ಸಾರಾಂಶ
-ಗೃಹಲಕ್ಷ್ಮೀ ಯೋಜನೆಯಡಿ ಹೊಲಿಗೆ ಯಂತ್ರ । ಪ್ರಿಡ್ಜ್ ಖರೀದಿ. ಹೈನುಗಾರಿಕೆ, ಬಟ್ಟೆ ವ್ಯಾಪಾರಕ್ಕೆ ಬಂಡವಾಳ । ಮನೆ ಯಜಮಾನಿಗೆ 2000 ಸದ್ಬಳಕೆ
-----ಷಣ್ಮುಕ ಚಿಕ್ಕನಹಳ್ಳಿ
ಕನ್ನಡಪ್ರಭವಾರ್ತೆ ಚಿತ್ರದುರ್ಗರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಚಿತ್ರದುರ್ಗ ಜಿಲ್ಲೆಯ ಹಲವು ಮಹಿಳೆಯರಲ್ಲಿ ಹೊಸ ಬೆಳಕು ಮೂಡಿಸಿದೆ. ಸ್ವಾವಲಂಬಿ ಬದುಕಿಗೆ ವರದಾನವಾಗಿದೆ. ಮಕ್ಕಳ ಶಾಲಾ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ ಖರೀದಿ ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ 2000 ಸದ್ಬಳಕೆಯಾಗುತ್ತಿದೆ. ಸಾಲದೆಂಬಂತೆ ಕೆಲ ಮಹಿಳೆಯರು ಸ್ವಂತ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಹೈನುಗಾರಿಕೆ, ಮನೆಗೆ ಪ್ರಿಡ್ಜ್ ಖರೀದಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಕಲ್ಕೆರೆ ಗ್ರಾಮದ ದ್ರಾಕ್ಷಾಯಿಣಿ ಪ್ರತಿ ತಿಂಗಳು ಬರುತ್ತಿದ್ದ ಗೃಹಲಕ್ಷಿ ಯೋಜನೆಯ 2000 ರು.ಗಳನ್ನು ಕೂಡಿಸಿಟ್ಟುಕೊಂಡು, ಸ್ವಂತಕ್ಕೆ ಹೊಲಿಗೆ ಯಂತ್ರ ಖರೀದಿಸಿ ಆದಾಯದ ಮೂಲ ಹುಡುಕಿಕೊಂಡಿದ್ದಾರೆ. ಅದೇ ರೀತಿ ಬೇಡರ ಶಿವನಕೆರೆ ಗ್ರಾಮ ಸುನೀತಾ, 14 ತಿಂಗಳಿಂದ ಗೃಹಲಕ್ಷ್ಮೀ ಯೋಜನೆಯಡಿ ಮಕ್ಕಳ ಶಾಲೆ ಶುಲ್ಕ ಪಾವತಿಸಿದ್ದಾರೆ. ಜೊತೆಗೆ ಟೈಲರ್ ವೃತ್ತಿಯನ್ನು ಆರಂಭಿಸಿ ದುಡಿಮೆಯ ಮಾರ್ಗ ಕಂಡಕೊಳ್ಳಲು ಯೋಚಿಸಿ ಹೊಸ ಹೊಲಿಗೆ ಯಂತ್ರ ಖರೀದಿ ಮಾಡಿದ್ದಾರೆ.ಚಳ್ಳಕೆರೆ ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮದ ಅಶ್ವಿನಿ ಗೃಹಲಕ್ಷ್ಮೀ ಹಣದಿಂದ ಬಟ್ಟೆ ವ್ಯಾಪಾರ ಆರಂಭಿಸಿದ್ದಾರೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಚಿತ್ರದುರ್ಗ ತಾಲೂಕಿನ ಮೆದಹಳ್ಳಿ ಗ್ರಾಮದ ವಸಂತ ಅವರಿಗೆ ಗೃಹಲಕ್ಷ್ಮೀ ಯೋಜನೆ ಹಣ ಹೈನುಗಾರಿಕೆ ಆರಂಭಿಸಲು ಇಂಬು ನೀಡಿದೆ. ಯೋಜನೆ ಹಣ ಕೂಡಿಟ್ಟು ಹಸು ಖರೀದಿಸಿರುವ ವಸಂತ ಹೈನುಗಾರಿಕೆ ವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಫ್ರಿಡ್ಜ್ ಖರೀದಿಸಿದ ಶಾಂತಿ: ಚಳ್ಳಕೆರೆಯ ಶಾಂತಿನಗರ ನಿವಾಸಿ ಶಾಂತಿಯವರ ಸಂತಸವನ್ನು ಗೃಹಲಕ್ಷ್ಮಿ ಯೋಜನೆ ಇಮ್ಮಡಿಗೊಳಿಸಿದೆ. ಬಹುದಿನಗಳಿಂದ ಮನೆಗೊಂದು ಫ್ರಿಡ್ಸ್ ಖರೀದಿಸುವ ಇಚ್ಚೆ ಹೊಂದಿದ್ದ ಆಕೆಗೆ ಗೃಹಲಕ್ಷ್ಮೀ ನೆರವಾಗಿದೆ. ಎರಡು ಸಾವಿರ ರು. ಕೂಡಿಟ್ಟುಕೊಂಡು ಮನೆಗೆ ಹೊಸ ಫ್ರಿಡ್ಜ್ ಖರೀದಿಸಿದ್ದಾರೆ. ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿಯೇ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾದ ಯೋಜನೆಯಾಗಿದ್ದು, ಈ ಯೋಜನೆಯನ್ನು ಎಲ್ಲ ಅರ್ಹ ಮಹಿಳೆಯರಿಗೆ ತಲುಪಿಸುವಲ್ಲಿ ಯಶ ಕಂಡಿದ್ದೇವೆ ಎನ್ನುತ್ತಾರೆ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಿವಣ್ಣ ಹಾಗೂ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ.ಗೃಹಲಕ್ಷ್ಮಿ ಯೋಜನೆ ಗ್ರಾಮೀಣ ಭಾಗದ ಮಹಿಳೆಯರ ಜೀವನದಲ್ಲಿ ಗುಣಾತ್ಮಕ ಬದಲಾವಣೆ ತರುವುದರೊಂದಿಗೆ, ಎಲ್ಲ ಮಹಿಳೆಯರಿಗೂ ಭರವಸೆ ಹಾಗೂ ಆತ್ಮವಿಶ್ವಾಸ ಮೂಡಿಸಿದೆ. ಜೊತೆಗೆ ಮಹಿಳೆಯರ ಸಬಲೀಕರಣ ಹಾಗೂ ಸ್ವಾವಲಂಬಿ ಬದುಕಿಗೆ ಗೃಹಲಕ್ಷ್ಮಿ ಯೋಜನೆ ವರವಾಗಿದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್.
