ಮಂಜುನಾಥ ಕೆ.ಎಂ.
ಬಳ್ಳಾರಿ: ಮಹಾನಗರ ಪಾಲಿಕೆಯ 13ನೇ ವಾರ್ಡ್‌ನ ಸ್ವಚ್ಛತಾ ಮೇಲ್ವಿಚಾರಕ ಜಗನ್ನಾಥ ಹಸಿಕಸ, ಒಣಕಸವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ಎರೆಹುಳು ಗೊಬ್ಬರವನ್ನಾಗಿ ಪರಿವರ್ತಿಸುವ ಮೂಲಕ ಪರಿಸರ ಸಂರಕ್ಷಣೆಗೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ.ಪ್ರತಿ ದಿನ ವಾರ್ಡ್‌ನಲ್ಲಿ ಸಂಗ್ರಹವಾಗುವ ಹಸಿಕಸ, ಒಣಕಸವನ್ನು ಬೇರ್ಪಡಿಸಿ, ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಿ ಎರೆಹುಳು ಗೊಬ್ಬರವನ್ನಾಗಿ ಪರಿವರ್ತಿಸಿ, ತ್ಯಾಜ್ಯವನ್ನು ಉಪಯುಕ್ತ ಸಾವಯವ ಗೊಬ್ಬರವನ್ನಾಗಿಸುವ ಜಗನ್ನಾಥ ರೆಡ್ಡಿ ಅವರ ಪರಿಸರ ಸ್ನೇಹಿ ಕೆಲಸದಿಂದಾಗಿಯೇ ವಾರ್ಡ್‌ನ ಸಾವಿರಕ್ಕೂ ಅಧಿಕ ಗಿಡಗಳು ಜೀವತುಂಬಿಕೊಂಡಿವೆ.
ಗೊಬ್ಬರ ತಯಾರಿಕೆ:ಮನೆಮನೆಗಳಿಂದ ಸಂಗ್ರಹವಾಗುವ ಅಡುಗೆ ತ್ಯಾಜ್ಯ, ತರಕಾರಿ ಅವಶೇಷಗಳು, ಎಲೆಗಳು ಸೇರಿದಂತೆ ಹಸಿಕಸವನ್ನು ಪ್ರತ್ಯೇಕಿಸಿ ತರುವ ಪಾಲಿಕೆಯ ಪೌರ ಕಾರ್ಮಿಕರು, 13ನೇ ವಾರ್ಡ್‌ನ ಮಿಲ್ಲಾರ್‌ಪೇಟೆಯ ಟ್ಯಾಂಕ್ ಬಳಿಯ ಜಾಗವೊಂದರಲ್ಲಿ ಸಂಗ್ರಹಿಸುತ್ತಾರೆ. ಬಳಿಕ ಸೂಕ್ತ ತಾಪಮಾನ ಮತ್ತು ತೇವಾಂಶ ಕಾಪಾಡಿಕೊಂಡು ವೈಜ್ಞಾನಿಕ ವಿಧಾನದಲ್ಲಿ ಜಗನ್ನಾಥ ರೆಡ್ಡಿ ಸಂಸ್ಕರಿಸುತ್ತಾರೆ. ಕೆಲವೇ ದಿನಗಳಲ್ಲಿ ಈ ತ್ಯಾಜ್ಯ ಗುಣಮಟ್ಟದ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಈ ಗೊಬ್ಬರವನ್ನು ವಾರ್ಡ್‌ನ ಸಾರ್ವಜನಿಕ ಉದ್ಯಾನಗಳು, ಮರಗಿಡಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಪ್ರಮುಖ ಹಬ್ಬ ಹರಿದಿನಗಳಲ್ಲಿ ವಾರ್ಡ್‌ನ ಜನರಿಗೆ ಎರೆಹುಳು ಗೊಬ್ಬರ ಜೊತೆಗೆ ಉಚಿತವಾಗಿ ಸಸಿಗಳನ್ನು ನೀಡಿ ಪರಿಸರ ಜಾಗೃತಿ ಮೂಡಿಸಲಾಗುತ್ತದೆ ಎನ್ನುತ್ತಾರೆ ಜಗನ್ನಾಥ ರೆಡ್ಡಿ.
