ಕೊಣನೂರು-ಮಾಕುಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ

| Published : Jan 11 2025, 12:46 AM IST

ಕೊಣನೂರು-ಮಾಕುಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ವಿಭಾಗ ವ್ಯಾಪ್ತಿಯ ಕೇಂದ್ರ ರಸ್ತೆನಿಧಿ ಮೂಲ ಸೌಕರ್ಯ ಯೋಜನೆಯಡಿ ವಿರಾಜಪೇಟೆ ತಾಲೂಕಿನ ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿ 91 ರಡಿ 6 ಕೋಟಿ ರು. ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಕೊಡಗು ಜಿಲ್ಲೆಯಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ ಮೇಲೆ ಕ್ರಮ ವಹಿಸಲಾಗಿದೆ. ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ವಿಭಾಗ ವ್ಯಾಪ್ತಿಯ ಕೇಂದ್ರ ರಸ್ತೆನಿಧಿ ಮೂಲ ಸೌಕರ್ಯ ಯೋಜನೆಯಡಿ ವಿರಾಜಪೇಟೆ ತಾಲೂಕಿನ ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿ 91 ರಡಿ 6 ಕೋಟಿ ರು. ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಸುಮಾರು 60 ಕೋಟಿ ರು. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ 163 ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಸುಮಾರು 705 ಕೋಟಿ ರು. ಹಾಗೂ ಉತ್ತರ ವಲಯದಲ್ಲಿ 132 ಕಾಮಗಾರಿ ಕೈಗೊಳ್ಳಲಾಗಿದ್ದು, ಸುಮಾರು 680 ಕೋಟಿ ರು. ಮಂಜೂರಾತಿ ನೀಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ 295 ಕಾಮಗಾರಿಯ 1991 ಕಿ.ಮೀ ಉದ್ದದ ಸುಮಾರು 1385 ಕೋಟಿ ರು. ವೆಚ್ವದ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಅಂತಾರಾಜ್ಯ ಹೆದ್ದಾರಿ ಸಂಬಂಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು, ಈ ಹಿನ್ನೆಲೆ ರಸ್ತೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.

ನಂತರ ಸಚಿವರು ಮತ್ತು ಶಾಸಕರು ಮಾಕುಟ್ಟಗೆ ತೆರಳಿ ಅಂತಾರಾಜ್ಯ ಗಡಿ ರಸ್ತೆ ವೀಕ್ಷಿಸಿದರು. ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮತ್ತಿತರರು ಇದ್ದರು.