ಸಾರಾಂಶ
ವಾಸ್ತುಶಿಲ್ಪ ಕಲೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಅಮರಶಿಲ್ಪಿ ಜಕಣಾಚಾರಿಯವರು ಎಲ್ಲಾ ಕಾಲಮಾನಕ್ಕೂ ಚಿರಸ್ಮರಣೀಯರಾಗಿದ್ದಾರೆ ಎಂದು ಶಾಸಕ ಪುಟ್ಟರಂಗ ಶೆಟ್ಟಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರವಾಸ್ತುಶಿಲ್ಪ ಕಲೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಅಮರಶಿಲ್ಪಿ ಜಕಣಾಚಾರಿಯವರು ಎಲ್ಲಾ ಕಾಲಮಾನಕ್ಕೂ ಚಿರಸ್ಮರಣೀಯರಾಗಿದ್ದಾರೆ ಎಂದು ಶಾಸಕ ಪುಟ್ಟರಂಗ ಶೆಟ್ಟಿ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿಯವರು ದೇಶಾದ್ಯಂತ ನಿರ್ಮಿಸಿರುವ ದೇವಾಲಯಗಳಲ್ಲಿನ ಮನಸೂರೆಗೊಳ್ಳುವ ಶಿಲ್ಪಕಲಾ ಸೌಂದರ್ಯದಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ. ಶಿಲ್ಪಕಲೆಗೆ ಹೆಸರಾದ ಸೋಮನಾಥಪುರ, ಬೇಲೂರು, ಹಳೇಬೀಡು ಸೇರಿದಂತೆ ಹಲವಾರು ದೇವಾಲಯಗಳು ಸಹಸ್ರಾರು ದೇಶ-ವಿದೇಶಿ ಪ್ರವಾಸಿಗರ ಕಣ್ಮನಗಳನ್ನು ಸೂಜಿಗಲ್ಲಿನಂತೆ ಸೆಳೆದಿವೆ. ಕರ್ನಾಟಕ ಶಿಲ್ಪಕಲೆಯ ತವರೂರು ಎನಿಸಲು ಅಮರಶಿಲ್ಪಿ ಜಕಣಾಚಾರಿ ಕೈಚಳಕವೇ ಕಾರಣವಾಗಿದೆ. ಜಕಣಾಚಾರಿ ಅವರು ಎಂದೆಂದಿಗೂ ಅಜರಾಮರರಾಗಿದ್ದಾರೆ ಎಂದರು.ಮೂಲ ಕಸುಬನ್ನೇ ವೃತ್ತಿಯಾಗಿಸಿಕೊಂಡಿರುವ ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ದೊರೆಯುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸಮುದಾಯದ ಸ್ಮಶಾನಕ್ಕಾಗಿ ಉತ್ತುವಳ್ಳಿಯಲ್ಲಿ ಒಂದೂವರೆ ಎಕರೆ ಜಾಗ ಮಂಜೂರಾಗಿದೆ. ಜಿಲ್ಲಾಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಬಹುದಿನಗಳ ಬೇಡಿಕೆ ಇದೆ. ಸಮುದಾಯ ಭವನಕ್ಕಾಗಿ ಜಾಗ ಗುರುತಿಸಿ ಬಳಿಕ ಅವಶ್ಯ ಅನುದಾನವನ್ನು ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿಯವರು ಸಾಂಸಾರಿಕ ಜೀವನವನ್ನು ಬದಿಗಿಟ್ಟು ಹಲವು ಸುಂದರ ದೇವಾಲಯಗಳನ್ನು ನಾಜೂಕಾಗಿ ನಿರ್ಮಿಸಿದ ದಂತಕತೆಯಾಗಿದ್ದಾರೆ. ತಮ್ಮ ಬದುಕನ್ನು ಶಿಲ್ಪಕಲೆಯ ಉನ್ನತಿಗಾಗಿ ಮೀಸಲಿಟ್ಟ ಮಹಾಪುರುಷ ಎನಿಸಿದ್ದಾರೆ. ಅವರ ಸಾಧನೆಯನ್ನು