ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರದ ಪಂಚ ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮತ್ತು ಮೇಲ್ವಿಚಾರಣೆ ಮಾಡಲು ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿದ್ದು ಗ್ಯಾರಂಟಿ ಯೋಜನೆಗಳನ್ನು 100ಕ್ಕೆ 100ರಷ್ಟು ಕ್ಷೇತ್ರದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಮಿತಿ ಅಧ್ಯಕ್ಷರು, ಸದಸ್ಯರು ಶ್ರಮಿಸಬೇಕು ಎಂದು ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರ ಪದಗ್ರಹಣ ಹಾಗೂ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಬಡತನ ನಿರ್ಮೂಲನೆಗೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಆದರೆ ಕೆಲವರು ಇದರ ಬಗ್ಗೆ ಫಲಾನುಭವಿಗಳು, ವಿರೋಧಪಕ್ಷದವರು ಟೀಕೆ ಮಾಡುತ್ತಾರೆ. ಬೇಡದಿದ್ದರೆ ಬರೆದುಕೊಡಿ ಬೇರೆಯವರಿಗಾದರೂ ಉಪಯೋಗವಾಗುತ್ತದೆ ಎಂದರು. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ದಿವಾಳಿಯಾಗುತ್ತದೆ ಎಂದು ಹೇಳಿದ ಅವರು ಹರಿಯಾಣ ಕಾಶ್ಮೀರದಲ್ಲಿ ಘೋಷಣೆ ಮಾಡಿರುವುದು ಯಾಕೆ ಎಂದು ಪ್ರಶ್ನೆ ಮಾಡಿದರು. 10 ವರ್ಷದ ಆಡಳಿತದಲ್ಲಿ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತರಿಗೆ ಬೇಕಾದ ರಸಗೊಬ್ಬರಗಳ ಏರಿಕೆಯಿದ ರೈತಾಪಿ ವರ್ಗ ಯೋಚನೆ ಮಾಡುವಂತಾಗಿದೆ. ಗಾಂಧೀಜಿ ಹೇಳಿದಂತೆ ಶೇಕಡ 75ರಷ್ಟು ದೇಶದಲ್ಲಿ ಗ್ರಾಮೀಣ ಜನರಿದ್ದು ಅವರುಗಳ ಅಭಿವೃದ್ಧಿ ಆಗದೇ ದೇಶ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮನಗಂಡ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ತಿಂಗಳು 4ರಿಂದ 5 ಸಾವಿರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳು ಸುಳ್ಳುಗಳನ್ನು ಜಿಲ್ಲೆಯ ಪತ್ರಕರ್ತರ ಮುಂದೆ ಮಾತನಾಡುತ್ತಾರೆ. ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರು, ದೇವಸ್ಥಾನಗಳ ನಿರ್ಮಾಣ ಜೀರ್ಣೋದ್ಧಾರ, ಸಮುದಾಯ ಭವನಗಳು, ಸುಸಜ್ಜಿತವಾದ ರಸ್ತೆ, ವಿದ್ಯಾಸಂಸ್ಥೆಗಳು, ವಸತಿನಿಲಯಗಳು, ಎಂಜಿನಿಯರಿಂಗ್ ಕಾಲೇಜು ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ಮಾಡಿದಲ್ಲದೇ ಕೆಲವೇ ದಿನಗಳಲ್ಲಿ ಸತತ ಹೋರಾಟದ ಫಲವಾಗಿ ಎತ್ತಿನಹೊಳೆ ಯೋಜನೆ ಮೂಲಕ ತಾಲೂಕಿನ ಕೆರೆಗಳಿಗೆ ಹರಿಸಲಾಗುವುದು ಎಂದು ಹೇಳಿದರು.ಗ್ಯಾರಂಟಿ ಯೋಜನೆಗಳ ತಾಲೂಕು ಸಮಿತಿ ನೂತನ ಅಧ್ಯಕ್ಷ ಧರ್ಮಶೇಖರ್ ಮಾತನಾಡಿ, ಶಾಸಕರು ತಮ್ಮದೇ ಕಾರ್ಯವೈಖರಿಯ ಮೂಲಕ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದರಿಂದಲೇ ಸತತ 4 ಬಾರಿ ಶಾಸಕರಾಗಿ ಮತದಾರರು ಆಯ್ಕೆಮಾಡಿದ್ದಾರೆ. ನಮ್ಮ ನಿಮ್ಮೆಲ್ಲರ ಆಸೆ ಕೆ.ಎಂ.ಶಿವಲಿಂಗೇಗೌಡ ಸಚಿವರು ಆಗಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ.ಶಿವಕುಮಾರ್ ಭರವಸೆ ಮಾತು ಕೊಟ್ಟಿದ್ದಾರೆ ಅದರಂತೆ ಈಡೇರಬೇಕು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷ ಜವನಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಮೆಟ್ರೋಬಾಬು , ತಾಲೂಕು ಪಂಚಾಯಿತಿ ನಿರ್ವಹಣಾಧಿಕಾರಿ ಸತೀಶ್ , ಕಾಂಗ್ರೆಸ್ ಮುಖಂಡರಾದ ಗಂಜಿಗೆರೆ ಚಂದ್ರಶೇಖರ್, ಹನುಮಪ್ಪ, ನಗರಸಭೆ ಸದಸ್ಯ ವೆಂಕಟಮುನಿ ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.ಪೋಟೋ ಶೀರ್ಷಿಕೆ: ಅರಸೀಕೆರೆ ನಗರದ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರ ಪದಗ್ರಹಣ ಹಾಗೂ ಕಚೇರಿ ಉದ್ಘಾಟನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.