ಬೇಡಿಕೆ ಈಡೇರಿಕೆಗಾಗಿ ಶಾಸಕರಿಗೆ ಅತಿಥಿ ಉಪನ್ಯಾಸಕರ ಮನವಿ

| Published : Feb 09 2024, 01:45 AM IST

ಸಾರಾಂಶ

ಹೊಸದುರ್ಗ ಪಟ್ಟಣದ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರು ಬಿ.ಜಿ.ಗೋವಿಂದಪ್ಪರಿಗೆ ಒತ್ತಾಯಿಸಿ, ಬೇಡಿಕೆ ಈಡೇರಿಸಬೇಕೆಂದು ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಾದ ತಮಗೆ ಸೇವಾ ಭದ್ರತೆ ಒದಗಿಸುವುದು ಸೇರಿ ಇನ್ನಿತರೆ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಹೊಸದುರ್ಗ ಪಟ್ಟಣದ ಪಿಯು ಕಾಲೇಜಿನ ಅತಿಥಿ ಉಪನ್ಯಾಸಕರು ಗುರುವಾರ ಶಾಸಕ ಬಿ.ಜಿ.ಗೋವಿಂದಪ್ಪ ಅವರಿಗೆ ಮನವಿ ಸಲ್ಲಿಸಿದರು.

ನಾವು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸಿದ್ದೇವೆ. ಈಗ ನಮ್ಮ ಗೌರವಧನ ಕೇವಲ ₹12,000 ಇದ್ದು, ಇದು ನಮ್ಮ ಕುಟುಂಬದ ನಿರ್ವಹಣೆಗೆ ಸಾಲುತ್ತಿಲ್ಲ. ಹಾಗಾಗಿ ನಮ್ಮ ಮಾಸಿಕ ಗೌರವಧನವನ್ನು ಕನಿಷ್ಠ ₹30 ಸಾವಿರಕ್ಕೆ ಏರಿಸಬೇಕು, ಸೇವಾ ಭದ್ರತೆ ಒದಗಿಸಬೇಕು. ಕಳೆದ ವರ್ಷ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಬೇಕು. ಕಾಯಂ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಕೃಪಾಂಕ ಶೇ.50ರಷ್ಟು, ಪ್ರತಿ ತಿಂಗಳ ಗೌರವಧನ ನೇರವಾಗಿ ಖಾತೆಗೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಪ್ರಕಾರ ವಾರಕ್ಕೆ 10ಗಂಟೆ ಕೆಲಸ, ವರ್ಷಪೂರ್ತಿ ವೇತನ, ಗುರುತಿನ ಚೀಟಿ ಮತ್ತು ಸೇವಾ ಪ್ರಮಾಣಪತ್ರ ನೀಡಬೇಕು. ನಮ್ಮ ಕಾಯಂ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದಂತೆ ಈಡೇರಿಸಬೇಕು. ಮೌಲ್ಯಮಾಪನ ಕಾರ್ಯದಲ್ಲಿ ನೇಮಿಸುವುದನ್ನು ಮುಂದುವರಿಸಬೇಕು. ಶಾಸಕರಾದ ತಾವುಗಳು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ಜಿ.ಗೋವಿಂದಪ್ಪ ಅವರು, ನಮ್ಮ ಸರ್ಕಾರ ಡಿಗ್ರಿ ಕಾಲೇಜು ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಿಸಿದೆ. ಅದೇ ರೀತಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರ ಈ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಸಚಿವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಎಂ.ಜಿ.ವಿಶ್ವನಾಥ್, ಅತಿಥಿ ಉಪನ್ಯಾಸಕರಾದ ಸುಧಾ ಸುರೇಶ್, ಚಂದನ, ರಂಜಿತ, ದೀಪಶ್ರೀ, ಶೃತಿ, ಕವಿತಾ, ಮಂಜುನಾಥ್, ಪ್ರವೀಣ್, ದ್ಯಾಮಣ್ಣ, ನಾಗರಾಜು ಇನ್ನಿತರ ಸಿಬ್ಬಂದಿ, ಕಾಂಗ್ರೆಸ್ ಮುಖಂಡರು ಹಾಜರಿದ್ದರು.