ಜಿಎಸ್‌ಟಿ ಸುಧಾರಣೆಯಿಂದ ವಿಕಸಿತ ಭಾರತಕ್ಕೆ ಶಕ್ತಿ: ಜೋಶಿ

| Published : Sep 29 2025, 01:05 AM IST

ಜಿಎಸ್‌ಟಿ ಸುಧಾರಣೆಯಿಂದ ವಿಕಸಿತ ಭಾರತಕ್ಕೆ ಶಕ್ತಿ: ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ತೆರಿಗೆ ಇಳಿಕೆಯಿಂದ ವಾರ್ಷಿಕ ₹2.75 ಲಕ್ಷ ಕೋಟಿ ಸರ್ಕಾರಕ್ಕೆ ಆದಾಯ ಕಡಿಮೆಯಾಗಲಿದೆ. ಕೈಗೆಟಕುವ ತೆರಿಗೆಯಿಂದ ಬರುವ ಲಾಭವನ್ನು ಬಡವರಿಗೆ ಹಂಚಿಕೆ ಮಾಡಲು ಕೇಂದ್ರ ಬಯಸಿದ್ದು, ಶೇ. 5 ಹಾಗೂ ಶೇ. 18ರಂತೆ ಸ್ಲ್ಯಾಬ್ ಜಿಎಸ್‌ಟಿ ನಿಗದಿ ಪಡಿಸಲಾಗಿದೆ. ಈ ವಿನಾಯಿತಿಯಿಂದ ಜನರ ಕೈಯಲ್ಲಿ ₹1ರಿಂದ ₹1.5 ಲಕ್ಷ ಕೋಟಿ ಉಳಿತಾಯವಾಗಲಿದೆ.

ಹುಬ್ಬಳ್ಳಿ: ಜಿಎಸ್‌ಟಿ ಸುಧಾರಣೆ ವಿಕಸಿತ ಭಾರತಕ್ಕೆ ಶಕ್ತಿ ನೀಡಲಿದೆ. ಯುಪಿಎ ಸರ್ಕಾರದ ಕಾಲಕ್ಕೆ ಹೋಲಿಸಿದರೆ ಕೊರೋನಾ, ಎರಡು ಯುದ್ಧಗಳು, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಡುವೆಯೂ ದೇಶದ ಆರ್ಥಿಕತೆ ಸುಧಾರಿಸಿದೆ. ವಿಶ್ವದ 4ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. 2047ರ ವೇಳೆಗೆ ದೇಶದ ಆರ್ಥಿಕತೆ 30 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸುವ ಸಂಕಲ್ಪ ನಮ್ಮದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಬಿಜೆಪಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಜಿಎಸ್‌ಟಿಯಲ್ಲಿ ವಿನಾಯಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಧಾನ ಸೇವಕ ಮೋದಿಜಿಗೊಂದು ಧನ್ಯವಾದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತೆರಿಗೆ ಇಳಿಕೆಯಿಂದ ವಾರ್ಷಿಕ ₹2.75 ಲಕ್ಷ ಕೋಟಿ ಸರ್ಕಾರಕ್ಕೆ ಆದಾಯ ಕಡಿಮೆಯಾಗಲಿದೆ. ಕೈಗೆಟಕುವ ತೆರಿಗೆಯಿಂದ ಬರುವ ಲಾಭವನ್ನು ಬಡವರಿಗೆ ಹಂಚಿಕೆ ಮಾಡಲು ಕೇಂದ್ರ ಬಯಸಿದ್ದು, ಶೇ. 5 ಹಾಗೂ ಶೇ. 18ರಂತೆ ಸ್ಲ್ಯಾಬ್ ಜಿಎಸ್‌ಟಿ ನಿಗದಿ ಪಡಿಸಲಾಗಿದೆ. ಈ ವಿನಾಯಿತಿಯಿಂದ ಜನರ ಕೈಯಲ್ಲಿ ₹1ರಿಂದ ₹1.5 ಲಕ್ಷ ಕೋಟಿ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಸರಕು ಮತ್ತು ಸೇವಾ ತೆರಿಗೆ ಇಳಿಕೆಯಿಂದ ಆರ್ಥಿಕ ವ್ಯವಹಾರ ವೃದ್ಧಿಸುತ್ತದೆ. ಇದರಿಂದ ದೇಶದ ಜಿಡಿಪಿ ಹೆಚ್ಚಲಿದೆ ಎಂಬ ವಿಶ್ವಾಸವಿದೆ. ಜಿಎಸ್‌ಟಿ ಇಳಿಕೆಯಿಂದ ಜನರು ಖರ್ಚು ಜಾಸ್ತಿ ಮಾಡುತ್ತಾರೆ. ಇದರಿಂದ ಉತ್ಪಾದಕತೆ ಹೆಚ್ಚಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಬದಲಾವಣೆಯಿಂದ ಜಿಡಿಪಿಯಲ್ಲಿ ಶೇ. 0.3ರಿಂದ 0.6ರಷ್ಟು ವೃದ್ಧಿಯಾಗಲಿದೆ ಎಂದು ಎಸ್ ಆ್ಯಂಡ್ ಪಿ ರೇಟಿಂಗ್ ಏಜೆನ್ಸಿ ಅಂದಾಜಿಸಿದೆ ಎಂದರು.

ಜಿಎಸ್‌ಟಿ ವಿನಾಯಿತಿ ಲಾಭವನ್ನು ವ್ಯಾಪಾರಸ್ಥರು ಗ್ರಾಹಕರಿಗೆ ವರ್ಗಾಯಿಸುವ ಕುರಿತಂತೆ ನಿಗಾ ವಹಿಸಲಾಗುತ್ತಿದ್ದು, ತಪ್ಪಿದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಈ ಹಿಂದೆ ಜಿಎಸ್‌ಟಿ ಜಾರಿ ಮಾಡಿದಾಗ ವಿರೋಧ ವ್ಯಕ್ತವಾಗಿತ್ತು. ಅದನ್ನು ತೆಗೆದು ಹಾಕುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್‌ಟಿ ದರದಲ್ಲಿ ಇಳಿಕೆ ಮಾಡಿ ಜನರಿಗೆ ಅನುಕೂಲ ಮಾಡಿದ್ದಾರೆ. ಇದರಿಂದ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಒಳ್ಳೆಯದಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಮಾತನಾಡಿ, ಸುಮಾರು 28 ಸರಕುಗಳ ಮೇಲಿನ ಜಿಎಸ್‌ಟಿ ದರದಲ್ಲಿ ಇಳಿಕೆಯಾಗಿದೆ. ಇದನ್ನು ಈ ಹಿಂದೆಯೇ ಮಾಡಬೇಕಿತ್ತು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಅವರು ಮಾಡಿದ ಆರ್ಥಿಕ ಹೊರೆಯನ್ನು ಪ್ರಧಾನಿ ಮೋದಿ ಇಳಿಸಿದ್ದಾರೆ ಎಂದು ಹೇಳಿದರು.

ವಿವಿಧ ವಲಯದ ವರ್ತಕರು ಜಿಎಸ್‌ಟಿ ಇಳಿಕೆಯಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಇದೇ ವೇಳೆ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲಾಯಿತು. ಈ ವೇಳೆ ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚೌಹಾಣ್, ತಿಪ್ಪಣ್ಣ ಮಜ್ಜಗಿ, ಡಾ. ಕ್ರಾಂತಿಕಿರಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.