ಸಾರಾಂಶ
ಹೊಸಕೋಟೆ: ಯಾವುದೇ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಆಯಾ ಸಮುದಾಯದ ಗುರುಗಳ ಮಾರ್ಗದರ್ಶನ ಅಗತ್ಯ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಬೆಸ್ತರ ಪೇಟೆಯಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಸಕೋಟೆಯಲ್ಲಿ ಚನ್ನಭೈರೇಗೌಡರ ಕಾಲದಿಂದಲೂ ಬೆಸ್ತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡುತ್ತಾ ಬಂದಿದ್ದು, ನಮ್ಮ ತಂದೆ ಬಚ್ಚೇಗೌಡ ನಂತರ ನಾನು ಕೂಡ ಶಾಸಕನಾಗಿ ಬೆಸ್ತ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಹಾಗೆಯೇ ಹಲವಾರು ದಶಕಗಳ ಬೇಡಿಕೆ ಪರಿಣಾಮವಾಗಿ ಬೆಸ್ತರ ಪೇಟೆಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಮುಖಂಡರ ಬೇಡಿಕೆಯಂತೆ ಕಸಬಾ ಹೋಬಳಿ ಭಾಗದಲ್ಲಿ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು ಎಂದರು.ಹಾವೇರಿ ಜಿಲ್ಲೆ ಸುಕ್ಷೇತ್ರ ನರಸೀಪುರ ನಿಜಶರಣ ಅಂಬಿಗರ ಚೌಡಯ್ಯ ಗುರು ಪೀಠಾಧ್ಯಕ್ಷ ಶ್ರೀ ಜಗದ್ಗುರು ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಶರಣರ ಪುತ್ಥಳಿಗಳನ್ನು ಪ್ರತಿಷ್ಠಾಪನೆ ಮಾಡುವುದು ಜಾತಿಗಳ ಓಲೈಕೆ ಸೂಚಕವಲ್ಲ. ಬದಲಾಗಿ ಅವರ ತತ್ವಾದರ್ಶಗಳು, ಅವರ ವಚನಗಳ ಪರಿಕಲ್ಪನೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉದ್ದೇಶ. ಪ್ರಮುಖವಾಗಿ ಬೆಸ್ತ ಸಮುದಾಯ ರಾಜಕೀಯವಾಗಿ ಹಿಂದುಳಿದಿದ್ದು ಅವಕಾಶಗಳನ್ನ ಪಡೆದುಕೊಳ್ಳಬೇಕಾಗಿದೆ. ಅಲ್ಲದೆ ಅಂಬಿಗರ ಚೌಡಯ್ಯ ಐಕ್ಯ ಮಂಟಪ ಅಭಿವೃದ್ಧಿಗೆ ಸರ್ಕಾರಗಳಿಗೆ ಮನವಿ ಮಾಡಿದರೂ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಿದೆ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ಬೆಸ್ತ ಸಮುದಾಯ ರಾಜ್ಯದಲ್ಲಿ ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದೆ. ಪಕ್ಷಾತೀತವಾಗಿ ಸವಲತ್ತು ಪಡೆದುಕೊಳ್ಳುವ ದೃಷ್ಟಿಯಿಂದ ಹೋರಾಟ ಮಾಡಬೇಕಿದೆ. ಯಾವುದೇ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ರಾಜಕೀಯ ಶಕ್ತಿ ಅಗತ್ಯ. ಮುಂದಿನ ದಿನಗಳಲ್ಲಿ ಅದನ್ನು ಪಡೆದುಕೊಳ್ಳಬೇಕು ಎಂದರು.ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮಾತನಾಡಿ, ಅಂಬಿಗರು 12ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಇದ್ದ ಸಂದರ್ಭದಲ್ಲಿ ಬಸವಣ್ಣನವರ ಸಮಕಾಲೀನರಾಗಿ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದವರು. ಅನುಭವ ಮಂಟಪದಲ್ಲಿ ಕಟ್ಟಿ 63 ಜಾತಿಗಳ ಧರ್ಮಗಳ ಸಂಸತ್ ಮಾಡಿದ ಕೀರ್ತಿ ದಾರ್ಶನಿಕರಿಗೆ ಸಲ್ಲಲಿದೆ. ಬೆಸ್ತ ಸಮಾಜದಲ್ಲಿ ಹಲವಾರು ಸಮಸ್ಯೆಗಳಿವೆ. ರಾಜ್ಯದ 70 ವಿಧಾನಸಭಾ ಕ್ಷೇತ್ರದಲ್ಲಿ ನಾವೇ ನಿರ್ಣಾಯಕರಾಗಿದ್ದರೂ 10 ಶಾಸಕರು, 2 ಸಂಸದರನ್ನು ಪಡೆಯಲು ಆಸಮರರ್ಥರಾಗಿದ್ದೇವೆ. ಇದರ ಪರಿಣಾಮ ರಾಜಕೀಯ ನಿರ್ಲಕ್ಷ್ಯವೇ ಕಾರಣ ಎಂದರು.
