ಹಸಿರು ಸಂರಕ್ಷಣೆ ಎಲ್ಲರ ಹೊಣೆ: ಬಿ.ಕೆ. ಸಂತೋಷ

| Published : Nov 26 2024, 12:51 AM IST / Updated: Nov 26 2024, 12:52 AM IST

ಸಾರಾಂಶ

ಪರಿಸರ ಸಂರಕ್ಷಣೆಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರದ ಉಳಿವಿಗೆ ಸಹಾಯಕವಾಗುತ್ತದೆ.

ಕಾರವಾರ: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ವತಿಯಿಂದ ಇಲ್ಲಿನ ನಗರಸಭೆಯ ಸಭಾಭವನದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಪರಿಸರ ರಕ್ಷಣಾ ದಿನದ ಪ್ರಯುಕ್ತ ಸೋಮವಾರ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಪರಿಸರ ಅಧಿಕಾರಿ ಬಿ.ಕೆ. ಸಂತೋಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು, ಘನತ್ಯಾಜ್ಯ, ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್, ಕಟ್ಟಡ, ಇ- ತ್ಯಾಜ್ಯ, ಬ್ಯಾಟರಿ, ಜೀವ ವೈದ್ಯಕೀಯ ತ್ಯಾಜ್ಯಗಳನಿರ್ವಹಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಮನುಷ್ಯ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದು, ಇದು ಹೀಗೆ ಮುಂದುವರಿದರೆ ನಮ್ಮ ಮಾನವನ ಸರ್ವನಾಶ ಆಗಲಿದೆ. ಇಂದಿನಿಂದಲೇ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದ್ದು, ಪರಿಸರ ಸಂರಕ್ಷಣೆಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರದ ಉಳಿವಿಗೆ ಸಹಾಯಕವಾಗುತ್ತದೆ ಎಂದರು.

ಪೌರಾಯುಕ್ತ ಜಗದೀಶ ಹುಲಗೆಜ್ಜಿ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರದ ಬಗ್ಗೆ ತಿಳಿಸಿ, ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ಗಮನಹರಿಬೇಕಿದೆ ಎಂದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ ರಾಷ್ಟ್ರೀಯ ಜಲಮಿಷನ್, ಜಲಶಕ್ತಿ ಮಂತ್ರಾಲಯದ ಜಲಶಕ್ತಿ ಅಭಿಯಾನದ ಬಗ್ಗೆ ಮಾತನಾಡಿ, ಜಲಶಕ್ತಿ ಅಭಿಯಾನವು ದೇಶದ ನೀರಿನ ಸಂರಕ್ಷಣೆ ಮತ್ತು ನೀರಿನ ಸುರಕ್ಷತೆಯ ಅಭಿಯಾನವಾಗಿದೆ. ನೀರಿನ ಸಂರಕ್ಷಣೆಯ ಅಗತ್ಯ ಮಹತ್ವ ಮತ್ತು ಜೀವ ಜಲದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.

ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಯೋಜನಾ ಸಹಾಯಕಿ ಡಾ. ಅಮೃತಾ ಶೇಟ್, ಲೆಕ್ಕಪಾಲಕ ಮಂಜುನಾಥ, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಯಾಕುಬ್ ಶೇಖ್, ಕಿರಿಯ ಆರೋಗ್ಯ ನಿರೀಕ್ಷಕಿ ದೀಪಾ ಶೆಟ್ಟಿ ಇದ್ದರು.

