ಯುವ ಸಂಸತ್‌ನಲ್ಲಿ ಪ್ರತಿಧ್ವನಿಸಿದ ಗೃಹಲಕ್ಷ್ಮೀ ದೋಷಗಳು!

| Published : Nov 17 2023, 06:45 PM IST

ಯುವ ಸಂಸತ್‌ನಲ್ಲಿ ಪ್ರತಿಧ್ವನಿಸಿದ ಗೃಹಲಕ್ಷ್ಮೀ ದೋಷಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ಸದಸ್ಯರು ಗೃಹಲಕ್ಷ್ಮಿ ಯೋಜನೆಯಡಿ ಇನ್ನೂ ಹಲವಾರು ಮಹಿಳಾ ಫಲಾನುಭವಿಗಳ ಖಾತೆಗೆ ಗ್ಯಾರಂಟಿ ಹಣ ಮಂಜೂರಾಗಿಲ್ಲ. ತಮ್ಮದು ಕೇವಲ ಹುಸಿ ಭರವಸೆ ನೀಡುವ ಸರ್ಕಾರ ಎಂದು ಮೂದಲಿಸಿದರು. ಕಾವೇರಿ ನದಿ ನೀರನ್ನು ಹೊರರಾಜ್ಯಕ್ಕೆ ಹರಿಸುವ ಸಂಬಂಧ ಮುಖ್ಯಮಂತ್ರಿ ಅವರು ಸ್ವತಃ ತಾವೇ ನಿರ್ಧಾರ ಕೈಗೊಂಡಿದ್ದರಿಂದ ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿಯಲ್ಲಿಯ ಲೋಪಗಳು ಹಾಗೂ ಕಾವೇರಿ ವಿವಾದಗಳು ತೀವ್ರ ಚರ್ಚೆಗೆ ಬಂದವು.

ಸಭೆ ಆರಂಭದಲ್ಲೇ ರಾಜಕಾರಣಿ ಸುಭದ್ರಮ್ಮ ಅವರಿಗೆ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಸಂತಾಪ ಸೂಚಿಸಿದರು. ಬಳಿಕ ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ಸದಸ್ಯರು ಗೃಹಲಕ್ಷ್ಮಿ ಯೋಜನೆಯಡಿ ಇನ್ನೂ ಹಲವಾರು ಮಹಿಳಾ ಫಲಾನುಭವಿಗಳ ಖಾತೆಗೆ ಗ್ಯಾರಂಟಿ ಹಣ ಮಂಜೂರಾಗಿಲ್ಲ. ತಮ್ಮದು ಕೇವಲ ಹುಸಿ ಭರವಸೆ ನೀಡುವ ಸರ್ಕಾರ ಎಂದು ಮೂದಲಿಸಿದರು.

ಕಾವೇರಿ ನದಿ ನೀರನ್ನು ಹೊರರಾಜ್ಯಕ್ಕೆ ಹರಿಸುವ ಸಂಬಂಧ ಮುಖ್ಯಮಂತ್ರಿ ಅವರು ಸ್ವತಃ ತಾವೇ ನಿರ್ಧಾರ ಕೈಗೊಂಡಿದ್ದರಿಂದ ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ದೂರಿದರು.

ಸುಭಾಷ್‍ನಗರ ಸರ್ಕಾರಿ ಪ್ರೌಢಶಾಲೆಯ ಭೂಮಿಕಾ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿ, ನಮ್ಮದು ಮೌಲ್ಯಾಧಾರಿತ ರಾಜಕಾರಣ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಹಂತ ಹಂತವಾಗಿ ಎಲ್ಲ ಅರ್ಹ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗಲಿದೆ ಎಂದು ಆಡಳಿತ ಪಕ್ಷವನ್ನು ಸಮರ್ಥಿಸಿಕೊಂಡರು.

ಶಿಕ್ಷಕರ ಕೊರತೆ ನೀಗಿಸಿ:

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 55 ಸಾವಿರ ಶಿಕ್ಷಕರ ಕೊರತೆ ಇದೆ. ಇದಕ್ಕೆ ಸರ್ಕಾರದ ಕ್ರಮ ಏನು? ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ತೆಗೆದುಕೊಂಡ ಕ್ರಮ ಏನೂ? ಎಸ್ಸೆಸ್ಸೆಲ್ಸಿಯಲ್ಲಿ ಮೂರು ಪ್ರಯತ್ನದ ಪರೀಕ್ಷೆ ಅಗತ್ಯವಿತ್ತೇ, ಜಿಪಿಟಿ ಶಿಕ್ಷಕರಿಗೆ ಜವಾಬ್ದಾರಿ ನೀಡುತ್ತಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಕ್ರಮ ಏನು ಎಂದು ಓರ್ವರು ವಿರೋಧ ಪ್ರಶ್ನಿಸಿದರು.

