ಗ್ಯಾರಂಟಿಯಿಂದ ಜೀವನ ಮಟ್ಟ ಸುಧಾರಣೆ-ಪಾಟೀಲ್‌

| Published : Aug 29 2025, 01:00 AM IST

ಸಾರಾಂಶ

ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶಕ್ತಿ ಯೋಜನೆ ಮೂಲಕ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ಮಾಡಿದೆ ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ.ಪಾಟೀಲ್ ಹೇಳಿದರು.

ಡಂಬಳ: ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶಕ್ತಿ ಯೋಜನೆ ಮೂಲಕ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆ ಮಾಡಿದೆ ಎಂದು ರೋಣ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ.ಪಾಟೀಲ್ ಹೇಳಿದರು.

ಡಂಬಳದ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಹೋಬಳಿ ಮಟ್ಟದ ಗೃಹಲಕ್ಷ್ಮಿ 2 ಸಾವಿರ, ಅನ್ನಭಾಗ್ಯ 10 ಕೆಜಿ ಅಕ್ಕಿ, ಶಕ್ತಿ- ಉಚಿತ ಬಸ್ ಪ್ರಯಾಣ, ಗೃಹಜ್ಯೋತಿ- ಉಚಿತ ವಿದ್ಯುತ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಹಿಂದಿನ ಸರ್ಕಾರ ಜನತೆಗೆ ದುಬಾರಿ ಬದುಕು ನಡೆಸುವಂತೆ ಮಾಡಿತ್ತು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದಂತೆ ಪಂಚಗ್ಯಾರಂಟಿ ಜಾರಿಗೆ ತರುವುದರ ಮೂಲಕ ಬಡವರಿಗೆ, ಕೂಲಿಕಾರ್ಮಿಕರಿಗೆ, ವಿದ್ಯಾರ್ಥಿಗಳು, ಮಹಿಳೆಯರು ಆರ್ಥಿಕ ಪ್ರವಾಹಿನಿಗೆ ಬರಬೇಕು ಒಂದು ಉತ್ತಮ ಕುಟುಂಬ ಅವರದಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಜಾರಿಗೆ ತಂದು ಯಶಸ್ವಿಯಾಗಿ ಮುನ್ನಡೆಸಿ ಇದರಿಂದ ವಂಚಿತರಾದವರು ಸಂಬಂಧಿಸಿದ ಇಲಾಖೆಗೆ ಭೇಟಿ ನೀಡಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೊರನಾಳ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲ ಪ್ರತಿ ಬಡ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಬೇಕು, ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಶ್ರಮಿಸಿದ್ದು, ಈ ಗ್ಯಾರಂಟಿ ಯೋಜನೆಗಳಿಂದ ಬಿಪಿಎಲ್ ಕುಟುಂಬದವರು ಯಾವುದೇ ಕಾರಣಕ್ಕೂ ವಂಚಿತರಾಗಬಾರದು, ಅರ್ಹರೆಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪಬೇಕು. ಶೇ.100ರಷ್ಟು ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ಗ್ಯಾರಂಟಿ ಪ್ರಗತಿ ಪರಶೀಲನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಶೇ. 100ರಷ್ಟು ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬರಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ತಾಪಂ ಇಒಗಳು, ಪಿಡಿಒಗಳು ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಗಳ ಜೊತೆಗೂಡಿ ಮನೆ ಮನೆ ಸಮೀಕ್ಷೆ ಮಾಡಿ ಗ್ಯಾರಂಟಿ ಯೋಜನೆ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.

ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಹೇಮಂತಗೌಡ ಪಾಟೀಲ ಮಾತನಾಡಿದರು.

ಮುಂಡರಗಿಯಿಂದ ಗದಗ ಹೋಗುವ 6ಕ್ಕೂ ಹೆಚ್ಚು ಬಸ್‌ ನಾನ್‌ ಸ್ಟಾಪ್ ಇರುವುದರಿಂದ ಡಂಬಳ ಬಹು ದೊಡ್ಡ ಗ್ರಾಮ ಮತ್ತು ಗ್ರಾಮದಿಂದ ವಿವಿಧ ಗ್ರಾಮಸ್ಥರು ತೆರಳುತ್ತಿರುವ ಕಾರಣ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಬಸ್‌ಗಳನ್ನು ಗ್ರಾಮಕ್ಕೆ ಬಂದು ಹೋಗುವಂತಾಗಬೇಕು ಎಂದು ಗ್ರಾಮಸ್ಥರು ಬೇಡಿಕೆ ಇಟ್ಟರು. ಅದಕ್ಕೆ ಶೀಘ್ರದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಇಒ ವಿಶ್ವನಾಥ ಹೊಸಮನಿ, ಹುಸೇನಸಾಬ್‌ ಕಾತರಕಿ, ಸಿಡಿಪಿಒ ಮಹಾದೇವ ಇರಸನಾಳ, ಗ್ರಾಪಂ ಅಧ್ಯಕ್ಷೆ ನಾಗಮ್ಮ ಬಳ್ಳಾರಿ, ಗ್ಯಾರಂಟಿ ಸಮಿತಿ ಸದಸ್ಯ ರಾಮಣ್ಣ ಮೇಗಲಮನಿ, ನಾಗರಾಜ ಸಜ್ಜನ, ವಿಶ್ವನಾಥ ಪಾಟೀಲ, ಗೀತಾ ಕೆ. ನಾಡಗೌಡರ, ಭುವನೇಶ್ವರಿ ಕಲ್ಲಕುಟಿಗರ, ಕಾಶಪ್ಪ ಹೊನ್ನೂರ, ಗ್ರಾಮದ ಜಿ.ಎಸ್. ಕೊರ್ಲಹಳ್ಳಿ, ಬಸುರಡ್ಡಿ ಬಂಡಿಹಾಳ, ಮಹೇಶ ಗಡಗಿ, ಬಾಬು ಮೂಲಿಮನಿ, ಮಹಿಳೆಯರು, ಯುವಕರು, ಗ್ರಾಮಸ್ಥರು, ಗ್ರಾಪಂ ಸಿಬ್ಬಂದಿ ಇದ್ದರು.