ಗುಂಡ್ಲುಪೇಟೆ ಪುರಸಭೆ ಸದಸ್ಯರ ಮನೆಗೆ ಬಿಜೆಪಿಗರ ಮುತ್ತಿಗೆ

| Published : Sep 04 2024, 01:55 AM IST

ಗುಂಡ್ಲುಪೇಟೆ ಪುರಸಭೆ ಸದಸ್ಯರ ಮನೆಗೆ ಬಿಜೆಪಿಗರ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ವರು ಬಿಜೆಪಿ ಪುರಸಭೆ ಸದಸ್ಯರನ್ನು ಕಾಂಗ್ರೆಸ್‌ ಹಾಗೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೈಜಾಕ್‌ ಮಾಡಿದ್ದಾರೆ ಎಂದು ಆರೋಪಿಸಿ ಗುಂಡ್ಪುಏಟೆ ಪುರಸಭೆ ಸದಸ್ಯ ಕಿರಣ್‌ ಗೌಡರ ಮನೆ ಮುಂದೆ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ನಾಲ್ವರು ಬಿಜೆಪಿ ಪುರಸಭೆ ಸದಸ್ಯರನ್ನು ಕಾಂಗ್ರೆಸ್‌ ಹಾಗೂ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೈಜಾಕ್‌ ಮಾಡಿದ್ದಾರೆ ಎಂದು ಆರೋಪಿಸಿ ಪುರಸಭೆ ಸದಸ್ಯ ಕಿರಣ್‌ ಗೌಡರ ಮನೆ ಮುಂದೆ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ ಸದಸ್ಯರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ಹೊರ ಹಾಕಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್‌, ಎಲ್‌.ಸುರೇಶ್‌, ಮಂಡಲ ಅಧ್ಯಕ್ಷ ಮಹದೇವಪ್ರಸಾದ್‌ ನೇತೃತ್ವದಲ್ಲಿ ಪಟ್ಟಣದ ಹಳೇ ಬಸ್‌ ನಿಲ್ದಾಣದಿಂದ ಮೆರವಣಿಗೆಯ ಮೂಲಕ ಪುರಸಭೆ ಸದಸ್ಯ ಕಿರಣ್‌ ಗೌಡರ ಮನೆಯ ಮುಂದೆ ಧರಣಿ ಕುಳಿತು ಪುರಸಭೆ ಬಿಜೆಪಿಯ ನಾಲ್ವರು ಸದಸ್ಯರು ಹಾಗು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಮಾತನಾಡಿ, ಬಿಜೆಪಿ ಪಕ್ಷದ ತೀರ್ಮಾನದಂತೆ ನಾಲ್ವರು ಬಿಜೆಪಿ ಸದಸ್ಯರು ನಡೆದುಕೊಳ್ಳಿ ಬುಧವಾರ ತನಕ ಅವಕಾಶವಿದೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬೇಕಾದರೆ ಮಾತನಾಡಿ ಎಂದು ಸಲಹೆ ನೀಡಿದರು. ನೂರಾರು ಬಿಜೆಪಿ ಕಾರ್ಯಕರ್ತರು ನಿಮ್ಮನ್ನು ಗೆಲ್ಲಿಸಿದ್ದಾರೆ. ಕಾರ್ಯಕರ್ತರು ಧಿಕ್ಕಾರದ ನಡುವೆಯೂ ಕಾಂಗ್ರೆಸ್‌ಗೆ ಹೋಗಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅಲ್ಲದೆ ಕೂಡಲೇ ಬಂದು ನಿಮ್ಮ ಬೇಡಿಕೆ ನಮ್ಮ ಬಳಿ ಹೇಳಿ, ಬಿಜೆಪಿಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗೆ ಮತ ಚಲಾಯಿಸಿ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್‌ ಮಾತನಾಡಿ, ನಾಲ್ವರು ಬಿಜೆಪಿ ಸದಸ್ಯರು ಬಿಜೆಪಿ ಚಿಹ್ನೆಯಲ್ಲಿ ಗೆದ್ದಿದ್ದೀರಿ, ಕಾಂಗ್ರೆಸ್‌ ಹೋಗಬೇಕಾದರೆ ಪಕ್ಷಕ್ಕೆ ಹಾಗೂ ಪುರಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಪಕ್ಷದಿಂದಾಚೆಗೆ ಹೋಗಿ ಎಂದು ಗುಡುಗಿದರು. ಕಾಂಗ್ರೆಸ್‌ ಆಸೆ, ಆಮಿಷಗಳಿಗೆ ಬಲಿಯಾಗಿ ಕೆಲ ಸದಸ್ಯರು ಕಾಂಗ್ರೆಸ್‌ ಜೊತೆ ಹೋಗಿದ್ದೀರಾ, ಹಣದ ಜೊತೆಗೆ ಕೆಲ ಸದಸ್ಯರ ಕಳ್ಳ ವ್ಯವಹಾರಗಳಿಗೆ ಕಾಂಗ್ರೆಸ್‌ ಆಶೀರ್ವಾದ ಮಾಡಿದೆ. ಇಬ್ಬರು ಥರ್ಡ್‌ ಕ್ಲಾಸ್‌ ಸದಸ್ಯರ ಕಳ್ಳ ವ್ಯವಹಾರಗಳಿಗೆ ಕಾಂಗ್ರೆಸ್‌ ಹೊರಟಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯರಾದ ನಾಗೇಶ್‌, ಎಸ್.ಕುಮಾರ್‌, ರಂಗಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ಸೋಮಶೇಖರ್‌, ಮುಖಂಡರಾದ ನವೀನ್‌ ಮೌರ್ಯ, ಕಬ್ಬಹಳ್ಳಿ ರೇವಣ್ಣ ಸೇರಿದಂತೆ ನೂರಾರು ಮಂದಿ ಇದ್ದರು.

ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ

ಮಾತನಾಡೋ ನೈತಿಕತೆ ಇಲ್ಲ

ಕಾಂಗ್ರೆಸ್‌ಗೆ ಸಂವಿಧಾನ ಉಳಿಸುವುದೇ ನಮ್ಮ ಕೆಲಸ ಎನ್ನುತ್ತಾರೆ. ಆದರಿಲ್ಲಿ ಸಂವಿಧಾನದಡಿ ಆಯ್ಕೆಯಾದ ಬಿಜೆಪಿ ಸದಸ್ಯರನ್ನು ಹೈಜಾಕ್‌ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಸಂವಿಧಾನದ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ಟೀಕಿಸಿದರು.ಪ್ರತಿಭಟನೆಯಲ್ಲಿ ಮಾತನಾಡಿ, ಬಿಜೆಪಿ ಸದಸ್ಯರಾದ ಕಿರಣ್‌ ಗೌಡ, ನವೀದ್‌ ಖಾನ್‌ ಸ್ಥಳೀಯ ಶಾಸಕರ ಕುರಿತು ಬಾಯಿಗೆ ಬಂದಂತೆ ತುಚ್ಛವಾಗಿ ಮಾತನಾಡಿದ ಸದಸ್ಯರಿಗೆ ಅಧಿಕಾರ ಕೊಡುತ್ತೇನೆ ಎಂದು ಹೊರಟವರ ಬಗ್ಗೆ ಏನು ಹೇಳೋದು ಎಂದು ವ್ಯಂಗವಾಡಿದರು. ಕಾಂಗ್ರೆಸ್‌ನ ಯೋಗ್ಯತೆಗೆ ಕೇವಲ ೮ ಸದಸ್ಯರು ಗೆದ್ದಿದ್ದರು. ವಿಪಕ್ಷದಲ್ಲಿ ಕೂರಬೇಕಿತ್ತು. ಈಗ ಕಾಂಗ್ರೆಸ್‌ ಶಾಸಕರು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಇದನ್ನು ಪಟ್ಟಣದ ಜನತೆ ಗಮನಿಸುತ್ತಿದ್ದಾರೆ ಎಂದರು.ಪುರಸಭೆ ಕಚೇರಿಯೊಳಗೆ ಬಿಡಲ್ಲ

ಬಿಜೆಪಿ ಪಕ್ಷದಲ್ಲಿ ಗೆದ್ದು ಪಕ್ಷಾಂತರ ಮಾಡಲು ಹುನ್ನಾರ ನಡೆಸಿದ ಬಿಜೆಪಿ ಪುರಸಭೆ ಸದಸ್ಯರನ್ನು ಪುರಸಭೆ ಕಚೇರಿಯೊಳಗೆ ಬಿಡಲು ನಾವು ಬಿಡುವುದಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್‌ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸದಸ್ಯರು ಬಿಜೆಪಿಗೆ ರಾಜೀನಾಮೆ ನೀಡಿ ಹೊರ ಹೋಗಲಿ. ಅದು ಬಿಟ್ಟು ಬಿಜೆಪಿಯಲ್ಲಿ ಗೆದ್ದು ಚುನಾವಣೆ ಬಂದ ಸದಸ್ಯರನ್ನು ಪುರಸಭೆ ಕಚೇರಿಯೊಳಗೆ ಬರದಂತೆ ತಡೆಯಲಾಗುವುದು ಎಂದರು.