8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುತ್ತಿಲ್ಲ. ಕೇವಲ ಭರವಸೆ ನೀಡಿದರೆ ಸಾಲದು, ಅದನ್ನು ಜಾರಿಗೊಳಿಸಬೇಕು ಎಂದು ವಿಪಕ್ಷದ ನಾಯಕಿ ಎಸ್.ಶೃತಿ ಒತ್ತಾಯಿಸಿದರು.

ಶಿಕ್ಷಣ ಸಚಿವೆಯಾಗಿದ್ದ ಹಳೇ ಸೊರಬ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ನಿದಾ ನಾಜ್ ಮಾತನಾಡಿ, ಹಂತ ಹಂತವಾಗಿ ಶಾಲಾ ಶಿಕ್ಷಕರನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇಲ್ಲ. ಕೆಲವು ಕಡೆ ಮಾತ್ರ ಸಮಸ್ಯೆಯಿದ್ದು, ಅಲ್ಲಿ ಮಕ್ಕಳು ಶಾಲೆಗೆ ಬರಲು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಿ, ಶಾಲೆಗೆ ದಾಖಲು ಮಾಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಶೂ, ಪುಸ್ತಕ ಹೀಗೆ ಎಲ್ಲ ಉಚಿತವಾಗಿ ನೀಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕೊರೋನಾ ವೇಳೆ ನೀವೇ ಅಧಿಕಾರದಲ್ಲಿ ಇದ್ದೀರಿ, ಆಗ ಸೈಕಲ್ ವಿತರಣೆ ನಿಲ್ಲಿದ್ದೀರಿ. ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಸೈಕಲ್ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಉತ್ತರಿಸಿದರು.

ಕುಡಿಯುವ ನೀರಿನ ಸಮಸ್ಯೆಗೆ ಏನು ಪರಿಹಾರ?:

ವಿಪಕ್ಷದ ಸದಸ್ಯರೋರ್ವರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಕಲುಷಿತ ನೀರು ಸರಬರಾಜಿನಿಂದ ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಸಂಬಂಧಿಸಿದ ಸಚಿವರು, ಕುಡಿಯುವ ನೀರಿಗೆ ಸದ್ಯಕ್ಕೆ ಕೊರತೆ ಇಲ್ಲ. ಮನೆ ಮನೆ ಗಂಗಾ ಯೋಜನೆ ಮೂಲಕ ಪ್ರತಿ ಮನೆಗೆ ನಲ್ಲಿ ಹಾಕಿಸಿ ನೀರು ನೀಡಲಾಗುತ್ತಿದೆ. ಇನ್ನು ಕಲುಷಿತ ನೀರು ಸರಬರಾಜಿಗೆ ಕಾರಣವಾದ ಪೈಪ್‍ಲೈನ್‍ಗಳನ್ನು ಸರಿಪಡಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಊರುಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದರು.

ಬರಗಾಲ ಪ್ರದೇಶದ ರೈತರಿಗೆ ಪರಿಹಾರ ಏನು?:

ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕಿ ರಾಜ್ಯದಲ್ಲಿ ಬರಗಾಲಪೀಡಿತ ಜಿಲ್ಲೆಗಳು ಮತ್ತು ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಕಂದಾಯ ಸಚಿವರು ಉತ್ತರಿಸಿ, 151 ತಾಲೂಕುಗಳನ್ನು ತೀವ್ರ ಬರಗಾಲ ಮತ್ತು 34 ತಾಲೂಕುಗಳನ್ನು ಸಾಧಾರಣ ಒಟ್ಟು 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಇರುವೆಡೆ ಮೋಡ ಬಿತ್ತನೆ ಮಾಡಲಾಗಿದೆ. ಬೆಳೆ ಸಮೀಕ್ಷೆ, ಬೆಳೆವಿಮೆ ಮಾಡಿಸಲಾಗಿದೆ ಎಂದು ಉತ್ತರಿಸಿದರು.

ವಿಪಕ್ಷದ ಸದಸ್ಯ ಕೇವಲ ಗ್ಯಾರಂಟಿ ಯೋಜನೆಗಳ ಮಾತ್ರ ಆದ್ಯತೆ ಕೊಡುತ್ತಿದ್ದೀರಿ, ಈವರೆಗೆ ಅಭಿವೃದ್ಧಿ ಕೆಲಸಗಳೇನೂ ಆಗುತ್ತಿಲ್ಲ. ತಮ್ಮ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲದಿದ್ದರೆ ರಾಜಿನಾಮೆ ನೀಡಿ ಎಂದು ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದರು.

