ಜಿ.ಎಸ್‌.ಟಿ ಸುಧಾರಣೆಯಿಂದ ದೇಶದ ಆರ್ಥಿಕತೆ ದುಪ್ಪಟ್ಟು

| Published : Sep 09 2025, 01:00 AM IST

ಜಿ.ಎಸ್‌.ಟಿ ಸುಧಾರಣೆಯಿಂದ ದೇಶದ ಆರ್ಥಿಕತೆ ದುಪ್ಪಟ್ಟು
Share this Article
  • FB
  • TW
  • Linkdin
  • Email

ಸಾರಾಂಶ

ಸೆ. 3 ರಂದು ನವದೆಹಲಿಯಲ್ಲಿ ನಡೆದ ಜಿ.ಎಸ್‌.ಟಿ ಕೌನ್ಸಿಲ್‌ ನ 56ನೇ ಸಭೆ

ಕನ್ನಡಪ್ರಭ ವಾರ್ತೆ ಮೈಸೂರು

ಜಿ.ಎಸ್‌.ಟಿ ಸುಧಾರಣೆಯಿಂದ ದೇಶದ ಆರ್ಥಿಕತೆಗೆ ದುಪ್ಪಟ್ಟು ವೇಗ ದೊರಕಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌. ಮಹೇಶ್‌ ಅಭಿಪ್ರಾಯಪಟ್ಟರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರಲ್ಲಿ ಜಾರಿಗೊಳಿಸಿದ ಜಿ.ಎಸ್‌.ಟಿಯನ್ನು 8 ವರ್ಷಗಳ ಬಳಿಕ ಸರಳೀಕರಣಗೊಳಿಸಿದ್ದಾರೆ. ನಾಲ್ಕು ಶ್ರೇಣಿಯ ತೆರಿಗೆಯನ್ನು ಮೂರು ಶ್ರೇಣಿಗೆ ಇಳಿಸಿ ಸಾಮಾನ್ಯ ಜನರಿಗೆ ಹೊರೆಯಾಗದಂತೆ ಜಿಎಸ್‌.ಟಿ 2.0 ಸುಧಾರಣೆಗೊಳಿಸಿದ್ದಾರೆ ಎಂದು ತಿಳಿಸಿದರು.

ಸೆ. 3 ರಂದು ನವದೆಹಲಿಯಲ್ಲಿ ನಡೆದ ಜಿ.ಎಸ್‌.ಟಿ ಕೌನ್ಸಿಲ್‌ ನ 56ನೇ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಈ ಕ್ರಮ ಜನರ ಮೇಲಿನ ಹೊರೆ ಕಡಿಮೆಗೊಳಿಸಿ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಸೆ. 22 ರಿಂದ ಇದು ಜಾರಿಯಾಗಲಿದೆ.

ಸರ್ಕಾರ ನಡೆಸಲು ಹಣ ಕೊಡುತ್ತಿರುವವರೇ ಪ್ರಜೆಗಳು. ಹೀಗಾಗಿ ಪ್ರಜೆಗಳು ಕೊಡುವ ಅಧಿಕಾರ ಹಾಗೂ ಹಣ ದೇಶದ ಅಭಿವೃದ್ಧಿಗೆ, ಪ್ರಜೆಗಳ ರಕ್ಷಣೆಗೆ ಸಮರ್ಪಪಕವಾಗಿ ಬಳಕೆಯಾಗಬೇಕು. ಇದರಿಂದ ತೆರಿಗೆ ಸರಳೀಕರಣ ಮಾಡಿದ್ದಾರೆ. ಆರ್ಥಿಕ ಪರಾವಲಂಬನೆಯು ಮನುಷ್ಯನ ಗೌರವ ತೆಗೆಯುತ್ತದೆ. ಕಾಂಗ್ರೆಸ್‌ ಕಳೆದ 70 ವರ್ಷಗಳ ಆಳ್ವಿಕೆ ಪ್ರಜೆಗಳನ್ನು ಪರಾವಲಂಬಿಯನ್ನಾಗಿಸಿದೆ ಎಂದು ಅವರು ಹೇಳಿದರು.

ಪರಾಲಂಬಿ ಪ್ರಜೆಗಳಿಂದ ಪರಾವಲಂಬಿ ದೇಶ ಸೃಷ್ಟಿ ಆಗುತ್ತದೆ. ಪ್ರಜೆಗಳು ಸ್ವಾವಲಂಬಿಯಾದರೆ ದೇಶವೂ ಸ್ವಾವಲಂಬಿ ಆಗುತ್ತದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್ ಸಮಯದಲ್ಲಿ ಆತ್ಮ ನಿರ್ಭರ ಭಾರತಕ್ಕಾಗಿ 20 ಲಕ್ಷ ಕೋಟಿ ರೂ. ಹಣ ವ್ಯಯಿಸಿದ್ದಾರೆ. ಇದರ ಪರಿಣಾಮ ಈಗ ನಮ್ಮ ದೇಶ ಈಡೀ ಜಗತ್ತಿನ ಆರ್ಥಿಕತೆಯಲ್ಲಿ 4ನೇ ಸ್ಥಾನದಲ್ಲಿದೆ. ಇದನ್ನು 2027ಕ್ಕೆ 3ನೇ ಸ್ಥಾನಕ್ಕೆ ಹಾಗೂ 2047ಕ್ಕೆ ಅಂದರೆ ಭಾರತದ 100ನೇ ವರ್ಷದ ಸ್ವಾತಂತ್ರ್ಯದ ಸಮಯಕ್ಕೆ ಮೊದಲ ಸ್ಥಾನಕ್ಕೆ ಬರಬೇಕು. ಇದು ಆತ್ಮ ನಿರ್ಭರ ಭಾರತದ ಕಲ್ಪನೆ ಎಂದು ಅವರು ತಿಳಿಸಿದರು.

