ದೀಪಾವಳಿ ಬಳಿಕ ರೇಡಿಯೋಪಾರ್ಕ್ ರೈಲ್ವೆ ಮೇಲ್ಸೇತುವೆಗೆ ಭೂಮಿಪೂಜೆ; ಸಂಸದ ಈ.ತುಕಾರಾಂ

| Published : Oct 14 2025, 01:01 AM IST

ದೀಪಾವಳಿ ಬಳಿಕ ರೇಡಿಯೋಪಾರ್ಕ್ ರೈಲ್ವೆ ಮೇಲ್ಸೇತುವೆಗೆ ಭೂಮಿಪೂಜೆ; ಸಂಸದ ಈ.ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಕೇವಲ 4-5 ಕಿ.ಮೀ. ಉದ್ದ ಬಾಕಿ ಇದ್ದು, ತ್ವರಿತವಾಗಿ ಪೂರ್ಣಗೊಳಿಸಬೇಕು.

ಬಳ್ಳಾರಿ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನಗರದ ರೇಡಿಯೋ ಪಾರ್ಕ್ ನ 2ನೇ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪುನಾರಂಭಕ್ಕೆ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ದೀಪಾವಳಿ ಹಬ್ಬದ ನಂತರ ಭೂಮಿಪೂಜೆ ನೆರವೇರಿಸುವರು.ಇದಕ್ಕೆ ಅರಣ್ಯ ಇಲಾಖೆಯ ಜಾಗಕ್ಕೆ ಸಂಬಂಧಿಸಿದಂತೆ ಹಣ ಪಾವತಿಸಿದರೆ ಕಾಮಗಾರಿ ಆರಂಭವಾಗಲಿದೆ. ಈ ಕುರಿತು ರೈಲ್ವೆ ಕೇಂದ್ರ ಕಚೇರಿಯ ಗಮನಕ್ಕೆ ತರಬೇಕು. ಇದಕ್ಕೆ ಬೇಕಾದ ಅಗತ್ಯ ಅನುದಾನ ಕೂಡ ಒದಗಿಸಲಾಗುವುದು. ಹಾಗಾಗಿ ಪರಿಷ್ಕೃತ ರೈಲ್ವೆ ಅಲೈನ್ಮೆಂಟ್ ಯೋಜನಾ ವರದಿ ಸಲ್ಲಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಸಂಸದ ಈ.ತುಕಾರಾಂ ಸೂಚಿಸಿದರು.

ನಗರದ ಜಿಪಂ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ದಿಶಾ ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದೊಳಗೆ ಭಾರೀ ಗಾತ್ರದ ವಾಹನಗಳು ಸಂಚಾರಕ್ಕೆ ಕಡಿವಾಣ ಹಾಕಲು ಈಗಾಗಲೇ ಪ್ರಗತಿಯಲ್ಲಿರುವ ರಿಂಗ್ ರೋಡ್ ಕಾಮಗಾರಿಯು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಬಳ್ಳಾರಿ- ಹೊಸಪೇಟೆಗೆ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ಕೇವಲ 4-5 ಕಿ.ಮೀ. ಉದ್ದ ಬಾಕಿ ಇದ್ದು, ತ್ವರಿತವಾಗಿ ಪೂರ್ಣಗೊಳಿಸಬೇಕು. ಸಿರುಗುಪ್ಪಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿಗೆ ಸಹ ವೇಗ ನೀಡಬೇಕು. ನಗರ ಹೊರವಲಯದ ಬಿಐಟಿಎಂ ಎಂಜಿನಿಯರಿಂಗ್ ಕಾಲೇಜು ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿಯಿಂದ ಸುಧಾಕ್ರಾಸ್ ವರೆಗೆ ಕೈಗೊಳ್ಳಲು ಉದ್ದೇಶಿಸಲಾಗಿರುವ 4 ಲೈನ್ ರಸ್ತೆಗೆ ಸೂಕ್ತ ಸರ್ವೇ ನಡೆಸಿ ನಡೆಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಹಾಜರಿದ್ದ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಹತ್ತಿರದ ಶಾಲೆಯ ಖಾಲಿ ಇರುವ ಕೊಠಡಿಗಳಿಗೆ ಸ್ಥಳಾಂತರಿಸಬೇಕು. ಜಿಲ್ಲೆಯ ಬಹುತೇಕ ಶಾಲೆಗಳ ಶೌಚಾಲಯಗಳು ನಿರ್ವಹಣೆಯಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿನಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಗಮನ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.