- - - ಬಾಕ್ಸ್‌ ಲೋಕಸಭೆ ಅಧಿವೇಶನ ತದ್ರೂಪು

ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಯುವ ಸಂಸತ್ತು ಸ್ಪರ್ಧೆಯಲ್ಲಿ ಆಡಳಿತ ಪಕ್ಷದ ವಿಷಯ ಮಂಡನೆಗಳು, ವಿಪಕ್ಷದ ಪ್ರಶ್ನೆ ಮತ್ತು ಚರ್ಚೆಗಳು, ಪರ- ವಿರೋಧದ ಅಲೆಗಳು ಒಟ್ಟಾರೆ ಯುವ ಸಂಸತ್ತಿನ ಕಲಾಪಗಳು ಸಂಸತ್ತಿನ ಅಧಿವೇಶನ ನೆನಪಿಸುಂತಿತ್ತು. ಯುವ ಸಂಸದೀಯ ಪಟುಗಳು ಉತ್ತಮವಾಗಿ ತಮ್ಮ ಪಾತ್ರ ನಿರ್ವಹಣೆ ಮಾಡಿದರು.

ಮಾಸೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯಾದ ಕೆ.ಜಿ. ನವ್ಯ ಸಭಾಪತಿಯಾಗಿ ಉತ್ತಮವಾಗಿ ಅಧಿನವೇನದ ಕಲಾಪಗಳನ್ನು ನಡೆಸಿಕೊಟ್ಟರು.

- - -

ಬಾಕ್ಸ್‌-2

ರಾಜ್ಯಮಟ್ಟಕ್ಕೆ ಭೂಮಿಕಾ, ಪ್ರಜ್ವಲ್‌

ಸಾಗರ ತಾಲೂಕಿನ ಸುಭಾಷ್‍ ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ಬಿ.ಜಿ. ಪ್ರಥಮ ಮತ್ತು ಶಿವಮೊಗ್ಗ ತಾಲೂಕು ಪಿಳ್ಳಂಗಿರಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಪ್ರಜ್ವಲ್ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸುಭಾಷ್‍ನಗರ ಸರ್ಕಾರಿ ಪ್ರೌಢಶಾಲೆಯ ಬಿ.ಎಸ್. ಶೃತಿ ತೃತೀಯ, ಹೊಸನಗರ ತಾಲೂಕಿನ ಮಸಗಲ್ಲಿ ಶಾಲೆ ವಿದ್ಯಾರ್ಥಿನಿ ಕೆ.ಸಹನ ನಾಲ್ಕನೇ, ಮಾಸೂರು ಶಾಲೆಯ ಕೆ.ಜಿ.ನವ್ಯ ಐದನೇ ಮತ್ತು ಕೊಮ್ಮನಾಳ್ ಶಾಲೆಯ ಜಿ.ಹರ್ಷಿತಾ ಆರನೇ ಬಹುಮಾನ ಪಡೆದುಕೊಂಡರು.

- - -

ಬಾಕ್ಸ್‌-3

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಶಿವನಗೌಡ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಮಕ್ಕಳಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ, ನಾಯಕತ್ವ ಗುಣ, ಸಾಮಾಜಿಕ ಸಮಸ್ಯೆಗಳ ಅರಿವು ಮೂಡಿಸಿ, ಸದೃಢ ಸಮಾಜ ನಿರ್ಮಿಸಲು ಸಹಕರಿಸುವ ಉದ್ದೇಶದಿಂದ ಯುವ ಸಂಸತ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ತಾಲೂಕುಮಟ್ಟದಲ್ಲಿ ಯುವ ಸಂಸತ್ ಸ್ಪರ್ಧೆಗಳು ನಡೆದಿದ್ದು, ಪ್ರತಿ ತಾಲೂಕಿನಿಂದ 5 ವಿದ್ಯಾರ್ಥಿಗಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಇಂದಿನ ಯುವ ಸಂಸತ್ ಸ್ಪರ್ಧೆಯಲ್ಲಿ 35 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಲ್ಲಿಂದ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವರು ಎಂದು ತಿಳಿಸಿದರು.

ತಾಲೂಕು ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್, ಉಪನ್ಯಾಸಕ ಘನಶ್ಯಾಮ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಗಂಗಾನಾಯ್ಕ, ಸತೀಶ್‍ ದತ್ತ ಭಂಡಾರಿ, ಶಿವಲಿಂಗಪ್ರಸಾದ್ ಇತರರು ಹಾಜರಿದ್ದರು.

- - - -16ಎಸ್‌ಎಂಜಿಕೆಪಿ04:

ಶಿವಮೊಗ್ಗದ ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯನ್ನು ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಶಿವನಗೌಡ ಉದ್ಘಾಟಿಸಿ ಮಾತನಾಡಿದರು. -16ಎಸ್‌ಎಂಜಿಕೆಪಿ04:

ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಯುವ ಸಂಸತ್ ಸ್ಪರ್ಧೆ ನಡೆಯಿತು.