ಸಂಸ್ಕೃತ ಹೆಮ್ಮೆಯ ಭಾಷೆ: ಪ್ರಮೋದ ಹೆಗಡೆ

ಯಲ್ಲಾಪುರ: ಜ್ಯೋತಿಷ, ಗಣಿತಶಾಸ್ತ್ರವನ್ನು ಆಧರಿಸಿರುವ ವೈಜ್ಞಾನಿಕ ಸ್ವರೂಪದ ಪ್ರಾಚೀನ ಭಾಷೆಯಾದ ಸಂಸ್ಕೃತವು ಅಗೋಚರವಾದ ಪರಮಸತ್ಯವನ್ನು ಹೊಂದಿದೆ ಎಂದು ಪಂಚಾಯತರಾಜ್ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ತಿಳಿಸಿದರು.ನ. ೨೩ರಂದು ತಾಲೂಕಿನ ಉಮ್ಮಚಗಿಯಲ್ಲಿ ಶ್ರೀಮಾತಾ ವೈದಿಕ ಶಿಕ್ಷಣ ಸಂಸ್ಥೆ, ಶ್ರೀಮಾತಾ ಸಂಸ್ಕೃತ ಮಹಾಪಾಠ ಶಾಲೆ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವದಲ್ಲಿ ಮಾತನಾಡಿದರು.ದೇಶ- ವಿದೇಶದ ವಿಜ್ಞಾನಿಗಳು ಸಂಶೋಧಿಸಿರುವುದನ್ನು ನಮ್ಮ ಋಷಿ- ಮುನಿಗಳು ಅಂದೇ ಅರಿತು, ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದರು. ಇಂತಹ ಅನೇಕ ಗ್ರಂಥಗಳ ಹಕ್ಕುಸ್ವಾಮ್ಯವನ್ನು ಜರ್ಮನಿಯವರು ಬುದ್ಧಿವಂತಿಕೆಯಿಂದ ಪಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ. ನಾವು ಸಂಸ್ಕೃತ ಕಲಿಯಲು ವಂಚಿತರಾಗಿ ಭಾಗ್ಯವಿಹೀನರಾಗಿದ್ದು, ದುರದೃಷ್ಟಕರ. ನಂಬಿಕೆಯ ಭಾಷೆಯಾದ ಸಂಸ್ಕೃತ ನಮ್ಮ ಹೆಮ್ಮೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಟಿ.ವಿ. ಹೆಗಡೆ ಬೆದೆಹಕ್ಕಲು ಮಾತನಾಡಿ, ಅನ್ವರ್ಥಕವಾಗಿರಲೆಂಬ ಕಾರಣದಿಂದ ಕಾರ್ಯಕ್ರಮದಲ್ಲಿ ಮಾತಿಗಿಂತ ಕೃತಿಗೆ ಆದ್ಯತೆ ನೀಡಲಾಗಿದೆ. ಪರಸ್ಪರ ಸಂವಹನಕ್ಕೆ ಸಹಕಾರಿಯಾಗುವ ಭಾಷೆಗಳ ಕಲಿಕೆಗೆ ದ್ವಿಭಾಷಾ ನಿಘಂಟುಗಳು ಪ್ರಕಟಗೊಳ್ಳಬೇಕು ಎಂದರು.

ಸಿಆರ್‌ಪಿ ವಿಷ್ಣು ಭಟ್ಟ, ಮಂಚಿಕೇರಿ ಸಿಆರ್‌ಪಿ ಕೆ.ಆರ್. ನಾಯ್ಕ ಮಾತನಾಡಿದರು. ಆರ್‌ಎಫ್‌ಒ ಬಸವರಾಜ ಬೋಚಳ್ಳಿ, ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎಲ್.ಜಿ. ಹೆಗಡೆ ಇದ್ದರು. ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ, ವಸುಂಧರಾ ಹೆಗಡೆ, ಪ್ರಜ್ಞಾ ಶೇಟ್ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ನಾಗೇಶ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕರಾದ ಡಾ. ಕೆ.ಸಿ. ನಾಗೇಶ ಭಟ್ಟ ಹಾಗೂ ವಿ. ನಾಗರಾಜ ಹೆಗಡೆ ನಿರ್ವಹಿಸಿದರು. ಡಾ. ಮಂಜುನಾಥ ಭಟ್ಟ ನಿರ್ವಹಿಸಿದರು.

ಅಧ್ಯಾಪಕ ವಿ. ಶಂಕರ ಭಟ್ಟ ಸ್ಪರ್ಧಾ ಕಾರ್ಯಕ್ರಮ ನಿರ್ವಹಿಸಿದರು. ವೈದಿಕ ರಾಷ್ಟ್ರಗೀತೆಯೊಂದಿಗೆ ಉತ್ಸವ ಮುಕ್ತಾಯಗೊಂಡಿತು.