ಜಿಲ್ಲೆಯಲ್ಲಿ ಬಾಕಿ ಉಳಿದ ಪಡಿತರ ಕಾರ್ಡ್ ಹೊಂದಿರುವವರ ಪೈಕಿ ಅರ್ಹರನ್ನು ಗುರುತಿಸಿ ಯೋಜನೆಯಡಿ ನೋಂದಣಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಯೋಜನೆಯಡಿ ನೋಂದಣಿಯಾಗದವರ ವಿವರಗಳನ್ನು ತಾಲೂಕು ಹಾಗೂ ಗ್ರಾಮವಾರು ಸಿದ್ಧಪಡಿಸಲಾಗಿದೆ. ಈ ಮಾಹಿತಿಯನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮೂಲಕ ಹಾಗೂ ತಾಲೂಕು ಪಂಚಾಯಿತಿ ಇಒ ಹಾಗೂ ಸಿಡಿಪಿಒಗಳ ಸಮಿತಿ ರಚಿಸಿ ಸಂಪೂರ್ಣವಾಗಿ ಶೇ.100 ರಷ್ಟು ಯೋಜನೆಯನ್ನು ಜಿಲ್ಲೆಯ ಮಹಿಳೆಯರಿಗೆ ತಲುಪಿಸುವುದಾಗಿ ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.ರು.963 ಕೋಟಿ ಜಮೆ: ಜಿಲ್ಲೆಯಲ್ಲಿ 4,05,282 ಪಡಿತರ ಚೀಟಿಗಳು ಇದ್ದು, ಇದರಲ್ಲಿ 3,91,639 ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಯಾಗಿರುತ್ತಾರೆ. ಜಿಲ್ಲೆಯ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಸೆಪ್ಟಂಬರ್ ಅಂತ್ಯದ ವರೆಗೂ 963.58 ಕೋಟಿ ರು. ಜಮೆ ಮಾಡಲಾಗಿದೆ. ಇ-ಕೆವೈಸಿ ಹಾಗೂ ಎನ್.ಪಿಸಿಐ ಮ್ಯಾಪಿಂಗ್, ನಿಷ್ಕ್ರಿಯಗೊಂಡ ಬ್ಯಾಂಕ್ ಖಾತೆ ಮುಂತಾದ ಸಮಸ್ಯೆಗಳನ್ನು ಪರಿಹರಿಸಿ, ಅರ್ಹ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಜಮೆ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಂಡಿದೆ.
--------------......ಕೋಟ್.....
ಗೃಹಲಕ್ಷ್ಮಿ ಯೋಜನೆ ಪ್ರತಿಯೊಂದು ಅರ್ಹ ಮಹಿಳೆಯರಿಗೆ ತಲುಪಿಸಬೇಕೆನ್ನುವುದು ಜಿಲ್ಲಾಡಳಿತದ ಆಶಯವಾಗಿದ್ದು, ಅನುಷ್ಠಾನದಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿ, ತ್ವರಿತಗತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕಬೇಕು. ಮಹಿಳೆಯರು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು.- ಟಿ. ವೆಂಕಟೇಶ್, ಜಿಲ್ಲಾಧಿಕಾರಿ, ಚಿತ್ರದುರ್ಗ (ಪೋಟೋ ಫೈಲ್ ವೆಂಕಟೇಶ್)
----ಪೋಟೋ: ಗೃಹಲಕ್ಷ್ಮೀ ಯೋಜನೆಯಡಿ ಹೊಲಿಗೆ ಯಂತ್ರ ಖರೀದಿಸಿರುವ ಚಿತ್ರದುರ್ಗ ತಾಲೂಕಿನ ಕಲ್ಕೆರೆ ಗ್ರಾಮದ ದ್ರಾಕ್ಷಾಯಿಣಿ
---------ಪೋಟೋ: 28 ಸಿಟಿಡಿ2
--ಚಳ್ಳಕೆರೆಯ ಶಾಂತಿನಗರ ನಿವಾಸಿ ಶಾಂತಿ ಪ್ರಿಡ್ಜ್ ಖರೀದಿಸಿರುವುದು.
-------ಫೋಟೋ: 28 ಸಿಟಿಡಿ3