ಸ್ಮರಿಸುವ ಅಗತ್ಯವಿದೆ. ಶಿಲ್ಪಕಲೆಯಲ್ಲಿ ಸಾಧನೆಗೈದವರಿಗೆ ಸರ್ಕಾರಗಳು ಜಕಣಾಚಾರಿ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಿವೆ. ವಿಶ್ವಕರ್ಮ ಸಮುದಾಯದ ಪ್ರಗತಿಗಾಗಿ ಜಿಲ್ಲಾಡಳಿತದಿಂದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಮುಖ್ಯ ಭಾಷಣ ಮಾಡಿದ ಮೈಸೂರು ಮಹಾರಾಣಿ ಕಾಲೇಜಿನ ಕಲಾ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಡಾ. ಚಂದ್ರಕಲಾ ಅವರು ಮಾತನಾಡಿ ಅಮರಶಿಲ್ಪಿ ಜಕಣಾಚಾರಿಯವರು 12ನೇ ಶತಮಾನದ ಮಧ್ಯಭಾಗದಲ್ಲಿ, ಹೊಯ್ಸಳರ ರಾಜರ ಆಡಳಿತದ ಕಾಲಘಟ್ಟದಲ್ಲಿ ಜೀವಿಸಿದ್ದರು. ತುಮಕೂರು ಜಿಲ್ಲೆಯ ಕ್ರೀಡಿಕಾಪುರದಲ್ಲಿ ಜನಿಸಿದ ಜಕಣಾಚಾರಿಯವರಲ್ಲಿ ಶಿಲ್ಪಕಲೆಯ ಸೌಂದರ್ಯಪ್ರಜ್ಞೆ ಅಗಾಧವಾಗಿತ್ತು. ಹಲವಾರು ಸುಂದರ ದೇವಾಲಯಗಳ ಬಳಿಕ ಅಂತಿಮವಾಗಿ ಕ್ರೀಡಿಕಾಪುರದಲ್ಲಿ ನಿರ್ಮಿಸಿದ ಚನ್ನಕೇಶವ ದೇವಾಲಯ ಆಧುನಿಕ ಶಿಲ್ಪಕಲೆಯ ನವ್ಯಶೈಲಿಯನ್ನು ಮೀರಿಸುವಂತಿದೆ ಎಂದರು.ಅಮರಶಿಲ್ಪಿ ಜಕಣಾಚಾರಿಯವರು ನಿರ್ಮಿಸಿದ ಸಾಕಷ್ಟು ಸುಂದರ ದೇವಾಲಯಗಳು ವಿದೇಶಿಯರ ದಾಳಿಗೆ ಒಳಗಾಗಿವೆ. ವಾಸ್ತುಶಿಲ್ಪ ಕಲೆ ಮುಂದಿನ ಪೀಳಿಗೆಗೆ ಉಳಿಯುವಂತಾಗಬೇಕು. ಜಕಣಾಚಾರಿಯವರು ಒಂದು ಸಮುದಾಯದ ಸ್ವತ್ತಲ್ಲ. ಕಲ್ಲಿನ ಕುಸುರಿ ಕೆಲಸವನ್ನು ಪರಾಮರ್ಶಿಸಿದಾಗ ಎಲ್ಲರಿಗೂ ಅವರು ಸಲ್ಲುವವರಾಗುತ್ತಾರೆ. ಅಮರಶಿಲ್ಪಿ ಜಕಣಾಚಾರಿಯವರು ಶಿಲ್ಪಕಲೆಯಲ್ಲಿ ಸಂಸ್ಕೃತಿ, ಶೃಂಗಾರ ರಸ, ಮಾನವೀಯ ಮೌಲ್ಯಗಳನ್ನು ಅಡಕಗೊಳಿಸಿದ್ದಾರೆ ಎಂದು ಡಾ. ಚಂದ್ರಕಲಾ ಅವರು ತಿಳಿಸಿದರು.ನಗರಸಭಾ ಸದಸ್ಯರಾದ ಎಚ್.ಎಸ್. ಮಮತ ಅವರು ಮಾತನಾಡಿ ಅಮರಶಿಲ್ಪಿ ಜಕಣಾಚಾರಿಯವರ ಜಯಂತಿ ಶುಭಾಷಯಗಳನ್ನು ತಿಳಿಸಿದರು. ಇದೇ ವೇಳೆ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಅಲ್ಲದೆ ಶಿಲ್ಪಕಲಾ ಕ್ಷೇತ್ರದಲ್ಲಿ ಸಾಧನೆಗೈದ ಗಿರಿ ಗುಡಿಗಾರ್ ಹಾಗೂ ಬಸವಣ್ಣ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬೀಬ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಬಸವರಾಜು ಮತ್ತಿತರರಿದ್ದರು.