ಸಂಡೂರು ಶಾಸಕಿ ಈ.ಅನ್ನಪೂರ್ಣ ಮಾತನಾಡಿ, ಸಂಡೂರು ಭಾಗದಲ್ಲಿ ಒಬ್ಬ ರೈತ ಒಂದು ಬೆಳೆ ಬೆಳೆದರೆ, ಉಳಿದ ರೈತರೆಲ್ಲರೂ ಅದೇ ಬೆಳೆ ಬೆಳೆಯಲು ಮುಂದಾಗುತ್ತಿದಾರೆ. ಇದರಿಂದ ಅಸಮತೋಲನವಾಗುತ್ತಿದ್ದು, ಬಹುವಾರು ಬೆಳೆ ಬೆಳೆಯಲು ರೈತರಿಗೆ ಅರಿವು ಮೂಡಿಸಬೇಕು. ಅದೇರೀತಿಯಾಗಿ ಯೂರಿಯಾ ಗೊಬ್ಬರ ಬಳಕೆಯಿಂದಾಗುವ ಪರಿಣಾಮ ಕುರಿತು ರೈತರಲ್ಲಿ ಮನವರಿಕೆ ಮಾಡಿಕೊಡಬೇಕು. ಸಂಡೂರು ಭಾಗದಲ್ಲಿ ಹೆಚ್ಚಾಗಿ ವಿವಿಧ ಬಗೆಯ ಕ್ಯಾನ್ಸರ್ ಪ್ರಕರಣ ಕಂಡುಬರುತ್ತಿವೆ. ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಗಮನಕ್ಕೆ ತಂದರು.

ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕತ್ತೆ ಕಾಯ್ತಾ ಇದ್ದೀಯಾ? ಜಾಲಿ ಹೊಡ್ಕೊಂಡು ತಿರುಗ್ತಿಯಾ?

ದಿಶಾ ಸಮಿತಿ ಸಭೆಯಲ್ಲಿ ಸಂಸದ ಈ.ತುಕಾರಾಂ ಅಧಿಕಾರಿಗಳನ್ನು ಏಕವಚನದಲ್ಲಿ ಸಂಬೋಧಿಸಿದರಲ್ಲದೆ, ಕೆಲ ಅಧಿಕಾರಿಗಳನ್ನು ನೀನು ಹುಷಾರಾಗಿರು, ರಾಜಕೀಯ ಮಾಡಬೇಡ. ನನ್ನ ಹತ್ರ ನಡೆಯಲ್ಲ ಎಂದು ಎಚ್ಚರಿಸಿದರು.

ಯೋಜನಾ ನಿರ್ದೇಶಕ ರೆಹಮಾನ್ ಖಾನ್ ಅವರನ್ನು ಕತ್ತೆ ಕಾಯುತ್ತಿದ್ದೀಯಾ.... ಜಾಲಿಹೊಡ್ಕೊಂಡು ತಿರುಗಾಡ್ತೀಯಾ ಎಂದು ಕೇಳಿದರಲ್ಲದೆ, ಇವನಿಗೆ ಮೆಮೋ ಕೊಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಕೆಲವು ಅಧಿಕಾರಿಗಳಿಗೆ ಮಾತ್ರ ನೀವು ಚೆನ್ನಾಗಿ ಕೆಲಸ ಮಾಡ್ತೀರಿ...ನೀನ್ ನಮ್ ಹುಡುಗ ಎಂದು ಹೇಳಿ ನಗೆ ಬೀರಿದರು. ಸಂಸದರ ಏಕವಚನ ಸಂಬೋಧನೆಯ ನಡೆ ಸಭೆಯಲ್ಲಿದ್ದ ಜಿಲ್ಲಾಧಿಕಾರಿ ಹಾಗೂ ಜಿಪಂಸಿಇಒ ಅವರಿಗೆ ಮುಜುಗರಕ್ಕೆಡೆ ಮಾಡಿತು.