ಜಿ.ಎಸ್‌.ಟಿ ಸರಳೀಕರಣದಿಂದಾಗಿ ಪ್ರತಿಯೊಬ್ಬ ಪ್ರಜೆಯು ತನ್ನ ದಿನ ನಿತ್ಯದ ಸರಕನ್ನು ಕೊಳ್ಳುವ ಸಮಯದಲ್ಲಿ ಅವನ ಬಳಿ ಹಣ ಉಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿನ ಸರಕುಗಳು ತೆರಿಗೆ ಮುಕ್ತವಾಗಿ ಸಿಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿಯೂ ಕೂಡ ಬಾರಿ ಬದಲಾವಣೆ ತಂದಿದ್ದು, ಈ ಕ್ಷೇತ್ರದಲ್ಲಿಯೂ ಕೂಡ ತೆರಿಗೆ ಮುಕ್ತವಾಗಿ ಔಷಧ ಸಿಗುತ್ತದೆ ಎಂದು ಅವರು ಹೇಳಿದರು.

ಪ್ರಜೆಗಳ ತಲಾ ಆದಾಯ ಹೆಚ್ಚಾದಾಗ ಅವನ ವಾರ್ಷಿಕ ಆದಾಯ ಕೂಡ ಹೆಚ್ಚಾಗುತ್ತದೆ. ಇದರಿಂದ ಅವನು ಆರ್ಥಿಕವಾಗಿ ಸ್ವಾವಲಂಬಿ ಆಗುತ್ತಾನೆ. ವ್ಯಕ್ತಿಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡುವುದಕ್ಕೆ ಜಿ.ಎಸ್‌.ಟಿ 2.0 ದೊಡ್ಡ ಕ್ರಾಂತಿಯನ್ನು ಮಾರುಕಟ್ಟೆಯಲ್ಲಿ ಸೃಷ್ಟಿಸಲಿದೆ. ರೈತರಿಗೆ ಅನುಕೂಲವಾಗಲಿ ಎಂದು ಕೃಷಿಗೆ ಸಂಬಂಧಿಸಿದ ಪರಿಕರಗಳ ಮೇಲೆ ಶೇ. 18 ರಷ್ಟು ಇದ್ದ ತೆರಿಗೆಯನ್ನು ಶೇ. 2ಕ್ಕೆ ಇಳಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ 48 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಕೆ.ಎನ್. ಸುಬ್ಬಣ್ಣ, ಮುಖಂಡರಾದ ಮಂಗಳಾ ಸೋಮಶೇಖರ್, ಗಿರಿಧರ್‌, ಕೇಬಲ್‌ ಮಹೇಶ್‌, ಮಹೇಶ್‌ರಾಜ್‌ಅರಸ್‌ ಮೊದಲಾದವರು ಇದ್ದರು.

---

ಬಾಕ್ಸ್‌ ಸುದ್ದಿಮಸೀದಿ, ಚರ್ಚ್‌ ಕೇವಲ ಮುಸ್ಲಿಮರಿಗೆ, ಕ್ರೈಸ್ತರಿಗೆ ಸೇರಿದ್ದಲ್ಲ ಎನ್ನಲಿ ನೋಡೋಣಕನ್ನಡಪ್ರಭ ವಾರ್ತೆ ಮೈಸೂರು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗೆ ತಾಕತ್ತಿದ್ದರೆ ಚಾಮುಂಡಿಬೆಟ್ಟ ಕೇವಲ ಹಿಂದೂಗಳಿಗೆ ಸೇರಿದ್ದಲ್ಲ ಎಂದಂತೆಯೇ ಮಸೀದಿಗಳು ಮುಸ್ಲಿಮರಿಗೆ ಮಾತ್ರ ಸೇರಿದ್ದಲ್ಲ, ಚರ್ಚುಗಳು ಕ್ರಿಶ್ಚಿಯನ್ನರಿಗೆ ಸೇರಿದ್ದಲ್ಲ ಎಂದು ಹೇಳಲಿ ನೋಡೋಣ ಎಂದು ಬಿಜೆಪಿ ಉಪಾಧ್ಯಕ್ಷ ಎನ್‌. ಮಹೇಶ್‌ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದ ರಕ್ಷಣೆಗಾಗಿ ನಡೆಯುವ ಯಾವುದೇ ಹೋರಾಟದಲ್ಲೂ ನಾವು ಭಾಗಿ ಆಗುತ್ತೇವೆ. ಹಿಂದೂ ಜಾಗರಣಾ ವೇದಿಕೆ ಕರೆ ನೀಡಿರುವ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತೇನೆ. ಬಿಜೆಪಿ ಕಾರ್ಯಕರ್ತರೂ ಪಾಲ್ಗೊಳ್ಳುತ್ತಾರೆ ಎಂದರು.

ಬಾನು ಮುಷ್ತಾಕ್‌ಆಯ್ಕೆ ವಿರೋಧಿಸಿ ನಡೆಯುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಎಲ್‌. ನಾಗೇಂದ್ರ ತಿಳಿಸಿದರು.