ನಿರುಪಯುಕ್ತ ವಸ್ತುಗಳ ಬಳಕೆ:
ಹಸಿಕಸ, ಒಣಕಸವನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ಎರೆಹುಳುಗೊಬ್ಬರ ತಯಾರಿಕೆ ಕುರಿತು ಬೆಂಗಳೂರಿನಲ್ಲಿ ಈ ಹಿಂದೆ ತರಬೇತಿ ನೀಡಲಾಗಿತ್ತು. ಆ ಮಾಹಿತಿಯನ್ನಾಧರಿಸಿಯೇ ಗೊಬ್ಬರ ತಯಾರಿಕೆಗೆ ಮುಂದಾದೆ. ಇದಕ್ಕೆ ಪಾಲಿಕೆ ಅಧಿಕಾರಿಗಳು, ವಾರ್ಡ್ ಸದಸ್ಯ ಇಬ್ರಾಹಿಂಬಾಬು, ಪೌರ ಕಾರ್ಮಿಕರ ಸಹಕಾರ ದೊರೆತಿದ್ದರಿಂದ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾದ ನಿರುಪಯುಕ್ತ ವಸ್ತುಗಳನ್ನು ತಂದು ಎರೆಹುಳು ಗೊಬ್ಬರ ತಯಾರಿಕೆಗೆ ಬಳಸಿಕೊಳ್ಳುತ್ತೇನೆ ಎಂದು ಜಗನ್ನಾಥ ರೆಡ್ಡಿ ಕನ್ನಡಪ್ರಭಕ್ಕೆ ತಿಳಿಸಿದರು.
ರೆಡ್ಡಿಯ ಕೈಂಕರ್ಯದಿಂದಾಗಿ ವಾರ್ಡ್‌ನಲ್ಲಿ ನೂರಾರು ಮರಗಳು ಹಸಿರಾಗಿ ಬೆಳೆದು ನಿಂತಿವೆ. ಪರಿಸರದಲ್ಲಿ ಹೊಸ ಚೈತನ್ಯ ಮೂಡಿಸಿದೆ. ವಾರ್ಡ್‌ನಲ್ಲಿ ಹಸರೀಕರಣಕ್ಕಾಗಿ ಪಾಲಿಕೆ ಸದಸ್ಯ ಇಬ್ರಾಹಿಂಬಾಬು ಸಾವಿರಾರು ಗಿಡಗಳನ್ನು ವಿತರಣೆ ಮಾಡಿದ್ದು, ಅವುಗಳ ಬೆಳವಣಿಗೆಯಲ್ಲಿ ಈ ಎರೆಹುಳು ಗೊಬ್ಬರವೂ ಪ್ರಮುಖ ಪಾತ್ರವಹಿಸಿದೆ.ನಗರ ಸ್ವಚ್ಛತೆ ಎಂಬ ಕರ್ತವ್ಯವನ್ನು ಕೇವಲ ಕೆಲಸವೆಂದು ಪರಿಗಣಿಸದೆ, ಪರಿಸರ ಉಳಿವಿನ ಸೇವೆಯಾಗಿ ರೂಪಿಸಿರುವ ಜಗನ್ನಾಥ ರೆಡ್ಡಿ ಕಾರ್ಯ ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸುವ ಅವರ ಪ್ರಯತ್ನ ಇತರ ವಾರ್ಡ್‌ಗಳಿಗೂ ಪ್ರೇರಣೆಯಾಗಿದೆ. ಸರ್ಕಾರ, ಸ್ಥಳೀಯ ಸಂಸ್ಥೆಗಳು ಇಂತಹ ಮಾದರಿ ಕಾರ್ಯಗಳನ್ನು ಪ್ರೋತ್ಸಾಹಿಸಿದರೆ ನಗರಗಳ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿದೆ.
ಪಾಲಿಕೆಯ ಮೇಲ್ವಿಚಾರಕ ಜಗನ್ನಾಥ ರೆಡ್ಡಿಯ ಕೆಲಸ ಶ್ಲಾಘನೀಯ. ನಮ್ಮ ವಾರ್ಡ್‌ನಲ್ಲಿ ನೀಡಿರುವ ಸಾವಿರಾರು ಸಸಿಗಳಿಗೆ ಉತ್ಕೃಷ್ಟ ಗೊಬ್ಬರ ನೀಡುವ ರೆಡ್ಡಿಯ ಕೆಲಸ ಮಾದರಿಯಾಗಿದೆ ಎನ್ನುತ್ತಾರೆ ಪಾಲಿಕೆ ಸದಸ್ಯ ಇಬ್ರಾಹಿಂಬಾಬು.