವಾಸು ಸಮುದ್ರವಳ್ಳಿ, ಗಿರೀಶ್ ಬಾಬು ಹೊಸಮನೆ, ಪ್ರಕಾಶ್, ಮಂಜುನಾಥ್, ಪಂಕಜ, ಕು.ವಿಮರ್ಶಾ ಚಂದ್ರ, ಎ.ಆರ್.ಪ್ರೇಮಲತಾ, ಶ್ರೀರಾಜೇಂದ್ರ, ಮಾಲಾ ಇದ್ದರು. ಹಲವರಿಂದ ಕವಿಗೋಷ್ಠಿ:ನಂತರ ನಡೆದ ಕವಿಗೋಷ್ಠಿಯಲ್ಲಿ ಚಂದ್ರಕಾಂತ ಪಡೆಸೂರ, ಶಶಿಚಂದ್ರಿಕಾ, ನೀಲಾವತಿ ಸಿ.ಎನ್, ಸರೋಜ ಟಿ.ಎಂ, ಎಚ್.ಬಿ. ಚೂಡಾಮಣಿ, ಡಾ.ಎಂ.ಮಂಜುನಾಥ್, ಭಾರತಿ ಎಚ್.ಎನ್, ಕುಮಾರ್ ಹೊನ್ನೇನಹಳ್ಳಿ, ವಿನಯಚಂದ್ರ, ಧರ್ಮ ಕೆರಲೂರು, ರೇಖಾ ಪ್ರಕಾಶ್, ಗಿರಿಜಾ ನಿರ್ವಾಣಿ, ಕೆ.ಸಿ.ಗೀತಾ ಸೇರಿ ಹಲವರು ಕಾವ್ಯ ವಾಚನ ಮಾಡಿದರು.ಹಾಸನದ ೩೦ನೇ ಸಾಹಿತ್ಯ ಪಯಣ ಹೆಜ್ಜೆ ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಬಿ.ಎನ್.ಎಸ್.ಮುರಳಿಯವರ ಸಪ್ತಸ್ವರ ಕಲಾಕೇಂದ್ರದ ವಿದ್ಯಾರ್ಥಿಗಳಾದ ಸುಕನ್ಯಾ, ಯಶಸ್ವಿನಿ, ರಿಧಿ ಶರ್ಮಾ, ವಿಸ್ಮಯ ಎಸ್.ಎಲ್, ಎನ್.ದಾಕ್ಷಾಯಣಿ, ದೀಕ್ಷಿತ ಜಿ.ಎಚ್, ದಿವ್ಯಶ್ರೀ ಎಸ್, ಸುರಭಿ ಎಸ್. ವಿದುಷಿ ಶಶಿಚಂದ್ರಿಕಾರವರ ರಚನೆಗಳನ್ನು ಹಾಡಿದರು.