ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಉದ್ಯಮವನ್ನು ಬೆಳೆಸುವುದೆಂದರೆ ಉದ್ಯಾನವನವನ್ನು ಬೆಳೆಸಿದಂತೆ. ತಾಳ್ಮೆ, ಪ್ರೀತಿ, ಶಿಸ್ತು, ಕಾಳಜಿ, ನಂಬಿಕೆ ಇರಬೇಕು ಎಂದು ಕೈಗಾರಿಕೋದ್ಯಮಿ ಎಚ್. ಜಿ. ಚಂದ್ರಶೇಖರ್ ಹೇಳಿದರು.ತುಮಕೂರು ವಿವಿ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ವಿಭಾಗವು ಆಯೋಜಿಸಿದ್ದ ‘ಉದ್ಯಮಶೀಲತೆ ಅಭಿವೃದ್ಧಿ’ ಕುರಿತು ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ‘ವಾಣಿಜ್ಯೋದ್ಯಮದ ಸಾಧಕ ಹಾಗೂ ಬಾಧಕ’ ಕುರಿತು ವಿಶೇಷ ಉಪನ್ಯಾಸ ನೀಡಿದರು.ಉದ್ಯಮಿಯಾದವನಿಗೆ ಸ್ಪರ್ಧಾಮನೋಭಾವವಿರಬೇಕು. ವಾಣಿಜೋದ್ಯಮ ಸಮುದ್ರವಿದ್ದಂತೆ. ಅಪಾರ ಬುದ್ಧಿಶಕ್ತಿಯೊಂದಿಗೆ ಈಜಬೇಕು. ಉದ್ಯಮವನ್ನು ವಿಸ್ತರಿಸಲು ಸಂಪರ್ಕಗಳು ಅವಶ್ಯಕ. ಜನರ ಬಳಕೆ, ಬಯಕೆಗನುಗುಣವಾಗಿ ಮಾರುಕಟ್ಟೆಯ ನಾಡಿಮಿಡಿತವನ್ನು ಅರಿತಿರಬೇಕು ಎಂದರು.ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಬದ್ಧತೆ ಮತ್ತು ಉತ್ಸಾಹವಿಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರಗತಿಯತ್ತ ಮುನ್ನಡೆಯಬೇಕಾದರೆ ಪರಿಶ್ರಮ ಅಗತ್ಯ. ಈ ದಿನಗಳಲ್ಲಿ ಉದ್ಯೋಗ ಪಡೆಯುವುದು ಸವಾಲಾಗಿದೆ. ವಿದ್ಯಾರ್ಥಿಗಳು ಕೌಶಲ್ಯದ ಬದಲು ಉದ್ಯೋಗಗಳತ್ತ ಮಾತ್ರ ಗಮನಹರಿಸುತ್ತಾರೆ. ಬುದ್ಧಿಯನ್ನು ಮಾರಾಟ ಮಾಡದೆ, ಆಲೋಚನೆಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷೆ ಪ್ರೊ.ನೂರ್‌ಅಫ್ಜಾ, ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ. ಮೋಹನ್‌ರಾಮ್ ಉಪಸ್ಥಿತರಿದ್ದರು.