ಗುಲ್ಬರ್ಗ ಎಂಪಿ ಚುನಾವಣೆ ಮತ ಎಣಿಕೆಗೆ ಸಜ್ಜು: ಜಿಲ್ಲಾಧಿಕಾರಿ

| Published : Jun 02 2024, 01:46 AM IST

ಗುಲ್ಬರ್ಗ ಎಂಪಿ ಚುನಾವಣೆ ಮತ ಎಣಿಕೆಗೆ ಸಜ್ಜು: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಗುಲ್ಬರ್ಗ ಲೋಕಸಭಾ (ಪ.ಜಾ) ಮೀಸಲು ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಇದೇ ಜೂ.4ರಂದು ಬೆ.8 ಗಂಟೆಯಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ವಿವಿಧ ವಿಭಾಗದಲ್ಲಿ ಆರಂಭವಾಗಲಿದ್ದು, ಬೆಳಗ್ಗೆ 6ರಿಂದ ಸ್ಟ್ರಾಂಗ್ ರೂಂ ತೆರೆಯುವ ಕಾರ್ಯ ನಡೆಯಲಿದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಗುಲ್ಬರ್ಗಾ ಲೋಕಸಭಾ (ಪ.ಜಾ) ಮೀಸಲು ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಇದೇ ಜೂ.4ರಂದು ಬೆ.8 ಗಂಟೆಯಿಂದ ಗುಲ್ಬರ್ಗ ವಿಶ್ವವಿದ್ಯಾಲಯದ ವಿವಿಧ ವಿಭಾಗದಲ್ಲಿ ಆರಂಭವಾಗಲಿದ್ದು, ಬೆಳಗ್ಗೆ 6ರಿಂದ ಸ್ಟ್ರಾಂಗ್ ರೂಂ ತೆರೆಯುವ ಕಾರ್ಯ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಶನಿವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗುಲ್ಬರ್ಗ ವಿ.ವಿ.ಯ ಗಣಿತ ವಿಭಾಗದ ಭಾಸ್ಕರ್ ಹಾಲ್‍ನಲ್ಲಿ ಅಫಜಲಪೂರ, ಪರೀಕ್ಷಾ ಕೇಂದ್ರದಲ್ಲಿ ಚಿತ್ತಾಪುರ, ಗುಲಬರ್ಗಾ ಗ್ರಾಮೀಣ ಹಾಗೂ ಪರೀಕ್ಷಾ ಕೇಂದ್ರದ ಸೆಲುಲಾರ್ ಹಾಲ್‍ನಲ್ಲಿ ಜೇವರ್ಗಿ, ಇಂಡೋರ್ ಸ್ಟೇಡಿಯಂನಲ್ಲಿ ಗುರುಮಠಕಲ್ ಮತ್ತು ಗುಲಬರ್ಗಾ ಉತ್ತರ, ಕನ್ನಡ ವಿಭಾಗದ ಹರಿಹರ ಸಭಾಂಗಣದಲ್ಲಿ ಸೇಡಂ ಹಾಗೂ ಸಸ್ಯಶಾಸ್ತ್ರ ವಿಭಾಗದ ಬೋಸ್ ಸಭಾಂಗಣದಲ್ಲಿ ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 14 ಟೇಬಲ್‍ಗಳನ್ನು ಮತ ಎಣಿಕೆಗೆ ಹಾಕಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಎಣಿಕೆ ಮೇಲ್ವಿಚಾರಕರು, ಓರ್ವ ಎಣಿಕೆ ಸಹಾಯಕರು ಹಾಗೂ ಓರ್ವ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ ಎಂದರು.

ಪ್ರತಿ ವಿದಾನಸಭಾ ಕ್ಷೇತ್ರವಾರು ಮತ ಎಣಿಕೆ 14 ಟೇಬಲ್‍ಗಳಿಗೆ 14 ಕೌಂಟಿಂಗ್ ಏಜೆಂಟ್‍ಗಳನ್ನು ಆಯಾ ಅಭ್ಯರ್ಥಿಗಳು ನೇಮಿಸಲು ಅವಕಾಶ ನೀಡಿದ್ದು, ಸದರಿ ಕೌಂಟಿಂಗ್ ಏಜೆಂಟ್‍ಗಳು ಪೆನ್, ಸಿಂಪಲ್ ಕ್ಯಾಲ್ಕುಲೇಟರ್ ಹಾಗೂ ಪೇಪರ್ ಮಾತ್ರ ತರಲು ಅವಕಾಶ ನೀಡಲಾಗಿದೆ.

ಮಾಧ್ಯಮದವರಿಗೆ ಕ್ಷಣ-ಕ್ಷಣಕ್ಕೆ ಮಾಹಿತಿ: ಪ್ರತಿ ಸುತ್ತಿನ ಮತ ಎಣಿಕೆ ನಂತರ ಆಯಾ ಅಭ್ಯರ್ಥಿಗಳು ಪಡೆದ ಮತಗಳ ವಿವರವನ್ನು ಮಾಧ್ಯಮದವರಿಗೆ ಕ್ಷಣ-ಕ್ಷಣಕ್ಕೆ ಮಾಹಿತಿ ನೀಡಲು ವ್ಯವಸ್ಥೆ ಮಾಡಿದ್ದು, ಇದಕ್ಕಾಗಿ ಪ್ರಾಣಿಶಾಸ್ತ್ರ ಸಭಾಂಗಣದಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಿದೆ. ಇಲ್ಲಿ ಎನ್.ಐ.ಸಿ. ಸ್ಕ್ರೀನ್ ಮೂಲಕ ಎಣಿಕೆಯ ಸಂಪೂರ್ಣ ಅಪಡೇಟ್ ಮಾಹಿತಿ ಲಭ್ಯವಾಗಲಿದೆ ಎಂದು ಡಿ.ಸಿ. ತಿಳಿಸಿದರು.

ಮೊಬೈಲ್ ಫೋನ್ ಬ್ಯಾನ್: ಮತ ಎಣಿಕೆ ಕೇಂದ್ರಕ್ಕೆ ಹಾನಿಕಾರಕ ಸೇವನೆಗಳಾದ ವಿವಿಧ ರೀತಿಯ ತಂಬಾಕು, ಗುಟಕಾ, ಬೀಡಿ, ಸಿಗರೇಟ್, ಬೆಂಕಿ ಪೊಟ್ಟಣ, ಲೈಟರ್ ಹಾಗೂ ಮದ್ಯಪಾನಗಳು, ವಿದ್ಯುನ್ಮಾನ ಯಂತ್ರಗಳಾದ ಸ್ಮಾರ್ಟ್ ವಾಚ್, ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್ ಹಾಗೂ ಮಾರಕಾಸ್ತ್ರಗಳಾದ ಗನ್, ಖಡ್ಗ, ಚಾಕು, ಚೂರಿ ಇತರೆ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.

ಎಣಿಕೆ ಕೇಂದ್ರ ಸುತ್ತ 144 ಜಾರಿ: ಮತ ಎಣಿಕೆ ದಿನದಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮತಗಟ್ಟೆ ಸುತ್ತಮುತ್ತ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೆ ಜೂನ್ 3ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 4ರ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ಸಹ ನಿಷೇಧಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಇದ್ದರು.