ಈ ವೇಳೆ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಗಂಗಾಧರ್, ಬಿಎಂಆರ್ ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾಜ್, ಜನನಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಜಯರಾಜ್, ಜಿಪಂ ಮಾಜಿ ಸದಸ್ಯ ವೈಎಸ್ ಮಂಜುನಾಥ್, ನಗರಸಭೆ ಸದಸ್ಯ ಗೌತಮ್, ಮುಖಂಡರಾದ ಸಂದೀಪ್, ಸುಭಾಶ್, ಮೋಹನ್ ಕುಮಾರ್, ಧರ್ಮಪ್ಪ, ಶಿವಣ್ಣ, ಗೋಪಿ, ವೇಣು ಗೋಪಾಲ್, ಚಂದ್ರಶೇಖರ, ಉದಯ್ ಕುಮಾರ್ ಹಾಜರಿದ್ದರು.ಬಾಕ್ಸ್..........
ಬೆಸ್ತರನ್ನ ಎಸ್ಟಿಗೆ ಸೇರಿಸಿ:ಸುಮಾರು 40 ವರ್ಷಗಳಿಂದ ಬೆಸ್ತ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಲು ಒತ್ತಾಯ ಮಾಡುತ್ತಿದ್ದರೂ ಸಹ ಸರ್ಕಾರ ಅದರ ಗೋಜಿಗೆ ಹೋಗಿಲ್ಲ. ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ಕಡತ ಹೋಗಿ ವಾಪಸ್ ಬಂದಿದೆ. ಅಲ್ಲದೆ ವಿಧಾನಸೌಧದ ಮುಂಭಾಗದಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಬದಲಾಗಿ ಬೆಳಗಾವಿ ಸುವರ್ಣಸೌಧದ ಮುಂದೆ ಸ್ಥಾಪಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ಈ ವಿಚಾರವಾಗಿ ಶಾಸಕರು ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಬೇಕು ಎಂದು ಕೋಲಿ ಗಂಗಮತಸ್ತ ಸಮುದಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಮೋಹನ್ ಕುಮಾರ್ ಆಗ್ರಹಿಸಿದರು.
ಫೋಟೋ: 5 ಹೆಚ್ ಎಸ್ ಕೆ 1 ಮತ್ತು 21.ಹೊಸಕೋಟೆ ನಗರದ ಬೆಸ್ತರ ಪೇಟೆಯಲ್ಲಿ ನಿಜ ಶರಣ ಅಂಬಿಗರ ಚೌಢಯ್ಯ ಪ್ರತಿಮೆಯನ್ನು ಶಾಸಕ ಶರತ್ ಬಚ್ಚೇಗೌಡ ಅನಾವರಣ ಮಾಡಿದರು.
2. ಅಂಬಿಗರ ಚೌಡಯ್ಯ ಪ್ರತಿಮೆಗೆ ಶಾಸಕ ಶರತ್ ಬಚ್ಚೇಗೌಡ ಮಾಲಾರ್ಪಣೆ ಮಾಡಿದರು.